Tuesday, September 17, 2024

ಪ್ರಾಯೋಗಿಕ ಆವೃತ್ತಿ

ಮಠಾಧೀಶರು ಒಂದು ಜಾತಿಯ ಧ್ವನಿಯಾಗುವುದು ಸರಿಯಲ್ಲ: ಪಿ.ಎಂ.ನರೇಂದ್ರ ಸ್ವಾಮಿ

ಮಠಾಧೀಶರು ಶೋಷಿತರ ಧ್ವನಿಯಾಗಬೇಕೇ ಹೊರತು ಒಂದು ಜಾತಿಯ ಧ್ವನಿಯಾಗುವುದು ಸರಿಯಲ್ಲ.ಸಮಾಜ,ಜಾತಿ ಹೆಸರಿನಲ್ಲಿ ಮನುಷ್ಯತ್ವ ಕೊಲ್ಲುವ ಕೆಲಸ ಮಾಡಬೇಡಿ ಎಂದು ಮಠಾಧೀಶರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ಮಳವಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇಂದು ಮಠಾಧೀಶರು ರಾಜಕೀಯವಾಗಿ ಹೇಳಿಕೆ ನೀಡುತ್ತಿದ್ದಾರೆ. ನಿಜಲಿಂಗಪ್ಪ, ಬೊಮ್ಮಾಯಿ, ವೀರೇಂದ್ರ ಪಾಟೀಲ್, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಒಂದು ವರ್ಗಕ್ಕೆ ಸೇರಿದವರಾದರೆ, ಕಡಿದಾಳ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ದೇವೇಗೌಡ,ಸದಾನಂದ ಗೌಡ, ಕುಮಾರಸ್ವಾಮಿ ಇನ್ನೊಂದು ವರ್ಗಕ್ಕೆ ಸೇರಿದವರರಾಗಿದ್ದಾರೆ.ಈ ಮಧ್ಯೆ ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್,ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಆದರೆ ಬಹು ಸಂಖ್ಯಾತ ಜನರು ಒಂದು ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದರೂ ಕೆಲವು ಮಠಾಧೀಶರು ಸಿಎಂ ವಿಚಾರವಾಗಿ ಮಾತಾಡಿದ್ದಾರೆ.ಮಠಾಧೀಶರು ಶೋಷಿತರ ಧ್ವನಿಯಾಗಬೇಕೇ ಹೊರತು ಒಂದು ಜಾತಿಯ ಧ್ವನಿಯಾಗುವುದು ಸರಿಯಲ್ಲ.ನಾವು ಮಠ ಮತ್ತು ಮಠಾಧೀಶರಿಗೆ ಶರಣಿದ್ದೇವೆ.ಅವರನ್ನು ಅನುಸರಿಸುತ್ತಿದ್ದೇವೆ. ನಮ್ಮನ್ನು ಗೌರವದಿಂದ ಮನುಷ್ಯರಂತೆ ಕಾಣಿ. ಸಮಾಜ, ಜಾತಿಯ ಹೆಸರಿನಲ್ಲಿ ಮಠಾಧಿಪತಿಗಳು ಮನುಷ್ಯತ್ವ ಕೊಲ್ಲುವ ಕೆಲಸಕ್ಕೆ ಹೋಗಬೇಡಿ ಎಂದು ಶೋಷಿತ ಸಮಾಜದ ಪ್ರತಿನಿಧಿಯಾಗಿ ನಿಮ್ಮಲ್ಲಿ ನೋವು ಹಂಚಿಕೊಳ್ಳುತ್ತಿದ್ದೇನೆ ಎಂದರು.

ಈ ದೇಶದಲ್ಲಿ ಜಾತಿ ಆಧಾರದ ಮೇಲೆ ಪಕ್ಷದಲ್ಲಿ ಅಧಿಕಾರ ನೀಡಬಾರದು. ನಮ್ಮ ಪಕ್ಷಕ್ಕೆ ಹೈಕಮಾಂಡ್ ಆದೇಶವೇ ಅಂತಿಮ. ನಮಗೆ ವ್ಯಕ್ತಿಗಿಂತ ಪಕ್ಷವೇ ಮುಖ್ಯ. ಮಠಾಧೀಶರು ಒಂದು ಪಕ್ಷದ ಪರವಾಗಿ, ನಾಯಕರು ಪರವಾಗಿ ಮಾತನಾಡುವುದನ್ನು ಬಿಟ್ಟು ಎಲ್ಲಾ ಪಕ್ಷದವರಿಗೂ ಆಶೀರ್ವಾದ ಮಾಡಬೇಕು. ಒಬ್ಬ ವ್ಯಕ್ತಿಗೆ, ಒಂದು ಪಕ್ಷಕ್ಕೆ ಆಶೀರ್ವಾದ ಮಾಡಿದರೆ ಅದು ಬೇರೆ ರೀತಿಯ ಅಪಾರ್ಥಕ್ಕೆ ಅನುವು ಮಾಡಿಕೊಡುತ್ತದೆ. ಎಲ್ಲಾ ವರ್ಗದ ದನಿಯಾಗಿ ಮಠಾಧೀಶರು ಆಶೀರ್ವಾದ ಮಾಡಬೇಕು ಎಂದರು.

ಪಕ್ಷಕ್ಕೆ ಧಕ್ಕೆ ತರಬೇಡಿ

ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ
ಕೆಲವು ಸಚಿವರು ಹಾಗೂ ಶಾಸಕರು ತಮ್ಮ ಬೇಡಿಕೆಗಳಿದ್ದರೆ ಅದನ್ನು ನೇರವಾಗಿ ಹೈಕಮಾಂಡ್ ಬಳಿ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಬೀದಿಯಲ್ಲಿ ಚರ್ಚೆ ಮಾಡಿದರೆ ಪಕ್ಷದ ಘನತೆ ಮತ್ತು ಒಗ್ಗಟ್ಟಿಗೆ ಧಕ್ಕೆಯಾಗುತ್ತದೆ.ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದಾಗಲೂ ಪಕ್ಷದ ಆಂತರಿಕ ಪ್ರಜಾಪ್ರಭುತ್ವದಂತೆ ಶಾಸಕರ ಅಭಿಪ್ರಾಯ ಸಂಗ್ರಹ ಹಾಗೂ ಹೈಕಮಾಂಡ್ ಆದೇಶದಿಂದ ಆಗಿದ್ದಾರೆ.ರಾಹುಲ್ ಗಾಂಧಿಯವರು ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ದೇಶವನ್ನು ಸುತ್ತಿ ಕಾಂಗ್ರೆಸ್ ಪಕ್ಷ ಕಟ್ಟುತ್ತಿದ್ದಾರೆ.ನಾವೆಲ್ಲರೂ ಪಕ್ಷ ಮತ್ತು ನಾಯಕತ್ವಕ್ಕೆ ಧಕ್ಕೆ ತರಬಾರದು ಎಂದು ಮನವಿ ಮಾಡಿದರು.

ಇತ್ತೀಚಿಗೆ ಪಕ್ಷದಲ್ಲಿ ಕೆಲವರು ತಾವು ಸರ್ವಶ್ರೇಷ್ಠರು ಎಂದು ತಿಳಿದುಕೊಂಡಿದ್ದಾರೆ. ಆದರೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಮೆ ಮಾಡಿ ಅಧಿಕಾರಕ್ಕೆ ಬಂದಾಗ ಅಧಿಕಾರದಿಂದ ವಂಚಿತರಾಗಿದ್ದವರು ಸಾಕಷ್ಟು ಮಂದಿಯಿದ್ದು, ನಿಮ್ಮ ಸಿರಿವಂಚಿಕೆಗೋ, ನಿಮ್ಮ ಜಾತಿಯ ಒಲೈಕೆಗಾಗಿಯೋ ಪಕ್ಷವನ್ನು ಬಲಿ ಕೊಡಬೇಡಿ. ಕಾಂಗ್ರೆಸ್ ಪಕ್ಷ ಜಾತಿ ಆಧಾರಿತ ಪಕ್ಷವಲ್ಲ,ಜಾತ್ಯಾತೀತ ಪಕ್ಷ ಎಂಬುದನ್ನು ಅರಿತುಕೊಳ್ಳಲಿ ಎಂದು ಸ್ವಪಕ್ಷದ ಸಚಿವರು ಹಾಗೂ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಹೀಯಾಳಿಸಿದರು.ಸದಸ್ಯತ್ವದಿಂದ ಉಚ್ಚಾಟಿಸಿದರು.ಸದನದಿಂದ ಹೊರಗೆ ಹಾಕಿದರು. ಎಂತೆಂತಹ ಅಪಮಾನ ಎದುರಿಸಿರುವ ರಾಹುಲ್ ಗಾಂಧಿಯಂತಹ ನಾಯಕ ಇರುವ ಪಕ್ಷದಲ್ಲಿ ಅವರಿಗೋಸ್ಕರ ನಾವು ಏನು ಕಳಕೊಂಡರೂ ಚಿಂತೆ ಇಲ್ಲ ಎಂದರು.

ಪ್ರಜಾಪ್ರಭುತ್ವದಡಿಯಲ್ಲಿ ಸಂವಿಧಾನದ ಆಧಾರದಲ್ಲಿ ರಾಹುಲ್ ಗಾಂಧಿಯವರು ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಅನ್ನು ಸಂಘಟಿಸಿ ರಾಷ್ಟ್ರದಲ್ಲಿ ಪ್ರಬಲ ವಿರೋಧ ಪಕ್ಷವನ್ನಾಗಿ ನಿಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದಾಗ ಪಕ್ಷ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಆಯ್ಕೆ ಮಾಡಿದೆ. ಈ ಮಾತ್ರಕ್ಕೆ ಇನ್ನಿತರರಿಗೆ ಅವಕಾಶವಿಲ್ಲ ಎನ್ನುವಂತಿಲ್ಲ. ಸಮಯ ಸಂದರ್ಭ ನಾಯಕತ್ವ ಮತ್ತು ಪಕ್ಷದ ಭವಿಷ್ಯದ ದೃಷ್ಟಿಯಿಂದ ಏನೋ ಬೇಕಾದರೂ ತೀರ್ಮಾನ ತೆಗೆದುಕೊಳ್ಳಬಹುದು ಎಂದರು.

ಲಘುವಾಗಿ ಮಾತನಾಡಬಾರದು

ಜಿಲ್ಲೆಯ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಲು ಕೆಲವರು ಲಘುವಾಗಿ ಮಾತನಾಡಿದ್ದು ಕಾರಣ.ವಿರೋಧ ಪಕ್ಷದ ಅಭ್ಯರ್ಥಿ ಬಗ್ಗೆ ಲಘುವಾಗಿ ಮಾತನಾಡುವ ಬದಲು,ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ,ಜಿಲ್ಲೆಯ ಅಭಿವೃದ್ಧಿ ಬಗ್ಗೆ ಜನರಿಗೆ ಮನವರಿಕೆ ಮಾಡಿ ಅವರ ಹೃದಯ ಗೆಲ್ಲಬೇಕು. ನಮ್ಮ ಹಿನ್ನಡೆಗೆ ನಾನಾ ಕಾರಣಗಳಿದ್ದು,ಅದರ ಬಗ್ಗೆ ವಿಮರ್ಶೆ ಮಾಡಿ ಕೊಳ್ಳಬೇಕಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!