ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ಅಥವಾ ಹಸ್ತಾಂತರ ಮಾಡುವ ಅಧಿಕಾರ ಮೈಷುಗರ್ ಕಂಪನಿ ಅಧ್ಯಕ್ಷರಿಗಿಲ್ಲ, ಶಾಲೆಯನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಮೈಷುಗರ್ ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಕೆ.ಟಿ.ಶ್ರೀಕಂಠೇಗೌಡ ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಕಂಪನಿಯ ಅಧ್ಯಕ್ಷರು ಕಾರ್ಖಾನೆಗೆ ಒಪ್ಪಿಗೆಯಾದ ಕಬ್ಬನ್ನು ಪಡೆದು ನುರಿಸುವುದಷ್ಟೇ ಅವರ ಕೆಲಸ. ಅದು ಬಿಟ್ಟು ಮೈಷುಗರ್ ಶಾಲೆಯನ್ನು ಖಾಸಗೀಕರಣಗೊಳಿಸುವ ಅಧಿಕಾರ ಮೈಷುಗರ್ ಅಧ್ಯಕ್ಷರಿಗಿಲ್ಲ ಎಂದರು.

ಮಂಡ್ಯದಲ್ಲಿ ಕಾರ್ಮೆಲ್ ಕಾನ್ವೆಂಟ್ ಹಾಗೂ ೧೯೪೯ರಲ್ಲಿ ಆರಂಭಗೊಂಡ ಪ್ರಪ್ರಥಮ ಶಾಲೆಯಾದ ಮೈಷುಗರ್ ಪ್ರೌಢಶಾಲೆ ಮಾತ್ರ ಸರ್ಕಾರದ ಅನುದಾನಿತ ಶಾಲೆಯಾಗಿದ್ದು, ಈಗಾಗಲೇ ೩ ಶಿಕ್ಷಕರಿಗೆ ಸರ್ಕಾರದಿಂದಲೇ ೪ ಮಂದಿ ಹೆಚ್ಚುವರಿ ಶಿಕ್ಷಕರನ್ನು ಶೀಘ್ರದಲ್ಲಿಯೇ ನಿಯೋಜಿಸಲಿದೆ. ಇವರಿಗೆ ಸರ್ಕಾರವೇ ವೇತನ ನೀಡಲಿದ್ದು, ಖಾಸಗಿಯವರಿಗೆ ವಹಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಮೈಷುಗರ್ ಕಂಪನಿಯ ಅಧ್ಯಕ್ಷರು ಸರಬರಾಜು ಮಾಡುವ ಹಾಗೂ ಕಾರ್ಖಾನೆಯಿಂದ ನುರಿಯಲಾಗುವ ಕಬ್ಬಿಗೆ ರೈತರಿಂದ ೪ ರೂ ಕಂಪನಿಯಿಂದ ೪ ರೂ ಒಟ್ಟು ೮ರೂಗಳನ್ನು ಶಾಲೆಗೆ ನೀಡಬೇಕಿದೆಯಷ್ಟೆ. ಶಾಲೆಯನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಸಲುವಾಗಿ ಈಗಾಗಲೇ ಆಡಳಿತ ಮಂಡಳಿಯ ಮೂರು ಸಭೆಗಳನ್ನು ಮಾಡಿದ್ದು, ಶಾಲೆ ಪರಭಾರೆ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಸರಿಯಾಗಿ ಕಬ್ಬು ನುರಿಯಲಾಗಿಲ್ಲವೆಂದು ಕಂಪನಿಯಿಂದ ಶಾಲೆಗೆ ನೀಡಬೇಕಾದ ಹಣ ನೀಡದ ಇವರು ಶಾಲೆಯ ೧೪ ಎಕರೆ ಆಸ್ತಿಯಲ್ಲಿ ಕ್ರಿಕೆಟ್ ಅಕಾಡೆಮಿಗೆ ವರ್ಷಕ್ಕೆ ೫೦ ಸಾವಿರ ಪಡೆದು ಸ್ಥಳ ನೀಡಿದ್ದು, ಕಿಕ್ಬ್ಯಾಕ್ ಪಡೆಯುತ್ತಿದ್ದಾರೆ. ಇದೀಗ ಶಾಲೆಯನ್ನು ಖಾಸಗಿಯವರಿಗೆ ಪರಭಾರೆ ಮಾಡಿ ಎಷ್ಟು ಹಣ ಕಿಕ್ಬ್ಯಾಕ್ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂದು ಮರು ಪ್ರಶ್ನೆಹಾಕಿದರು.
ಸಚಿವ ಎನ್.ಚಲುವರಾಯಸ್ವಾಮಿ ಅವರು ಸಕ್ಕರೆ ಕಾರ್ಖಾನೆ ವಿಷಯವಾಗಿ ಖಾಸಗಿಯವರಿಗೆ ನೀಡಿದರೆ ಖಾಸಗೀಕರಣ ಮಾಡಿದಂತಾಗುತ್ತದೆ ಎಂದಿದ್ದು, ಕಂಪನಿ ಅಧ್ಯಕ್ಷ ಖಾಸಗಿಯವರಿಗೆ ಪರಭಾರೆ ಮಾಡುತ್ತಿರುವುದನ್ನು ಏಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಿದ ಅವರು, ಕಂಪನಿ ಅಧ್ಯಕ್ಷರಿಗೆ ಶಾಲೆಯ ನಿರ್ವಹಣೆ ಸಾಧ್ಯವಾಗದಿದ್ದರೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಶಾಲೆಯ ಶ್ರಯೋಭಿವೃದ್ಧಿ ಹಿರಿಯ ವಿದ್ಯಾರ್ಥಿಗಳ ಸಂಘ ಕಾರ್ಯದರ್ಶಿ ಸತ್ಯನಾರಾಯಣಮೂರ್ತಿ ವರಹ. ಸಿಐಟಿಯು ಸಿ.ಕುಮಾರಿ, ಕನ್ನಡಸೇನೆ ಮಂಜುನಾಥ್, ಗಿರೀಶ್, ತುಳಸೀಧರ್ ಹಾಗೂ ವೇಣುಗೋಪಾಲ್ ಇತರರಿದ್ದರು.




