Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ-ಜೆಡಿಎಸ್ ಮೈತ್ರಿಗೆ ಮಂಡ್ಯದಲ್ಲೂ ಅಪಸ್ವರ: ದಳಪತಿಗಳಿಗೆ ಟಿಕೆಟ್ ನೀಡಬೇಡಿ ಎಂದ ನಾರಾಯಣಗೌಡ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಭಾರತೀಯ ಜನತಾ ಪಾರ್ಟಿಯು ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕ್ರಮವು ಸರಿಯಲ್ಲ ಎಂದು ಮಾಜಿ ಸಚಿವ ಡಾ.
ನಾರಾಯಣಗೌಡ ಅಪಸ್ವರವೆತ್ತಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ತಮ್ಮ ನಿವಾಸದಲ್ಲಿ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಭಾರತೀಯ ಜನತಾ ಪಾರ್ಟಿಯು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ ಪಕ್ಷದ ‘ಭಿ’ ಪಾರಂ ನೀಡಬೇಕು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡಲು ಯಾವುದೇ ಕಾರಣಕ್ಕೂ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಪ್ರಬಲವಾದ ವಿರೋಧಿಯೆಂದರೆ ಜೆಡಿಎಸ್ ಪಕ್ಷ, ಆದ್ದರಿಂದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ತೀರ್ಮಾನವನ್ನು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷದೊಂದಿಗೆ ಬಿಜೆಪಿ ಪಕ್ಷವು ಸ್ಥಾನ ಹೊಂದಾಣಿಕೆ ಮಾಡಿಕೊಂಡಿರುವುದಕ್ಕೆ ನನ್ನ ವಿರೋಧವಿದೆ ಎಂದರು.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಬಿಜೆಪಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬರಲು ನಾನೂ ಸೇರಿದಂತೆ 17 ಶಾಸಕರು ಕಾರಣರಾಗಿದ್ದೇವೆ. ಕಳೆದ ಲೋಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಎಂಟು ಸ್ಥಾನಗಳಲ್ಲಿಯೂ ಜೆಡಿಎಸ್ ಶಾಸಕರಿದ್ದರೂ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮಂಡ್ಯ ಜಿಲ್ಲೆಯ ಸೊಸೆಯಾಗಿದ್ದ ಸ್ವಾಭಿಮಾನಿ ಅಭ್ಯರ್ಥಿ ಸುಮಲತಾ ಭರ್ಜರಿ ಗೆಲುವು ಸಾಧಿಸಿದ್ದರು. ಪ್ರಸ್ತುತ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೇಸ್ ದಿಗ್ವಿಜಯ ಸಾಧಿಸಿದ್ದರೂ ಲೋಕಸಭೆ ಚುನಾವಣೆಯ ವಿಚಾರ ಬಂದಾಗ ಪ್ರಜ್ಞಾವಂತ ಮತದಾರರು ನರೇಂದ್ರಮೋದಿ ಹಾಗೂ ಬಿಜೆಪಿ ಪಕ್ಷವನ್ನು ನೋಡಿ ಮತ ನೀಡುತ್ತಾರೆ. ಆದ್ದರಿಂದ ಸುಮಲತಾ ಅಂಬರೀಶ್ ಅವರೇ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬೇಕು ಎನ್ನುವುದು ನನ್ನ ಮನ ದಭಿಲಾಷೆಯಾಗಿದೆ ಎಂದು ನಾರಾಯಣಗೌಡ ಸ್ಪಷ್ಠಪಡಿಸಿದರು.

ಸ್ಪರ್ಧೆ ಮಾಡಬೇಕೆಂಬ ಬಯಕೆ ಹೊಂದಿದ್ದೇನೆ

ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಮಾತನಾಡಿ, ಬಿಜೆಪಿ-ಜೆಡಿಎಸ್  ಹೊಂದಾಣಿಕೆ ಬಗ್ಗೆ ಮೇಲ್ಮಟ್ಟದಲ್ಲಿ ಮಾತುಕತೆಯಾಗಿದ್ದರೂ ಸ್ಥಾನಗಳ ಹೊಂದಾಣಿಕೆಯು ಇನ್ನೂ ಅಂತಿಮವಾಗಿಲ್ಲ. ನಾನು ಬಿಜೆಪಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬ ಬಯಕೆ ಹೊಂದಿದ್ದೇನೆ. ನನ್ನ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!