Thursday, September 19, 2024

ಪ್ರಾಯೋಗಿಕ ಆವೃತ್ತಿ

ರಷ್ಯಾ-ಉಕ್ರೇನ್ ಯುದ್ದ ತಡೆದವರಿಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲಾಗಲಿಲ್ಲವೇ ?: ರಾಹುಲ್ ಗಾಂಧಿ

ಭಾರತದ ಶಿಕ್ಷಣ ವ್ಯವಸ್ಥೆ ಭಾರತೀಯ ಜನತಾ ಪಕ್ಷದ ಮಾತೃಸಂಸ್ಥೆಯ ಬಳಿ ಸಿಲುಕಿಕೊಂಡಿದೆ. ಇದು ಬದಲಾಗದ ಹೊರತು ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ಅಕ್ರಮಗಳು ಕೊನೆಗೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೇ ಈ ಅಕ್ರಮಕ್ಕೆ ಅವಕಾಶ ಕಲ್ಪಿಸಿದ್ದಾರೆ. ಇದು ದೇಶವಿರೋಧಿ ಚಟುವಟಿಕೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

UGC-NEET ಪರೀಕ್ಷೆಗಳನ್ನು ಕೇಂದ್ರ ಶಿಕ್ಷಣ ಇಲಾಖೆ ರದ್ದುಗೊಳಿಸಿ, ಅಕ್ರಮದ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಇಂದು ಮಾಧ್ಯಮಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತಮ್ಮ ಗಮನಕ್ಕೆ ತಂದಿದ್ದರು ಎಂದು ಹೇಳಿದ ಅವರು, ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದವೆಂದು ಹೇಳಿಕೊಳ್ಳುವ ನರೇಂದ್ರ ಮೋದಿಯವರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ನಿಲ್ಲಿಸಲು ಸಾಧ‍್ಯವಾಗಿಲ್ಲವೇ ಎಂದು ವ್ಯಂಗ್ಯವಾಡಿದರು.

ನಮ್ಮ ಎಲ್ಲ ಸಂಸ್ಥೆಗಳನ್ನು ಆಕ್ರಮಿಸಿಕೊಳ್ಳಲಾಗಿದೆ. ವಿಶ್ವವಿದ್ಯಾಲಯಗಳಿಗೆ ಅರ್ಹತೆ ಇಲ್ಲದ ಕುಲಪತಿಗಳನ್ನು ನೇಮಕ ಮಾಡಲಾಗುತ್ತಿದೆ. ಒಂದು ಸಂಸ್ಥೆಯೊಂದಕ್ಕೆ ಸೇರಿದ್ದಾರೆ ಎಂಬ ಒಂದೇ ಕಾರಣಕ್ಕೆ ಭಾರತೀಯ ಜನತಾ ಪಕ್ಷ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ನಾಶಗೊಳಿಸುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರು ಹೇಳದೆ ರಾಹುಲ್ ಗಾಂಧಿ ಟೀಕಿಸಿದರು.

ನರೇಂದ್ರ ಮೋದಿಯವರು ಡೀಮಾನಿಟೈಸೇಷನ್ ಮೂಲಕ ದೇಶದ ಆರ್ಥಿಕತೆಗೆ ಹೇಗೆ ಪೆಟ್ಟುಕೊಟ್ಟರೋ ಅದೇ ರೀತಿ ಭಾರತದ ಶಿಕ್ಷಣ ವ್ಯವಸ್ಥೆ ಮೇಲೂ ಪ್ರಹಾರ ಮಾಡುತ್ತಿದ್ದಾರೆ. ಸ್ವತಂತ್ರ, ವಸ್ತುನಿಷ್ಠ ಶಿಕ್ಷಣ ವ್ಯವಸ್ಥೆ ನಾಶಗೊಳ್ಳುತ್ತಿದೆ. ಈ ಅಕ್ರಮಗಳಲ್ಲಿ ಪಾಲ್ಗೊಂಡ ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಂಡು ಶಿಕ್ಷಿಸಬೇಕಿದೆ ಎಂದು ಅವರು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!