Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಾಂಡವಪುರ | ಮಹಿಳಾ ಸಿಬ್ಬಂದಿಯನ್ನು ಹೊರಗೆ ತಳ್ಳಿ ಬೀಗ ಹಾಕಿದ ನಿರಾಣಿ ಶುಗರ್ಸ್

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರಿಗೆ ಸೇರಿದ ಸಹಕಾರ ಸಕ್ಕರೆ ಕಾರ್ಖಾನೆಯ ಮಹಿಳಾ ಸಿಬ್ಬಂದಿಯೊಬ್ಬರನ್ನು ಅಮಾನುಷವಾಗಿ ಕಚೇರಿಯಿಂದ ಹೊರಗೆ ತಳ್ಳಿ ಬೀಗ ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದ್ದು, ಸಚಿವರ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಹಕಾರ ಸಕ್ಕರೆ ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ಯರಗಟ್ಟಿ ಅವರು ಸಿವಿಲ್‌ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಭಾನುಪ್ರಿಯಾ ಅವರನ್ನು ಕಚೇರಿಯಿಂದ ಹೊರಗೆ ತಳ್ಳಿ ಬೀಗ ಹಾಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರ ತಿಳಿಸಿದರೂ ಸ್ಥಳಕ್ಕೆ ಬಂದಿಲ್ಲ. ಪ್ರಕರಣವನ್ನು ಖಂಡಿಸಿ ಭಾನುಪ್ರಿಯಾ ಅವರು ಸಂಜೆಯವರೆಗೂ ಕಚೇರಿ ಎದುರಿನಲ್ಲಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

“ಬಳಿಕ ಅಸ್ವಸ್ಥಗೊಂಡ ಭಾನುಪ್ರಿಯಾ ಅವರನ್ನು ಪಾಂಡವಪುರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟಾದರೂ ಸಂಬಂಧಪಟ್ಟ ಕಾರ್ಖಾನೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿಲ್ಲ” ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಈ ಸಂಬಂಧ ಸಂತ್ರಸ್ತೆ ಭಾನುಪ್ರಿಯಾ ಅವರು ಮಾತನಾಡಿ, “ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ 12 ವರ್ಷಗಳಿಂದ ಸಿವಿಲ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ದಿನನಿತ್ಯ ಎಂದಿನಂತೆ ಕಾರ್ಖಾನೆಗೆ ತೆರಳಿ ಕೆಲಸದಲ್ಲಿ ತೊಡಗಿಕೊಂಡಿದ್ದೆ. ಆದರೆ ಮೊನ್ನೆ ನನ್ನ ಬ್ಯಾಗನ್ನು ಹೊರಗೆ ಎಸೆದು ಕಚೇರಿಗೆ ಬೀಗ ಹಾಕಿದ್ದರು. ಈ ಬಗ್ಗೆ ಕೇಳಿದಾಗ ಸಂಬಂಧಪಟ್ಟವರು ಯಾರೂ ಸ್ಪಂದಿಸಲಿಲ್ಲ. ನಾನು ತಿಂಡಿ, ಊಟವನ್ನೂ ಮಾಡದೇ ಇಡೀ ದಿನ ಹೊರಗಡೆ ಬಿಸಿಲಲ್ಲಿ ಕುಳಿತುಕೊಂಡಿದ್ದೆ. ಹೀಗಾಗಿ ತಲೆಸುತ್ತು ಬಂದು ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ” ಎಂದು ತಮ್ಮ ಅಳಲು ತೋಡಿಕೊಂಡರು.

“ವಾಂತಿ ಇನ್ನೂ ಕಡಿಮೆಯಾಗಿಲ್ಲ. ಸಂಪೂರ್ಣ ಆರೋಗ್ಯ ಸುಧಾರಣೆಗೆ ಇನ್ನೆರಡು ದಿನ ಆಸ್ಪತ್ರೆಯಲ್ಲಿ ಇರಬೇಕೆಂದು ವೈದ್ಯರು ತಿಳಿಸಿದ್ದಾರೆ. ಆದರೆ, ಕಾರ್ಖಾನೆಯವರು ದೂರವಾಣಿ ಕರೆ ಮಾಡಿ ಕೇವಲ ಎರಡು ದಿನದ ಆಸ್ಪತ್ರೆ ಖರ್ಚು ಅನ್ನು ಮಾತ್ರ ಭರಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಭವಿಷ್ಯದ ದಿನಗಳ ಬಗ್ಗೆ ಆತಂಕವಾಗುತ್ತಿದೆ” ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!