Monday, September 16, 2024

ಪ್ರಾಯೋಗಿಕ ಆವೃತ್ತಿ

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂವಿಧಾನ ಓದಿ- ನ್ಯಾ. ನಾಗಮೋಹನ ದಾಸ್

ನಮ್ಮ ನೆಲದ ಇತಿಹಾಸವನ್ನು ತಿಳಿಯದವರು ಚರಿತ್ರೆಯನ್ನು ಸೃಷ್ಟಿಸಲಾರರು, ಅಂತೆಯೇ ಭಾರತದ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳದವರು ಸಂವಿಧಾನದ ಆಶಯಗಳ ಈಡೇರಿಕೆಗೆ ಪೂರಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾಗರೀಕ ಸಮಾಜದ ಪ್ರತಿಯೊಬ್ಬರು ಸಂವಿಧಾನವನ್ನು ಓದಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಹೆಚ್.ಎನ್.ನಾಗಮೋಹನ ದಾಸ್ ಕರೆ ನೀಡಿದರು.ಜು

ಕೆ ಆರ್ ಪೇಟೆ ಪಟ್ಟಣದ ಗ್ರಾಮಭಾರತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಲೋಕಾಯನ ಕಲ್ಚರಲ್ ಫೌಂಡೇಶನ್, ಉದಯ ರವಿ ಟ್ರಸ್ಟ್ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಓದು ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತದ ಸಂವಿಧಾನ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಸಂವಿಧಾನದ ಆಶಯಗಳ ಈಡೇರಿಕೆಗಾಗಿ ಸಮಾಜದಲ್ಲಿ ವಾಸಿಸುವ ಎಲ್ಲರೂ ಒಂದಾಗಿ ಹೋರಾಟ ಮಾಡುವುದು ಇಂದಿನ ಅಗತ್ಯವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆಯುತ್ತಿದ್ದರೂ ಇಂದಿಗೂ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಜಾರಿಯಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಸಂವಿಧಾನವು ದೇಶದ ಸಮಗ್ರವಾದ ಅಭಿವೃದ್ಧಿ ಹಾಗೂ ಸಹಬಾಳ್ವೆಗೆ ಪೂರಕವಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮದಿಂದ ಸಿದ್ಧವಾಗಿರುವ ಸಂವಿಧಾನ ದೇಶದ ಸಮಗ್ರತೆಗೆ ಪೂರಕವಾಗಿದೆ. ನಮ್ಮ ನೆಲದ ಸಂಸ್ಕೃತಿ ಪರಂಪರೆ ಹಾಗೂ ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು ಅಂತೆಯೇ ಭಾರತದ ಸಂವಿಧಾನವನ್ನು ಓದಿ ಮನನ ಮಾಡಿಕೊಂಡು ಜಾತಿ ಮತ ಪಂಥಗಳಿಂದ ಮುಕ್ತವಾದ ಸಮ ಸಮಾಜದ ನಿರ್ಮಾಣಕ್ಕೆ ಮುಂದಾಗದವರು ಯಾವುದೇ ಚರಿತ್ರೆಯನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದರು.

ಇಂದು ನಮ್ಮ ದೇಶದ ಕಾನೂನನ್ನು ಸೃಷ್ಟಿಸುವ ಸಂಸತ್ತಿನಲ್ಲಿ ಕೇವಲ ಭಾವನಾತ್ಮಕ ವಿಚಾರಗಳು ಚರ್ಚೆಯಾಗುತ್ತಿವೆಯೇ ಹೊರತು ನಮ್ಮ ಬದುಕನ್ನು ರೂಪಿಸುವ, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ವಿಕಸನಗೊಳಿಸುವ ವಿಷಯಗಳ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ, ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮ ದೇಶದ ಸಂಸತ್ತನ್ನು ಕೂಡ ಖಾಸಗಿವರೆಗೆ ವಹಿಸುವ ಸಂದರ್ಭ ನಿರ್ಮಾಣವಾದರೆ ಆಶ್ಚರ್ಯ ಪಡಬೇಕಾಗಿಲ್ಲ. ನಮ್ಮ ನೆಲ ಜಲ ಭಾಷೆ, ಏಕತೆ ಹಾಗೂ ಸಮಗ್ರತೆಗೆ ಪೂರಕವಾದ ಸಂವಿಧಾನವನ್ನು ತಿದ್ದುಪಡಿ ಮಾಡುವುದಾಗಲಿ, ಬದಲಾಯಿಸುವುದಾಗಲಿ ಯಾರಿಂದಲೂ ಸಾಧ್ಯವಿಲ್ಲ. ಭಾರತದ ಸಂವಿಧಾನ ದೇಶದ ಅಖಂಡತೆ, ಸಮಗ್ರತೆ ಹಾಗೂ ಸಹಬಾಳ್ವೆಗೆ ಪೂರಕವಾಗಿರುವ ವಿಶ್ವ ಮಾನ್ಯ ಸಂವಿಧಾನವಾಗಿದೆ. ನಮ್ಮ ಯುವಜನರು ಹಾಗೂ ವಿದ್ಯಾರ್ಥಿಗಳು ಸಂವಿಧಾನವನ್ನು ಓದುವ, ಭಾರತೀಯತೆಯನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಸಹೋದರತ್ವ ಹಾಗೂ ಸಹಬಾಳ್ವೆ ಇಂದಿನ ಅಗತ್ಯವಾಗಿರುವುದರಿಂದ ನಾವೆಲ್ಲರೂ ಭಾರತೀಯರು ಎಂದು ಹೇಳಲು ಹೆಮ್ಮೆ ಪಡಬೇಕು ಎಂದರು.

ಇದೇ ಸಂದರ್ಭದಲ್ಲಿ ಅಕ್ಕಿ ಹೆಬ್ಬಾಳು ಹೋಬಳಿಯ ಸರ್ಕಾರಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಕೆ ಆರ್ ಪೇಟೆ ಪಟ್ಟಣದ ಕೆಪಿಎಸ್ ಶಾಲೆ, ಗ್ರಾಮಭಾರತಿ ಶಿಕ್ಷಣ ಸಂಸ್ಥೆ, ಶೀಳನರೆ ಹಾಗೂ ವಿಠಲಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನ್ಯಾ. ಎಚ್ ಎನ್ ನಾಗಮೋಹನದಾಸ್ ಸಂವಿಧಾನ ಓದು ಪುಸ್ತಕವನ್ನು ವಿತರಿಸಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಲೋಕಾಯನ ಕಲ್ಚರಲ್ ಫೌಂಡೇಶನ್ ಸಂಚಾಲಕ ಶಶಿಧರ ಭಾರಿ ಘಾಟ್, ಉದಯ ರವಿ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಸೋಮಶೇಖರ್, ಕೆ ಆರ್ ಪೇಟೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್ ಆರ್ ರವಿಶಂಕರ್, ಮೈಸೂರಿನ ಎಸ್ ಡಿ ಎಮ್ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಮಾರುತಿ ಪ್ರಸನ್ನ, ಗ್ರಾಮ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್ ಸಿ ಕಿರಣ್ ಕುಮಾರ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷ ನಂದಿನಿ ಜಯರಾಮ್, ಕೆಪಿಎಸ್ ಸ್ಕೂಲ್ ಪ್ರಾಂಶುಪಾಲ ಡಿ.ಬಿ.ಸತ್ಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಚಿಂತಕರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!