Saturday, November 21, 2026

ಪ್ರಾಯೋಗಿಕ ಆವೃತ್ತಿ

ರಾಜ್ಯ ಹೆದ್ದಾರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ


  • ತನಿಖೆಗೆ ಹೈಕೋರ್ಟ್ ಆದೇಶ ನೀಡಿದ್ದರೂ, ರಾಜ್ಯ ಸರ್ಕಾರದ ಅನುಮತಿ ಸಿಕ್ಕಿಲ್ಲ

  • ಭ್ರಷ್ಟಾಚಾರದ ದಾಖಲೆಗಳನ್ನು ತೆರದಿಟ್ಟ ಗುತ್ತಿಗೆದಾರ ಎಂ.ಕೆ.ಕುಮಾರ್

4500 ಕೋಟಿ ರೂ.ಗಳ ಮೊತ್ತದ ರಾಜ್ಯ ಹೆದ್ದಾರಿ ಯೋಜನೆ ಹಂತ-4ರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ, ರಾಜ್ಯ ಸರ್ಕಾರ ತನಿಖೆಗೆ ಅನುಮತಿ ನೀಡುತ್ತಿಲ್ಲ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಕೆ.ಕುಮಾರ್ ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ 4500 ಕೋಟಿ ಮೊತ್ತದಲ್ಲಿ 160 ಪ್ಯಾಕೇಜ್ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿತ್ತು, ಈ ಟೆಂಡರ್ ಪ್ರಕ್ರಿಯೆಗಳಲ್ಲಿ ಟೆಂಡರ್ ಸಲ್ಲಿಸುವ ಮೊದಲೇ ನಿರ್ಧರಿಸಿದ ಗುತ್ತಿಗೆದಾರರಿಗೆ, ಹೆಚ್ಚಿನ ದರಗಳಿಗೆ ಅಕ್ರಮವಾಗಿ ಟೆಂಡರ್ ವಹಿಸಲಾಗಿದೆ ಎಂದು ದೂರಿದರು.

ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರು ನಕಲಿ ದಾಖಲೆಗಳನ್ನು ನೀಡಿ ಅಕ್ರಮವಾಗಿ ಕಾಮಗಾರಿಗಳನ್ನು ಪಡೆದುಕೊಂಡಿದ್ದಾರೆ.  ಈ ಟೆಂಡರುಗಳಲ್ಲಿ ಶೇ.15ಕ್ಕೂ ಹೆಚ್ಚಿನ ದರಗಳನ್ನು ನಮೂದಿಸಿರುವ ಗುತ್ತಿಗೆದಾರರ ಜೊತೆ ಅಧಿಕಾರಿಗಳು ಒಪ್ಪಂದ ಮಾಡಿಕೊಂಡು, ದಾಖಲೆ ಸೃಷ್ಟಸಿ, ಈ ಮೊದಲೇ ತೀರ್ಮಾನಿಸಿದಂತೆ ಶೇ.10 ರವರೆಗೂ ಹೆಚ್ಚಿನ ದರಗಳನ್ನು ಕೊಟ್ಟು, ಕೇವಲ ನಿಯಮಾನುಸಾರ ಕರ್ತವ್ಯ ನಿರ್ವಹಿಸಿರುವಂತೆ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಅಪಾದಿಸಿದರು.

ಈ ಅಕ್ರಮಗಳ ಬಗ್ಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ರಾಜ್ಯ ಹೆದ್ದಾರಿ ಯೋಜನೆ ಹಂತ-1ರ ಮುಖ್ಯ ಯೋಜನಾಧಿಕಾರಿಗೆ, ಆರ್ಥಿಕ ಇಲಾಖೆ, ACB ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇನೆ. ಈ ಯೋಜನೆಯ ಅಕ್ರಮದಲ್ಲಿ ಸರ್ಕಾರಕ್ಕೆ ಕನಿಷ್ಠ 1000 ದಿಂದ 1200 ಕೋಟಿ ರೂ.ಗಳವರೆಗೆ ನಷ್ಟವಾಗಿದೆ ಎಂದು ಹೇಳಿದರು.

ಈ ಅಕ್ರಮದ ವಿರುದ್ಧ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್-23ರಲ್ಲಿ ದೂರನ್ನು ದಾಖಲಿಸಿದ್ದೆ. ಆದರೆ ದೂರು ವಜಾ ವಜಾಗೊಂಡಿತ್ತು. ನಂತರ ಹೈ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಈ ಟೆಂಡರುಗಳಲ್ಲಿ ಗುತ್ತಿಗೆದಾರರು ಭಾಗವಹಿಸದೆ ಇರಬಹುದು, ಆದರೆ ಅವರು ಸಲ್ಲಿಸಿರುವ ದಾಖಲೆಗಳಲ್ಲಿ ಅಕ್ರಮಗಳ ಬಗ್ಗೆ ಸಾಕಷ್ಟು ಮಾಹಿತಿ ಇದೆ ಎಂದು ತನಿಖೆಗೆ ಆದೇಶ ನೀಡಿದೆ. ಆದರೆ ಈ ತನಿಖೆಗೆ ಸರ್ಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ವಿವರಿಸಿದರು.

ಸದನದಲ್ಲಿ ಚರ್ಚೆಯಾಗಲಿ 

ಈ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಎಲ್ಲಾ ದಾಖಲಾತಿಗಳನ್ನು ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ, ಆದ್ದರಿಂದ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಸದಸದಲ್ಲಿ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು.

ಭ್ರಷ್ಟಾಚಾರ ನಿಯಂತ್ರಣ ತಿದ್ದುಪಡಿ ಕಾಯ್ದೆ ರದ್ಧು ಮಾಡಲಿ

ಪ್ರಧಾನಿ ನರೆಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಕಾಯ್ದೆಯನ್ನು ದುರ್ಬಲಗೊಳಿಸಿದ್ಧಾರೆ. ಪ್ರಸ್ತುತ ತಿದ್ದುಪಡಿ ಕಾಯ್ದೆಯ ಪ್ರಕಾರ ಅಕ್ರಮ ಭ್ರಷ್ಟಾಚಾರ ತನಿಖೆಗೆ ನ್ಯಾಯಾಲಯ ಆದೇಶ ನೀಡಿದ್ದರೂ, ಸರ್ಕಾರದಿಂದಲೂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಆದರೆ, ಸರ್ಕಾರವು  ಅನುಮತಿ ನೀಡಲು 4 ತಿಂಗಳ ಕಾಲಾವಕಾಶದ ಗಡುವು ಇರುವುದರಿಂದ ಹಲವು ಭ್ರಷ್ಟಾಚಾರಗಳ ತನಿಖೆಗೆ ಅನುಮತಿ ಪಡೆಯುವುದು ಕಷ್ಟವಾಗಿದೆ. ಆದ್ದರಿಂದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ತಿದ್ದುಪಡಿಯನ್ನು ರದ್ಧು ಮಾಡಬೇಕೆಂದು ಆಗ್ರಹಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ