ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆನ್ನುವ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರ ವರದಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬೇಕೆಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯ ಬಸವರಾಜ ನಾಯಕ್ ಒತ್ತಾಯಿಸಿದರು.
ಮಂಡ್ಯ ನಗರದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರತಿ ಹತ್ತು ವರ್ಷಕ್ಕೊಮ್ಮ ಜನಗಣತಿ ಮಾಡಲಾಗುತ್ತದೆ. ಆದರೆ ಪರಿಶಿಷ್ಟ ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಮಾಡಿಲ್ಲ.
1958 ರಲ್ಲಿ ನಿಗದಿಯಾಗಿದ್ದ ಶೇ.3 ರ ಮೀಸಲಾತಿ ಪ್ರಮಾಣ ಈಗಲೂ ಇದೆ.ಇದರಿಂದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ದೊಡ್ಡ ಅನ್ಯಾಯವಾಗಿದೆ.
ಕೂಡಲೇ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದ ಜನರ ಮೀಸಲಾತಿ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ 9-6.2019 ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು.
ಅಂದು ಫ್ರೀಡಮ್ ಪಾರ್ಕ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಬೇಡಿಕೆಯ ಬಗ್ಗೆ ಸರ್ಕಾರದ ಗಮನ ಸೆಳೆದಾಗ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಿತ್ತು.
ಅದರಂತೆ ಅವರು ಅವರು ಸರ್ಕಾರಕ್ಕೆ ವರದಿ ಸಲ್ಲಿಸಿ ಎರಡು ವರ್ಷ ಆಗುತ್ತಾ ಬಂದರೂ ಜಾರಿ ಮಾಡದೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಪರಿಶಿಷ್ಟ ಪಂಗಡದ ಜನರಿಗೆ ಶೇ.7.5 ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಕಳೆದ 75 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ನಾಗಮೋಹನದಾಸ್ ವರದಿ ಅನುಷ್ಠಾನಕ್ಕೆ ತಂದಿಲ್ಲ.
ಪ್ರಸನ್ನಾನಂದ ಸ್ವಾಮೀಜಿಯವರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಹಾಲಿ ಮತ್ತು ಮಾಜಿ ಸಚಿವರು, ವಿವಿಧ ಸಂಘಟನೆಗಳು ಭೇಟಿ ನೀಡಿದ್ದರೂ ಸರ್ಕಾರ ಮೀನಾಮೆಷ ಎಣಿಸುತ್ತಿದೆ.
ಹಾಗಾಗಿ ನಾವು ನೂರನೆ ದಿನದ ಪ್ರತಿಭಟನೆಯನ್ನು ತೀವ್ರಗೊಳಿಸಲು ಮುಂದಾಗಿದ್ದೇವೆ. ಸರ್ಕಾರ ಕೂಡಲೇ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವರದಿ ಜಾರಿಗೆ ತಂದು ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಹಾಗೂ ರಾಜ್ಯ ಸರ್ಕಾರದ ಸೇವೆಗಳಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಚಳುವಳಿ ರಾಜಣ್ಣ,ದೇವರಾಜ್,ಶ್ರೀನಿವಾಸ್ ನಾಯಕ್,ಶುಭ,ನಾಗವೇಣಿ,ರಾಧ ಮತ್ತಿತರರಿದ್ದರು.