ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಜಯಾನಂದನಿಗೆ ತಪ್ಪಿಸಿದ್ದು ಮಂಡ್ಯದ ‘ಶಕುನಿ ಮಾಮ’ ಎಂದು ಜಿಲ್ಲಾಧ್ಯಕ್ಷ ಡಿ.ರಮೇಶ್ ಹೆಸರೇಳದೆ ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ ವಾಗ್ದಾಳಿ ನಡೆಸಿದರು.
ಮಂಡ್ಯದ ಕಲಾಮಂದಿರದ ಹಿಂಭಾಗದ ಆವರಣದಲ್ಲಿ ಸ್ವಾಭಿಮಾನಿ ಪಡೆ ಆಯೋಜಿಸಿದ್ದ ಕೆ.ಎಸ್.ವಿಜಯ್ ಆನಂದ್ ಪರ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ಮನಸ್ಸಿಗೆ ನೋವಾದಾಗ,ನಮಗೆ ಅನ್ಯಾಯವಾದಾಗ, ನಾವು ಸಿಡಿದೇಳುತ್ತೇವೆ. ಅದೇ ರೀತಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಜಯಾನಂದನಿಗೆ ತಪ್ಪಿಸಿದ್ದರಿಂದ ನಾವೆಲ್ಲ ಅವರನ್ನು ಸ್ವಾಭಿಮಾನಿ ಪಡೆಯಿಂದ ಕಣಕ್ಕೆ ಇಳಿಸಿದ್ದೇವೆ. ಅವರಿಗೆ ಜನರೇ ಬಿ.ಫಾರಂ ನೀಡಿದ್ದಾರೆ ಎಂದರು.
ಮಂಡ್ಯದ ಜನರು ಸ್ವಾಭಿಮಾನಿಗಳು, ಅವರು ಪ್ರಾಣ ಬಿಡುತ್ತಾರೆ ಹೊರತು, ಸ್ವಾಭಿಮಾನವನ್ನು ಬಿಡುವುದಿಲ್ಲ. ಮಂಡ್ಯದ ಸ್ವಾಭಿಮಾನಿ ಜನರು ವಿಜಯಾನಂದ ಅವರನ್ನು ಗೆಲ್ಲಿಸುತ್ತಾರೆ. ಕೆರಗೋಡು, ಕಸಬಾ,ಬಸರಾಳು ಹೋಬಳಿಯಲ್ಲಿ ಜನತೆ ವಿಜಯಾನಂದನಿಗೆ ಪ್ರೀತಿ ತೋರಿಸಿದ್ದಾರೆ. ವಿಜಯಾನಂದ ಕೂಡ ಬಡವರು, ಶೋಷಿತರು, ಹಿಂದುಳಿದವರು ಹಾಗೂ ಮಂಡ್ಯದ ಅಭಿವೃದ್ಧಿಗೆ ನೀಲಿ ನಕ್ಷೆ ತಯಾರು ಮಾಡಿ ಕೊಂಡಿದ್ದಾರೆ. ಅಮೆರಿಕ, ಜರ್ಮನಿ, ದುಬೈ ದೇಶಗಳಲ್ಲಿ ಮಂಡ್ಯದ ಸ್ವಾಭಿಮಾನವನ್ನು ತಿರುಗಿ ನೋಡುವಂತೆ ಮಾಡಿರುವ ವಿಜಯಾನಂದ ಅವರ ಗೆಲುವು ಶತಸಿದ್ಧ ಎಂದರು.
ಮಂಡ್ಯದ ಜನರು ಮಾರಾಟಕ್ಕಿಲ್ಲ. ಜೆಡಿಎಸ್ ಟಿಕೆಟ್ ಪಡೆದಿರುವ ಅಭ್ಯರ್ಥಿ ನಿನ್ನ ಹಣದ ಮೂಲ ಯಾವುದು ಎಂದು ಸ್ವಲ್ಪ ಹೇಳುತ್ತೀಯ. ಪಿಇಎಸ್ ಸಂಸ್ಥೆಯನ್ನು ಕಟ್ಟಲು ಕೆ.ವಿ. ಶಂಕರಗೌಡರು ತಮ್ಮ ಆಸ್ತಿಯನ್ನು ಮಾರಿದ್ದಾರೆ. ಅವರ ಕುಟುಂಬದ ಕುಡಿ ಈ ತಾಲೂಕಿಗೆ ಅನಿವಾರ್ಯ ಎಂದರು.

ತಬ್ಬಲಿ ಮಾಡಬೇಡಿ
ಮುಖಂಡ ಬಸರಾಳು ತಿಮ್ಮೇಗೌಡ ಮಾತನಾಡಿ, ಮಂಡ್ಯ ಕ್ಷೇತ್ರದಲ್ಲಿ ಹೊಲ ಉತ್ತು,ಬೆಳೆ ಹಾಕಿ ಅದನ್ನು ಕುಯ್ದುಕೊಳ್ಳಲು ಪಕ್ಕದ ಕ್ಷೇತ್ರದ ವ್ಯಕ್ತಿಯನ್ನು ಕಳುಹಿಸಿದರೆ ಹೇಗೆ? ವಿಜಯಾನಂದನಿಗೆ ಟಿಕೆಟ್ ಕೊಡಿ ಎಂದು ಹಲವು ಬಾರಿ ಹೇಳಿದರೂ ಜೆಡಿಎಸ್ ವರಿಷ್ಠರ ಕಿವಿ ಮುಟ್ಟಲಿಲ್ಲ. ಕೀಲಾರದಲ್ಲಿ ಕೆ.ವಿ. ಶಂಕರಗೌಡರ ಕುಟುಂಬ ಆಸ್ಪತ್ರೆಗೆ ಜಾಗವನ್ನು ದಾನ ಮಾಡಿದೆ.ಆದಿ ಚುಂಚನಗಿರಿ ಮಠಕ್ಕೆ, ಸಹಕಾರ ಸಂಘಕ್ಕೆ ಜಾಗ ನೀಡಿದೆ. ಇಂತಹ ಮಹಾನ್ ವ್ಯಕ್ತಿಯನ್ನು ಕುವೆಂಪುರವರೇ ನಿತ್ಯ ಸಚಿವ ಎಂದು ಬಿರುದು ಕೊಟ್ಟು ಸನ್ಮಾನಿಸಿದ್ದಾರೆ. ಅಂತಹ ವಂಶದ ಕುಡಿ ಮಂಡ್ಯದಲ್ಲಿ ರಾಜಕೀಯವಾಗಿ ತಬ್ಬಲಿ ಆಗಬಾರದು ಎಂದರು.
ಗೆಲ್ಲುತ್ತಾರೆ
ಮುಖಂಡ ಲೋಕೇಶ್ ರವರು ಮಾತನಾಡಿ, ಕೆ.ವಿ. ಶಂಕರಗೌಡರು ಮನೆ-ಮಠ ಮಾರಿ ಪಿಇಎಸ್ ಇಂಜಿನಿಯರಿಂಗ್ ಸಂಸ್ಥೆಯನ್ನು 1962ರಲ್ಲಿ ಕಟ್ಟಿದರು. ಅವರು ಅದನ್ನು ಟ್ರಸ್ಟ್ ಮಾಡಿದರೆ ಹೊರತು ತಮ್ಮ ಕುಟುಂಬಕ್ಕೆ ಬಳಸಿಕೊಳ್ಳಲಿಲ್ಲ. ಇಂದು ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆಯುತ್ತಿದೆ.ಶ್ರೀ ಕೃಷ್ಣನ ಸ್ಥಾನದಲ್ಲಿ ಎಂ. ಶ್ರೀನಿವಾಸ್ ಇದ್ದರೆ,ಅರ್ಜುನನಾಗಿ ವಿಜಯಾನಂದ ಇದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ನಂಬಿಕೆ ಇದ್ದ ಶಂಕರಗೌಡರ ಕುಟುಂಬದ ಕೆ. ಎಸ್. ವಿಜಯಾನಂದ ಅವರನ್ನು ಜನತೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿ ಮಾಡ್ತಾರೆ
ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಮಾತನಾಡಿ, ಈ ಚುನಾವಣೆ ಆರಂಭವಾಗುವ ಆರು ತಿಂಗಳ ಮೊದಲೇ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿದೆ. ಯಾರೋ 10% ಜನ ದುಡ್ಡಿಗೆ ಮಾರಾಟವಾಗಬಹುದು. ಆದರೆ ನಮ್ಮ ಸ್ವಾಭಿಮಾನಿ ಪಡೆಯ ಅಭ್ಯರ್ಥಿ ಜನರ ಪ್ರೀತಿ,ವಿಶ್ವಾಸದಿಂದಲೇ ಗೆದ್ದು ಬರುತ್ತಾರೆ. ನಮ್ಮ ಅಭ್ಯರ್ಥಿ ಹಣವನ್ನು ಹಂಚುವುದಿಲ್ಲ, ಅಭಿವೃದ್ಧಿ ಮಾಡಿ ತೋರಿಸುತ್ತಾರೆ. ಅವರು ಇವತ್ತು ದುಡ್ಡು ಕೊಟ್ಟು 50,000 ಜನರನ್ನು ಸೇರಿಸುವುದು ಒಂದೇ, ನಾವು 2000 ಜನರನ್ನು ಸೇರಿಸುವುದು ಒಂದೇ. ಮಂಡ್ಯದ ಜನರು ವಿಜಯಾನಂದನಿಗೆ ಆಶೀರ್ವಾದ ಮಾಡುತ್ತಾರೆ ಎಂದರು.




