Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ಅಭಿವೃದ್ಧಿಯಲ್ಲಿ ಚಲುವರಾಯಸ್ವಾಮಿ ಅವರದ್ದೇ ಸಿಂಹಪಾಲು : ಪಿ.ಎಂ.ನರೇಂದ್ರಸ್ವಾಮಿ

ಜಿಲ್ಲೆಯ ಸ್ವಾಭಿಮಾನ ಎತ್ತಿ ಹಿಡಿದ ಜನಪರ ಕಾಳಜಿಯ ನಾಯಕರಾದ ಚಲುವರಾಯಸ್ವಾಮಿ ಅವರು ನಾಗಮಂಗಲ ತಾಲ್ಲೂಕಿನ ಅಭಿವೃದ್ಧಿಗಾಗಿ ಬದ್ಧತೆ ಹೊಂದಿದ್ದಾರೆ. ತಾಲ್ಲೂಕಿನ ಅಭಿವೃದ್ಧಿಯಲ್ಲಿ ಇವರದ್ದೇ ಸಿಂಹಪಾಲು ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ‌.ಎಂ.ನರೇಂದ್ರಸ್ವಾಮಿ ತಿಳಿಸಿದರು.

ನಾಗಮಂಗಲ ಪಟ್ಟಣದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಅವರು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರು,ಶಾಸಕರಾಗಿ, ಸಚಿವರಾಗಿ,ಸಂಸದರಾಗಿ ಜಿಲ್ಲೆ ಮತ್ತು ನಾಗಮಂಗಲ ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಕಾಮಗಾರಿ ತಂದಿದ್ದಾರೆ.

ನಾಗಮಂಗಲ ತಾಲ್ಲೂಕಿನಲ್ಲಿ ಶಿಕ್ಷಣ, ಆರೋಗ್ಯ, ನೀರಾವತಿ, ಕಂದಾಯ,ಸಾರಿಗೆ,ಸಮಾಜ ಕಲ್ಯಾಣ ಸೇರಿದಂತೆ ಎಲ್ಲಾ ಇಲಾಖೆಯಲ್ಲೂ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.ಈ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ತಾಲ್ಲೂಕಿನ ಜನತೆ ಚಲುವರಾಯಸ್ವಾಮಿ ಅವರಿಗೆ ಈ ಬಾರಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

ಒಂದು ಅವಕಾಶ ಕೊಡಿ
ಮಂಡ್ಯ ಜಿಲ್ಲೆಯ ಚಿತ್ರಣ ಬದಲಾವಣೆಗೆ ನಿಮ್ಮ ಮುಂದೆ ಬಂದಿದ್ದೇವೆ. ಪ್ರಾಮಾಣಿಕವಾಗಿ ನಿಮ್ಮ ಜತೆ ಇರುತ್ತೇವೆ. ಜಿಲ್ಲೆ ಮುನ್ನಡೆಸಲು ನಮಗೂ ಒಂದು ಅವಕಾಶ ಕೊಡಿ. ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಹಲವು ಕನಸುಗಳನ್ನು ಕಂಡಿದ್ದಾರೆ. ಅದಕ್ಕಾಗಿ ಜನತೆಯ ಮುಂದೆ ಬಂದಿದ್ದಾರೆ. ಬೆಂಗಳೂರು – ಮೈಸೂರು ಮಧ್ಯದಲ್ಲಿರುವ ಮಂಡ್ಯ ಜಿಲ್ಲೆಯನ್ನು ಬದಲಾವಣೆ ಮಾಡಲು ಬಯಸಿದ್ದಾರೆ. ಇದಕ್ಕಾಗಿ ನಾವೆಲ್ಲರೂ ಸೇರಿ ಚುನಾವಣೆ ಮಾಡುತ್ತಿದ್ದೇವೆ. ಕಳೆದ ಬಾರಿ ಜಾ.ದಳಕ್ಕೆ ಅವಕಾಶ ಕೊಟ್ಟಂತೆ ನಮಗೂ ಒಂದು ಅವಕಾಶ ಕೊಡಿ ಎಂದು ಜನತೆಯಲ್ಲಿ ಮನವಿ ಮಾಡಿದರು.

ಮಂಡ್ಯ ನಗರದಲ್ಲಿ ಮಿಮ್ಸ್ ಆಸ್ಪತ್ರೆ ಬರಲು ಪ್ರಮುಖ ಕಾರಣ ಚಲುವರಾಯಸ್ವಾಮಿ. ಜಿಲ್ಲೆಯ ನಾಯಕತ್ವ ವಹಿಸಿಕೊಳ್ಳಲು ಯಾರು ಬೇಕಾದರೂ ಬರಲಿ. ಅದಕ್ಕೆ ಯೋಗ್ಯತೆ ಬೇಕು. ಆ ಯೋಗ್ಯತೆ ಚಲುವರಾಯಸ್ವಾಮಿ ಅವರಿಗಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಿದ್ದನ್ನು ನೋಡಿದರೆ ಜಿಲ್ಲೆಯ ಜನ ಎಚ್ಚೆತ್ತಿದ್ದಾರೆ ಎನಿಸುತ್ತದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ದುರಾಡಳಿತದ ಪ್ರತೀಕ ಬಿಜೆಪಿ. ಇದನ್ನು ಹೋಗಲಾಡಿಸಬೇಕೆಂಬುದು ಜನರ ಆಸೆಯಾಗಿದೆ. ನಮ್ಮ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರು ಅಧಿಕಾರವನ್ನು ತ್ಯಾಗ ಮಾಡಿ ಪಕ್ಷ ಕಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಪಕ್ಷ ಮುನ್ನಡೆಯುತ್ತಿದ್ದು, ಅವರೂ ಸಹ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಿ ಅಪಸ್ವರ ಇಲ್ಲದೆ ಟಿಕೆಟ್ ಹಂಚಿಕೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ನಾಗಮಂಗಲ ಅಭ್ಯರ್ಥಿ ಚಲುವರಾಯಸ್ವಾಮಿ, ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಬಿ.ರಾಮಕೃಷ್ಣ, ಜಿಲ್ಲಾ ವಕ್ತಾರ ಸಿ.ಎಂ.ದ್ಯಾವಪ್ಪ, ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ, ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರಾದ ಬೆಟ್ಟೇಗೌಡ, ಕೃಷ್ಣೇಗೌಡ, ಜಿ.ಪಂ. ಮಾಜಿ ಸದಸ್ಯ ಪ್ರಸನ್ನ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!