Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ಸ್ವೀಕಾರ

ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಕರ್ನಾಟಕದವರೇ ಆದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು.

ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಖರ್ಗೆ ಅವರಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.

ಈ ವರ್ಷಾಂತ್ಯದಲ್ಲಿ ಗುಜರಾತ್ ಹಾಗೂ ಉತ್ತರಖಂಡ ರಾಜ್ಯಗಳ ಸಾರ್ವತ್ರಿಕ ವಿಧಾನಸಭೆ ಚುನಾವಣೆಗಳು ನಡೆಯಲಿರುವುದರಿಂದ ಖರ್ಗೆ ಅವರಿಗೆ ಹೊಸ ಸವಾಲುಗಳು ಎದುರಾಗಿವೆ.

ದೇಶದಲ್ಲಿ ರಾಜಸ್ಥಾನ ಹಾಗೂ ಛತ್ತೀಸಘಡ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರಗಳು ಅಧಿಕಾರದಲ್ಲಿದ್ದು, 2024ರಲ್ಲಿ ಹಲವು ರಾಜ್ಯಗಳ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಕಳೆಗುಂದಿರುವ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ ಅಧಿಕಾರಕ್ಕೆ ತರಲು ಅವರು ಶ್ರಮಿಸಬೇಕಾಗಿದೆ.

50 ವರ್ಷದೊಳಗಿನ ಯುವ ನಾಯಕರಿಗೆ ಮಣೆ

ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಔಪಚಾರಿಕವಾಗಿ ಕಾಂಗ್ರೆಸ್ ಅಧ್ಯಕ್ಷರಾಗುತ್ತಿದ್ದಂತೆ 50 ವರ್ಷದೊಳಗಿನ ಹೊಸ ನಾಯಕರಿಗೆ ಪಕ್ಷದ ಹುದ್ದೆಗಳಲ್ಲಿ ಶೇ.50 ಸ್ಥಾನಗಳನ್ನು ಮೀಸಲಿಡಲು `ನಾವು ಉದಯಪುರ ‘ಚಿಂತನ್ ಶಿಬಿರ’ದಲ್ಲಿ ನಿರ್ಧರಿಸಿದ್ದೇವೆ. ನಿಮ್ಮೆಲ್ಲರ ಬೆಂಬಲದೊಂದಿಗೆ ನಾವು ಅದನ್ನು ಮಾಡುತ್ತೇವೆ’ ಎಂದು ಘೋಷಿಸಿದರು.

ಬಿಜೆಪಿಯಿಂದ ಸುಳ್ಳು ವಂಚನೆಯ ರಾಜಕಾರಣ 

ಈಗ ನಮ್ಮ ದೇಶವು ಬಿಜೆಪಿಯ ಸುಳ್ಳು ಮತ್ತು ವಂಚನೆಯ ರಾಜಕಾರಣವನ್ನು ಮಾಡುತ್ತಿದೆ. ಕಾಂಗ್ರೆಸ್ಸಿನ ಸಿದ್ಧಾಂತವು ಭಾರತದ ಸಂವಿಧಾನವನ್ನು ಆಧರಿಸಿದೆ – ಅದನ್ನು ಉಳಿಸುವ ಸಮಯ ಬಂದಿದೆ,” ಎಂದು ಖರ್ಗೆ  ಹೇಳಿದರು.

ಖರ್ಗೆ ಅವರು 24 ವರ್ಷಗಳ ನಂತರ ಗಾಂಧಿಯೇತರ ಕುಟುಂಬದದಿಂದ ಆಯ್ಕೆಯಾದ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಆದರೆ ಸಮಾರಂಭದಲ್ಲಿದ್ದ ರಾಹುಲ್ ಗಾಂಧಿ ಅವರು ಎಐಸಿಸಿಯ ಪ್ರಮುಖ ಹುದ್ದೆಯಲ್ಲಿಯೇ ಮುಂದುವರೆದಿದ್ದಾರೆ. ನಾನು ಪಕ್ಷದ “ರಬ್ಬರ್‌ಸ್ಟ್ಯಾಂಪ್” ಆಗಿ ಮುಂದುವರೆಯುವುದಿಲ್ಲ ಎಂದು ಖರ್ಗೆ ಅವರು ಸ್ಪಷ್ಟಪಡಿಸಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ‘ಭಾರತ್ ಜೋಡೋ ಯಾತ್ರೆ’ ಒಂದು ಐತಿಹಾಸಿಕ ಪಾದಯಾತ್ರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ನೇರವಾಗಿ ಜನರೊಂದಿಗೆ ಮಾತನಾಡುತ್ತಿದ್ದಾರೆ. ಅವರು ಭಾರತದ ಜನರನ್ನು ಒಟ್ಟುಗೂಡಿಸುತ್ತಿದ್ದಾರೆ. ಕೋಮುವಾದದ ಆಧಾರದ ಮೇಲೆ ದೇಶವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು.

ಖರ್ಗೆ ಅವರು ನಿನ್ನೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವರ ಮನೆಯಲ್ಲಿ ಭೇಟಿಯಾದರು. ಇಂದು ಬೆಳಗ್ಗೆ ಅವರು ಮಹಾತ್ಮ ಗಾಂಧಿ ಅವರ ಸ್ಮಾರಕ ರಾಜ್‌ಘಾಟ್‌ನಲ್ಲಿ ನಮನ ಸಲ್ಲಿಸಿದರು.

ಅವರು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಸ್ಮಾರಕಗಳಿಗೆ ಭೇಟಿ ನೀಡಿದರು, ಮಾಜಿ ಉಪ ಪ್ರಧಾನಿ ಜಗಜೀವನ್ ರಾಮ್ ಅವರು ಕಾಂಗ್ರೆಸ್ ನ ಮೊದಲ ದಲಿತ ಅಧ್ಯಕ್ಷರಾಗಿದ್ದರು, ನಂತರ ಖರ್ಗೆ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷಗಾದಿಗೇರಿದ ಎರಡನೇ ದಲಿತ ನಾಯಕರಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!