Wednesday, September 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ನಡೆಯುವ ನುಡಿ ಜಾತ್ರೆಯಲ್ಲಿ ಹೊಸ ದಾಖಲೆ ಸೃಷ್ಟಿ: ಮಹೇಶ್ ಜೋಶಿ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಹೊಸ ದಾಖಲೆಯನ್ನು ಸೃಷ್ಟಿ ಮಾಡುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿ ತಿಳಿಸಿದರು.

ಮಂಡ್ಯ  ಜಿಲ್ಲಾ ಪಂಚಾಯತಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಹೆಜ್ಜೆಯನ್ನು ಇಡಲಾಗುವುದು. ಇದು ಮುಂದೆ ಎಲ್ಲ ಸಾಹಿತ್ಯ ಸಮ್ಮೇಳನಕ್ಕೂ ಕೂಡ ಪರಂಪರೆಯಾಗಿ ಮುಂದುವರೆಯುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯ ಸದಸ್ಯರುಗಳು ಮತ್ತು ಜಿಲ್ಲಾಡಳಿತ ಒಟ್ಟಿಗೆ ಸೌಹಾರ್ದತೆಯಿಂದ ಕೆಲಸ ನಿರ್ವಹಿಸಲಿ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಕಾರ್ಯಕ್ರಮದಲ್ಲಿ ಹೊಸತನವನ್ನು ತರಲು ಆಧುನಿಕರಣದ ಸ್ಪರ್ಶವಾಗಬೇಕಿದೆ. ಹೊಸ ಹೆಜ್ಜೆಯನ್ನು ಇಡುವ ಸಂದರ್ಭದಲ್ಲಿ ಅನೇಕ ಟೀಕೆಗಳಿಗೆ ಗುರಿಯಾಗುವುದು ಸಹಜ ಅದನ್ನು ಸ್ವಾಗತಿಸಬೇಕು. ಪರಸ್ಪರ ಸಹಕಾರ, ಸಹಯೋಗ, ಸಹಭಾಗಿತ್ವ, ಸಹಾಯ ಮನೋಭಾವ, ಸಮನ್ವಯತೆ ಸೌಹಾರ್ದತೆ ಮತ್ತು ಸಮಾಲೋಚನೆಯಿಂದ ಒಟ್ಟಿಗೆ ಕೆಲಸ ಮಾಡಿದಾಗ ಟೀಕೆಗಳು ಸಾಯುತ್ತವೆ ಎಂದರು.

ಸಮ್ಮೇಳನಕ್ಕೆ ಜಿಲ್ಲಾಡಳಿತವು ಸಂಪೂರ್ಣ ಸಹಕಾರವನ್ನು ನೀಡುತ್ತಿದೆ. ಈ ರೀತಿಯ ಸಹಕಾರ ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ಸಿಕ್ಕರೆ ಯಾವುದೇ ಕಾರಣಕ್ಕೂ ಕಾರ್ಯಕ್ರಮದಲ್ಲಿ ತೊಂದರೆಯಾಗಲಿ, ಅಪಸ್ವರವಾಗಲಿ ಬರುವುದಿಲ್ಲ ಎಂದರು.

ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ 28 ಸಮಿತಿಗಳು ರಚನೆಯಾಗಿದೆ. ಅವುಗಳಲ್ಲಿ ಮೌಲಿಕ ಚಿಂತನೆಗಳು ಆಗಬೇಕು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಿಗರನ್ನು ಕರೆತರುವ ಅವಶ್ಯಕತೆ ಇಲ್ಲ. ಇದು ಕನ್ನಡಿಗರ, ಕನ್ನಡ ಭಾಷೆಯ, ಕನ್ನಡ ಸಂಸ್ಕೃತಿಯ, ಕನ್ನಡತನದ, ನಮ್ಮ ಅಸ್ಮಿತೆಯ ಸಮ್ಮೇಳನವಾಗಿದೆ. ಇಡೀ ಕರ್ನಾಟಕ ಜಿಲ್ಲೆಯ, ಗಡಿಭಾಗದ ಹಾಗೂ ವಿದೇಶದಲ್ಲಿರುವ ಕನ್ನಡ ಅಭಿಮಾನಿಗಳು ಸ್ವತಃ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ಕನ್ನಡಕ್ಕೆ ಜಾತಿ, ಧರ್ಮ ಇಲ್ಲ ಕನ್ನಡವೊಂದೇ ಧರ್ಮವಾಗಿದೆ. ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿ, ಜಲ, ನೆಲದ ಬಗ್ಗೆ ಅತ್ಯಂತ ಗಂಭೀರ ಚರ್ಚೆ ನಡೆಯುತ್ತದೆ. ಇಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆಡಳಿತ ಹೇಗೆ ನಡೆಯಬೇಕೆಂದು ದಿಕ್ಸೂಚಿಯನ್ನು ತೋರಿಸುತ್ತದೆ. ಜೊತೆಗೆ ಸಮ್ಮೇಳನದಲ್ಲಿ ಭಾವೈಕ್ಯತೆ ಉಂಟಾಗುತ್ತದೆ ಎಂದರು.

ಗೌರವ ತಂದು ಕೊಡುವ ವಿಷಯ

ಶಾಸಕ ಹಾಗೂ ಆಹಾರ ಸಮಿತಿಯ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದು ಗೌರವ ತಂದು ಕೊಡುವ ವಿಷಯವಾಗಿದೆ. ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರ, ಸಂಘ ಸಂಸ್ಥೆಗಳ ವಿಶ್ವಾಸ ಪಡೆದು ಹಲವಾರು ಸಭೆ ನಡೆಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಸಂಸ್ಕೃತಿಯನ್ನು ಬಿಂಬಿಸುವ ಹಬ್ಬ

87 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡದ ಹಬ್ಬ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಿದೆ. ಕನ್ನಡ ಮನಸ್ಸುಗಳು ಸೇರಿ ಮಾಡುವ ಹಬ್ಬ ಇದಾಗಿರುವುದರಿಂದ ಕನ್ನಡಿಗರ ಹಬ್ಬ ಎಂದು ಹೇಳಬಹುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಡಳಿತ ವತಿಯಿಂದ ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಹಾಗೂ ಮಂಡ್ಯ ಜಿಲ್ಲಾಡಳಿತ ಇಬ್ಬರು ಕೂಡ ಸಮನ್ವಯದಿಂದ ಒಟ್ಟುಗೂಡಿ ಈ ಒಂದು ಸಾಹಿತ್ಯ ಸಮ್ಮೇಳನವನ್ನ ಯಾವ ರೀತಿ ಯಶಸ್ವಿಯಾಗಿ ಆಯೋಜಿಸಬೇಕು ಎಂದು ಈ ಸಭೆಯನ್ನು ಆಯೋಜನೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಸಮ್ಮೇಳನ ಬಹುಶಃ ಮಂಡ್ಯ ಜಿಲ್ಲೆಯಲ್ಲಿ 3ನೇ ಬಾರಿ ಜರುಗಲಿದೆ. ಎಲ್ಲರೂ ಸಹ ಸಮನ್ವಯ, ಏಕತೆಯಿಂದ ಒಟ್ಟುಗೂಡಿ ಕಾರ್ಯಕ್ರಮದ ಕಾರ್ಯವೈಖರಿಯನ್ನು ಮಾಡಬೇಕಾಗಿದೆ‌ ಎಂದರು.

ಜಿಲ್ಲಾ ಪಂಚಾಯತಿ ಸಿಇಓ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್ ಎಲ್ ನಾಗರಾಜು ಮಾತನಾಡಿದರು.

ಸಭೆಯಲ್ಲಿ 86 ನೇ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಮನು ಬಳಿಗಾರ್, ಕ.ಸಾ.ಪ ಸಂಚಾಲಕಿ ಡಾ ಮೀರಾ ಶಿವಲಿಂಗಯ್ಯ, ಕೇಂದ್ರ ಕಸಾಪ ಗೌರವ ಕಾರ್ಯದರ್ಶಿ ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಾಟೇಲ್, ಕೇಂದ್ರ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಹರ್ಷ ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!