Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಡಾ ಪ್ರಕರಣ| ರಾಜ್ಯಪಾಲರಿಂದ ಸಿಎಂಗೆ ನೋಟಿಸ್ : ಇಂದು ಸಂಪುಟ ಸಭೆ

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿರುವ ಅರ್ಜಿಯಲ್ಲಿನ ಆರೋಪಗಳ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ.

ಜುಲೈ 27ರಂದೇ ರಾಜ್ಯಪಾಲರಿಂದ ಮುಖ್ಯಮಂತ್ರಿಗೆ ನೋಟಿಸ್ ಬಂದಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಮುಂದಿನ ನಡೆಯ ಕುರಿತು ಚರ್ಚಿಸಲು ಇಂದು (ಆ.1) ಸಚಿವ ಸಂಪುಟ ಸಭೆ ಕರೆಯಲಾಗಿದೆ.

ನೋಟಿಸ್‌ಗೆ ವಿವರಣೆ ನೀಡುವ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಿಂದ ಹೊರಗುಳಿಯಲಿದ್ದು, ಹಿರಿಯ ಸಚಿವರೊಬ್ಬರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯ ಬಳಿಕ ರಾಜ್ಯಪಾಲರ ನೋಟಿಸ್‌ಗೆ ಉತ್ತರ ನೀಡುವ ಕುರಿತು ನಿರ್ಧಾರ ಹೊರಬೀಳಲಿದೆ ಎನ್ನಲಾಗಿದೆ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪ ಇಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಪ್ರಕರಣ ಇದಾಗಿದ್ದು, ಅಧಿಕಾರ ದುರುಪಯೋಗದ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಹೀಗಾಗಿ, ನೋಟಿಸ್ ವಾಪಸ್ ಪಡೆಯುವಂತೆ ರಾಜ್ಯಪಾಲರನ್ನು ಕೋರುವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ ತಿಳಿದು ಬಂದಿದೆ.

ಒಂದು ವೇಳೆ ಉತ್ತರ ನೀಡುವುದು ಅನಿವಾರ್ಯವಾದರೆ, ಅದರಲ್ಲಿ ಏನೆಲ್ಲ ವಿಷಯಗಳನ್ನು ಪ್ರಸ್ತಾಪಿಸಬೇಕು. ಮುಖ್ಯಮಂತ್ರಿಯವರನ್ನು ಯಾವ ರೀತಿ ಸಮರ್ಥಿಸಿಕೊಳ್ಳಬೇಕು ಹಾಗೂ ಕಾನೂನಿನ ಆಯಾಮಗಳೇನು? ಎಂಬುವುದರ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾಣ ಕೈಗೊಳ್ಳಬಹುದು ಎಂದು ಹೇಳಲಾಗ್ತಿದೆ.

ಸಿಎಂ ಸಿದ್ದರಾಮಯ್ಯ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ವಕೀಲ ಟಿ.ಜೆ ಅಬ್ರಹಾಂ ಅವರು 22 ಪುಟಗಳ ಅರ್ಜಿಯನ್ನು ಜುಲೈ 26ರಂದು ರಾಜ್ಯಪಾರಿಗೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ನಡೆಸಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 55.80 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

ಕಾನೂನು ಹೋರಾಟ : ಕೃಷ್ಣಬೈರೇಗೌಡ

ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರ ಕಚೇರಿಯಿಂದ ನೋಟಿಸ್ ಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೃಷ್ಣಬೈರೇಗೌಡ ಅವರು ” ರಾಜ್ಯಪಾಲರ ಕಚೇರಿ ದುರುಪಯೋಗಪಡಿಸಿಕೊಂಡು ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ಮುಂದಾದರೆ, ನಾನು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲಿದ್ದೇವೆ ಎಂದಿದ್ದಾರೆ.

ಬುಧವಾರ ಹಾಸನ ಜಿಲ್ಲೆ ಸಕಲೇಪುರದ ತಾಲೂಕಿನ ದೊಡ್ಡತಪ್ಪಲೆ ಬಳಿ ಭೂಕುಸಿತ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಿಗೆ ದೂರು ಕೊಟ್ಟು, ಅವರಿಂದ ಸರ್ಕಾರಕ್ಕೆ ಪತ್ರಗಳನ್ನು ಬರೆಸಿ, ಏನಾದರು ಮಾಡಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!