Thursday, September 26, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನುಡಿ ಹಬ್ಬ| ಉಪ ಸಮಿತಿಗಳು ಕಾರ್ಯೋನ್ಮುಖವಾಗಲು ದರ್ಶನ್ ಪುಟ್ಟಣ್ಣಯ್ಯ ಸೂಚನೆ

ಡಿಸೆಂಬರ್ ೨೦,೨೧ ಮತ್ತು ೨೨ ರಂದು ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿಯ ಉಪಸಮಿತಿಗಳು ತಕ್ಷಣ ಕಾರ್ಯೋನ್ಮುಖವಾಗುವಂತೆ ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಚಾರಸಮಿತಿ ಸದಸ್ಯರನ್ನುದ್ದೇಶಿಸಿ ಮಾತನಾಡಿ ಈಗಾಗಲೇ ಕೆಲವು ನಿಗದಿತ ಕೆಲಸಗಳಿಗೆ ಕಂಪನಿಗಳನ್ನು ಆಯ್ಕೆ ಮಾಡಿದ್ದು ರಚಿತವಾಗಿರುವ ಉಪಸಮಿತಿಗಳ ಸದಸ್ಯರು ಆಯಾ ಕಂಪನಿಗಳೊಂದಿಗೆ ಚರ್ಚಿಸಿ ಕಾರ್ಯೋನ್ಮುಮುಖರಾಗಬೇಕೆಂದು ತಿಳಿಸಿದರು.

ಶ್ರೀರಂಗಪಟ್ಟಣ ಮತ್ತು ಮೈಸೂರು ದಸರಾ ಸಮೀಪಿಸುತ್ತಿರುವುದರಿಂದ ಇನ್ನು ಎರಡು ಮೂರು ದಿನದೊಳಗೆ ‘ಸೋಶಿಯಲ್ ಮೀಡಿಯಾ ಮತ್ತು ಗ್ರಾಫಿಕ್ ಡಿಸೈನ್’ ಹೊಣೆ ಹೊತ್ತಿರುವ ಕಂಪನಿಯವರು ಪ್ರಚಾರ ಮಾಹಿತಿಯನ್ನು ನೀಡಬೇಕು ಎಂದರು.

ಸ್ವಾಗತ ಗೀತೆ ರಚಿಸಿ: ಈಗಾಗಲೇ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ ಆರಂಭಿಸಿದ್ದು ರಥಯಾತ್ರೆಯಲ್ಲಿ ಅಳವಡಿಸಲು ಸ್ವಾಗತ ಗೀತೆಯೊಂದನ್ನು ಶೀಘ್ರದಲ್ಲಿ ರಚಿಸಿ ಸೂಕ್ತ ಸಂಗೀತ ಸಂಯೋಜನೆ ನೀಡಿ ಜಿಲ್ಲಾ ಕಸಾಪ ಸಮನ್ವಯ ಸಮಿತಿಯ ಅನುಮೋದನೆಗೆ ಸಲ್ಲಿಸಬೇಕು ಎಂದರು. ಲೇಖಕಿ ಸುಮಾರಾಣಿ ಶಂಭು ಮತ್ತು ಡಾ.ಮಾದೇಶ್ ತಾವು ರಚಿಸಿದ ಕವನಗಳನ್ನು ವಾಚಿಸಿದರು.

ಸಭೆಯಲ್ಲಿ ಹಾಜರಿದ್ದ ನಾಲ್ಕು ಉಪಸಮಿತಿಗಳ ಸದಸ್ಯರು ತಾವು ಮಾಡಬೇಕಾದ ಕಾರ್ಯಗಳ ರೂಪುರೇಷೆಗಳ ಬಗ್ಗೆ ಪ್ರತ್ಯೇಕ ಚರ್ಚೆ ನಡೆಸಿದರು. ಪತ್ರಿಕೆಗಳಲ್ಲಿ ಮತ್ತು ವಾಹಿನಿಗಳಲ್ಲಿ ಅಳವಡಿಸಬಹುದಾದ ಪ್ರಚಾರದ ಜಾಹೀರಾತು ಮತ್ತು ದೃಶ್ಯಗಳನ್ನು ರಚಿಸಲು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ನೇತೃತ್ವದಲ್ಲಿ ಪತ್ರಕರ್ತರಾದ ಬಿ.ಟಿ.ಮೋಹನಕುಮಾರ್, ಪ್ರಶಾಂತ್ ಮತ್ತು ಹೊಳಲು ಶ್ರೀಧರ್ ಇದ್ದ ಉಪಸಮಿತಿ ಸಂಬಂಧಿಸಿದವರಿಗೆ ಸೂಚಿಸಿತು.

ಕಬ್ಬು ಕಡಿಯುವ ಸ್ಪರ್ಧೆ

ಈವೆಂಟ್ ಸಮಿತಿಯ ಸದಸ್ಯರಾದ ಶಿವಪ್ರಸಾದ್, ಶಂಭು ಕಬ್ಬನಹಳ್ಳಿ, ಸಬ್ಬನಹಳ್ಳಿ ಶಶಿಧರ, ಮಂಚಶೆಟ್ಟಿ, ಗುಣಶೇಖರ್ ಭಾಗವಹಿಸಿ ಸಮಿತಿಯ ವತಿಯಿಂದ ಅಕ್ಟೋಬರ್ ೧೩ ರಂದು ಕಬ್ಬು ಕಡಿಯುವ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಮಂಡ್ಯ ನಗರದಲ್ಲಿ ಮ್ಯಾರಥಾನ್ ಓಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

೮೭ ಸ್ವಾಗತ ದ್ವಾರಗಳನ್ನು ನಿರ್ಮಿಸಲು ಕ್ರಮ

ಮುದ್ರಣ(ಆಫ್‌ಲೈನ್ ಸಬ್ ಕಮಿಟಿ) ಉಪಸಮಿತಿಯಲ್ಲಿ ಸದಸ್ಯರಾದ ಶ್ರೀನಿವಾಸ್, ದರಸಗುಪ್ಪೆ ಧನಂಜಯ ರವರು ಮಾತನಾಡುತ್ತಾ, ಸಮ್ಮೇಳನದ ಅಂಗವಾಗಿ ೮೭ ಸ್ವಾಗತ ದ್ವಾರ ನಿರ್ಮಿಸಲು ಆಲೋಚನೆ ಮಾಡಿದ್ದು, ಇವುಗಳನ್ನು ಎಲ್ಲಿ ಹೇಗೆ ಅಳವಡಿಸಬೇಕೆಂದು ರಾಜ್ಯ -ಜಿಲ್ಲಾ ಕಸಾಪ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.

ವಾರ್ತಾ-ಪ್ರವಾಸೋದ್ಯಮ ಇತರೆ ಇಲಾಖೆ ಹಾಗೂ ಎಲ್ಲಾ ಪೆಟ್ರೋಲ್‌ಬಂಕ್‌ಗಳಲ್ಲಿ ಪ್ರಚಾರ ಹೋರ್ಡಿಂಗ್ಸ್ಗಳಲ್ಲಿ, ಜೊತೆಗೆ ಬಸ್ಸುಗಳು – ರೈಲುಗಳು -ಆಟೋ -ದ್ವಿಚಕ್ರ ವಾಹನಗಳಲ್ಲಿ ಸ್ಟಿಕ್ಕರ್ ಅಂಟಿಸಿ ಪ್ರಚಾರಪಡಿಸುವ ಸಲುವಾಗಿ ವಿನ್ಯಾಸ ಉಪಸಮಿತಿಯ ಜೊತೆ ಸಮನ್ವಯತೆಯಿಂದ ಮುಂದುವರೆಯುವುದಾಗಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವಪ್ಪ, ಸದಸ್ಯ ಕಾರ್ಯದರ್ಶಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ, ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ,ಮದ್ದೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಾಳೀರಯ್ಯ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ವಿ.ಹರ್ಷ ಪಣ್ಣೆದೊಡ್ಡಿ,ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ವಿಶೇಷಾಧಿಕಾರಿ ಚಂದ್ರಶೇಖರ್, ಎಲ್.ಕೃಷ್ಣ, ನಂದನ್, ರಂಗಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!