Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಚ್ಚಿದಾನಂದಗೆ ದೊಡ್ಡ ಸೇವೆ ಮಾಡುವ ಅವಕಾಶ ಸಿಗಲಿ : ನಿರ್ಮಲಾನಂದನಾಥಶ್ರೀ

ಆದಿಚುಂಚನಗಿರಿ ಮಠದ ನೆಚ್ಚಿನ ಭಕ್ತನಾದ ಬಿಜೆಪಿ ಮುಖಂಡ ಸಚ್ಚಿದಾನಂದ ಜನರ ಸೇವೆ ಮಾಡುತ್ತಿದ್ದು, ಆತನಿಗೆ ಇನ್ನೂ ದೊಡ್ಡದಾಗಿ ಸೇವೆ ಮಾಡುವ ಅವಕಾಶ ಸಿಗಲಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಶುಭ ಕೋರಿದರು.

ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶ್ರೀ ಶಂಕರೇಗೌಡ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಆಟೋ ಚಾಲಕರಿಗೆ ಸಮವಸ್ತ್ರ ಹಾಗೂ 10,000 ಮಂದಿಗೆ ಉಚಿತ ಹೆಲ್ಮೆಟ್ ವಿತರಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ವ್ಯಕ್ತಿ ತಾನು ಬದುಕಿದ್ದಾಗ ಮತ್ತು ಮರಣದ ನಂತರವೂ ತನ್ನ ಹೆಸರನ್ನು ಜನರ ಮನಸ್ಸಿನಲ್ಲಿ ಉಳಿಯುವಂತಹ ಕೆಲಸ ಮಾಡಬೇಕು. ಜನತೆ ಅಂಥವರನ್ನು ಯಾವಾಗಲೂ ನೆನಪಿಸಿಕೊಳ್ಳಬೇಕು ಆಗ ಜೀವನ ಸಾರ್ಥಕವಾಗುತ್ತದೆ ಇಂತಹ ಕೆಲಸವನ್ನು ಶ್ರೀಮಠದ ನೆಚ್ಚಿನ ಹುಡುಗ ಸಚ್ಚಿದಾನಂದ ಅವರ ತಂದೆ ಶಂಕರೇಗೌಡರ ನೆನಪಿನಲ್ಲಿ ಮಾಡುತ್ತಿರುವುದು ಶ್ಲಾಘನೀಯ. ಆತನಿಗೆ ಇನ್ನೂ ದೊಡ್ಡ ಸೇವೆ ಮಾಡುವ ಅವಕಾಶ ಸಿಗಲಿ ಎಂದು ಹಾರೈಸಿದರು.

ಇತ್ತೀಚಿಗೆ ಇಬ್ಬರು ಯುವಕರು ಹೆಲ್ಮೆಟ್ ಹಾಕದ ಕಾರಣ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದನ್ನು ಕಂಡ ಸಚ್ಚಿದಾನಂದ ಉಚಿತವಾಗಿ ಹೆಲ್ಮೆಟ್ ವಿತರಿಸುವ ಆಲೋಚನೆ ಮಾಡಿ ಹತ್ತು ಸಾವಿರ ಮಂದಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡುತ್ತಿದ್ದಾರೆ. ಅವರ ತಂದೆಯ ಹೆಸರಿನಲ್ಲಿ ಮಾಡುತ್ತಿರುವ ಈ ಸೇವೆ ಅನನ್ಯವಾದುದು. ನಿಸ್ವಾರ್ಥವಾಗಿ ಜನರ ಸೇವೆ ಮಾಡುತ್ತಿರುವ ಸಚ್ಚಿದಾನಂದ ಅವರಿಗೆ ಇನ್ನು ಹೆಚ್ಚಿನ ಸ್ಥಾನಮಾನಗಳು ದೊರಕಲಿ ಎಂದರು.

ಸಚ್ಚಿದಾನಂದ ಶ್ರೀಮಠದ ನೆಚ್ಚಿನ ಹುಡುಗನಾಗಿದ್ದು ಶ್ರೀ ಬಾಲಗಂಗಾಧರ ಸ್ವಾಮೀಜಿಯವರ ಮಾನಸ ಪುತ್ರ ರಾಗಿದ್ದರು. ಅವರಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆದಿಚುಂಚನಗಿರಿ ಮಠಕ್ಕೆ ಬಾಲಕಿಯರ ಹಾಸ್ಟೆಲ್ ಕಟ್ಟಿ ಕೊಡಲಾಗಿದ್ದು, ಈ ಕಟ್ಟಡ ನಿರ್ಮಾಣದಲ್ಲಿ ಸಚ್ಚಿದಾನಂದ ಅವರ ಪಾತ್ರ ಬಹಳ ಮುಖ್ಯವಾಗಿದೆ. ಈ ಹಾಸ್ಟೆಲ್ ಗೆ ರಾಜ್ಯದ ನಾನಾ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಉಚಿತ ವಸತಿ, ಶಿಕ್ಷಣ ಸೌಲಭ್ಯ ಪಡೆಯುತ್ತಿದ್ದಾರೆ. ಐಎಎಸ್, ಐಪಿಎಸ್ ತರಬೇತಿ ಮಾಡುತ್ತಿರುವ ಹಲವರಿಗೆ ಸಚ್ಚಿದಾನಂದ ಅವರು ಮಾಡಿರುವ ಸೇವೆ ತಿಳಿಯಲಿ ಎಂದರು.

ಇಂದಿನ ಕಾರ್ಯಕ್ರಮ ಜುಲೈ ಒಂದರಂದು ಆಗಬೇಕಿತ್ತು.ಆದರೆ ವಿರೋಧ ಪಕ್ಷದ ನಾಯಕ ಅಶೋಕ್ ಅವರ ಜನ್ಮದಿನ ಅಂದು ಇದ್ದುದರಿಂದ ಈ ಕಾರ್ಯಕ್ರಮವನ್ನು ಇಂದು ಮಾಡಬೇಕಾಯಿತು. ಆರ್.ಅಶೋಕ್ ರವರು ಗೃಹ, ಸಾರಿಗೆ, ಆರೋಗ್ಯ, ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿ, ಈಗ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನ ಸಮಸ್ತ ಕನ್ನಡಿಗರ ಮುಖವಾಣಿಯಾಗಿದ್ದು, ರಾಜ್ಯದ ಜನರ ಸಮಸ್ಯೆಯನ್ನು ಆಲಿಸಿ ಅವರಿಗೆ ಪರಿಹಾರ ಒದಗಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಸ್ಥಾಪನೆಯಾಗಲು ಆರ್. ಅಶೋಕ್ ರವರ ಕಾರಣರಾಗಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರನ್ನು ಕರೆಸಿ ಪ್ರತಿಮೆಯನ್ನು ಉದ್ಘಾಟನೆ ಮಾಡಿಸುವ ಮೂಲಕ ಸಮುದಾಯದ ಅಸ್ಮಿತೆ ಎತ್ತಿ ಹಿಡಿದಿದ್ದಾರೆ. ಹಾಗೆಯೇ ವಿಧಾನಸೌಧದ ಬಳಿ ಕೆಂಪೇಗೌಡರ ಪ್ರತಿಮೆಯನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಸ್ಥಾಪಿಸುವ ಮೂಲಕ ನಾಡಿನಲ್ಲಿ ಒಕ್ಕಲಿಗ ಸಮುದಾಯದ ಹಿರಿಮೆ ಎತ್ತಿ ಹಿಡಿದಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಶ್ರೀರಂಗಪಟ್ಟಣ ದಸರಾ ಆರಂಭಿಸಿದ ಕೀರ್ತಿ ಅಶೋಕ್ ಅವರದು. ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಆಯಾಮಗಳನ್ನು ತಂದಿದ್ದಲ್ಲದೆ, ಆರೋಗ್ಯ ಮತ್ತು ಕಂದಾಯ ಇಲಾಖೆಯಲ್ಲಿ ಉತ್ತಮ ವ್ಯವಸ್ಥೆಯನ್ನು ಆರ್. ಅಶೋಕ್ ರವರು ಮಾಡುವ ಮೂಲಕ ಹಲವು ಪ್ರಥಮಗಳಿಗೆ ಕಾರಣರಾಗಿದ್ದಾರೆ ಎಂದು ಬಣ್ಣಿಸಿದರು.

ಅನ್ನವನ್ನು ತಿಂದು ದೇಹವನ್ನು ಬೆಳೆಸಬೇಕು, ಮನಸ್ಸಿಗೆ ಹಿರಿಯ ಸಾಧಕರ ಮಾರ್ಗದರ್ಶನವನ್ನು ಕೊಟ್ಟು ಬೆಳೆಸಬೇಕು. ಅದರಂತೆ ನಾಡಿನ ಹಿರಿಯರ ಮಾರ್ಗದರ್ಶನವನ್ನು ಮುಂದಿನ ಪೀಳಿಗೆಗೆ ನೀಡಬೇಕೆನ್ನುವ ಉದ್ದೇಶದಿಂದ ಬಸವಣ್ಣ,ಕೆಂಪೇಗೌಡ ಲರಂತಹ ಪ್ರತಿಮೆಗಳನ್ನು ಸ್ಥಾಪಿಸಲು ಬೇಕಿದೆ ಎಂದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಸಚ್ಚಿದಾನಂದ ನಾನು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಕೆಆರ್ಎಸ್ ಕಟ್ಟಲು ಬಂದು ಇಲ್ಲೇ ನೆಲೆ ನಿಂತವರಿಗೆ ಹಕ್ಕುಪತ್ರ ಕೊಡಿಸುವ ಕೆಲಸವನ್ನು ಮಾಡಿದ್ದಾರೆ. ಈಗ ಹತ್ತು ಸಾವಿರ ಹೆಲ್ಮೆಟ್ ಅನ್ನು ಉಚಿತವಾಗಿ ನೀಡುವ ಮೂಲಕ ಉತ್ತಮ ಕೆಲಸ ಮಾಡಿರುವ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಚ್ಚಿದಾನಂದ ಅವರಿಗೆ ಉತ್ತಮ ನಾಯಕನಾಗುವ ಎಲ್ಲಾ ಲಕ್ಷಣಗಳಿವೆ. ಜನರ ಪ್ರೀತಿಯ ನಾಯಕನಾಗಿ ಬೆಳೆಯುತ್ತಿರುವ ಸಚ್ಚಿದಾನಂದ ಅವರಿಗೆ ನನ್ನ ಆಶೀರ್ವಾದ ಎಂದೆಂದಿಗೂ ಇರುತ್ತದೆ ಎಂದು ಶುಭ ಹಾರೈಸಿದರು.

ಕೊಮ್ಮೇರರಳ್ಳಿ ಆದಿಚುಂಚನಗಿರಿ ಶಾಖಾ ಮಠದ ಶ್ರೀಪುರುಷೋತ್ತಮನಾದ ಸ್ವಾಮೀಜಿ, ಮಾಜಿ ಸಚಿವ ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಮ್, ಎಸ್. ಪಿ. ಸ್ವಾಮಿ, ಗ್ರಾ.ಪಂ.ಸದಸ್ಯ ರಾಮಚಂದ್ರು, ಯಮದೂರು ಸಿದ್ದರಾಜು ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ