Tuesday, May 21, 2024

ಪ್ರಾಯೋಗಿಕ ಆವೃತ್ತಿ

ಇತಿಹಾಸ ಸೃಷ್ಟಿಸಿದ ನಾಡಪ್ರಭು ಕೆಂಪೇಗೌಡ : ಗಣಿಗ ರವಿಕುಮಾರ್

ಕೆಲವರು ಇತಿಹಾಸವನ್ನು ಓದುತ್ತಾರೆ. ಇನ್ನು ಕೆಲವರು ಇತಿಹಾಸವನ್ನು ಸೃಷ್ಟಿ ಮಾಡುತ್ತಾರೆ. ಬೆಂಗಳೂರು ನಗರವನ್ನು ನಿರ್ಮಾಣ ಮಾಡುವ ಮೂಲಕ ಕೆಂಪೇಗೌಡರು ಇತಿಹಾಸ ಸೃಷ್ಟಿ ಮಾಡಿದ್ದು, ಇಂದಿಗೂ ಬೆಂಗಳೂರಿನಲ್ಲಿ ಕೋಟ್ಯಾಂತರ ಉದ್ಯೋಗ ಸೃಷ್ಟಿಯಾಗಿರುವುದಕ್ಕೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರೇ ಕಾರಣ ಎಂದು ಶಾಸಕ ಗಣಿಗ ರವಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೂರದೃಷ್ಟಿ ಹೊಂದಿದ್ದ ಕೆಂಪೇಗೌಡರು ಈ ಸೃಷ್ಟಿಯಲ್ಲಿರುವ ಎಲ್ಲಾ ಸಮುದಾಯದವರು ಶಾಂತಿ-ಸಹಬಾಳ್ವೆಯಿಂದ ಬದುಕಬೇಕೆಂದು ಹಲವಾರು ಪೇಟೆಗಳನ್ನು ನಿರ್ಮಾಣ ಮಾಡಿದರು. ನಗರ್ತ ಪೇಟೆ,ಚಿಕ್ಕಪೇಟೆ, ಬಿನ್ನಿಪೇಟೆ,ಬಳೆಪೇಟೆ ಎಂಬ ಹಲವಾರು ಪೇಟೆಗಳನ್ನು ನಿರ್ಮಿಸುವ ಮೂಲಕ ವಾಣಿಜ್ಯ,ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದರು. ಕೆಂಪೇಗೌಡರ ಅಭಿವೃದ್ಧಿ ಕಾರ್ಯಗಳು ಇಂದಿಗೂ ಕೂಡ ಅವಿಸ್ಮರಣೀಯ. ಕೆಂಪೇಗೌಡರ ದೂರ ದೃಷ್ಟಿ ಯಿಂದ ನಿರ್ಮಾಣಗೊಂಡ ಬೆಂಗಳೂರು ಇಂದಿಗೂ ಕೋಟ್ಯಾಂತರ ಮಂದಿಗೆ ಉದ್ಯೋಗ ನೀಡಿದೆ ಎಂದರು.

nudikarnataka.com

500 ಕೋಟಿಗೆ ಮನವಿ
ರಾಜ್ಯದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿಯವರು ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಮಂಡ್ಯ ನಗರಕ್ಕೆ ಮೆಡಿಕಲ್ ಕಾಲೇಜು, ಬಸ್ ನಿಲ್ದಾಣದಂತಹ ಹಲವು ಅಭಿವೃದ್ಧಿ ಕಾರ್ಯಗಳನ್ನು ತಂದರು. ಈ ಬಾರಿಯೂ ಚಲುವರಾಯಸ್ವಾಮಿಯವರ ನೇತೃತ್ವದಲ್ಲಿ ಈಗಾಗಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 500 ಕೋಟಿ ಹಣ ನೀಡುವಂತೆ ಮನವಿ ಮಾಡಿದ್ದೇವೆ.

ಮಂಡ್ಯ ಸುತ್ತಮುತ್ತ 500 ಎಕರೆ ಜಾಗವಿದ್ದು ಇದನ್ನು ಭೂ ಸ್ವಾಧೀನ ಮಾಡಿಕೊಂಡು ನಿವೇಶನಗಳನ್ನು ಹಂಚುವ ಮೂಲಕ ಹೊಸ ಬಡಾವಣೆ ರೂಪಿಸಬೇಕು. ರಿಂಗ್ ರೋಡ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಕಲಾಮಂದಿರ ನವೀಕರಣ
ಕಲಾಮಂದಿರ ನವೀಕರಣಕ್ಕೆ 65 ಲಕ್ಷ ರೂಪಾಯಿ ಮಂಜೂರಾಗಿದ್ದು, ನಿರ್ಮಿತಿ ಕೇಂದ್ರದಿಂದ ಶೀಘ್ರ ಕಲಾಮಂದಿರದ ನವೀಕರಣ ಕಾರ್ಯ ನಡೆಯಲಿದೆ. ಕೆಂಪೇಗೌಡ ಜಯಂತಿ ಆಚರಣೆ ಸಮಿತಿ ಮೂರು ದಿನಗಳ ಕಾಲ ಕೆಂಪೇಗೌಡ ಜಯಂತಿ ಆಚರಣೆ ಮಾಡುವಂತೆ ಮನವಿ ಮಾಡಿದ್ದು, ಮುಂದಿನ ವರ್ಷದಿಂದ ನಾನೇ ಮುಂದೆ ನಿಂತು ಸಮಿತಿ ಜೊತೆ ಕೈಜೋಡಿಸಿ ಅದ್ದೂರಿಯಾಗಿ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಗುವುದು. ನಮ್ಮ ಸಮುದಾಯದ ಅಸ್ಮಿತೆಯಾದ ಕೆಂಪೇಗೌಡರು ಸರ್ವ ಜನಾಂಗದ ಅಭಿವೃದ್ಧಿಗೆ ಮುಂದಾದವರು. ಅವರ ಆಶಯದಂತೆ ಮಂಡ್ಯದ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಶ್ರಮಿಸಲಾಗುವುದು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!