Thursday, September 19, 2024

ಪ್ರಾಯೋಗಿಕ ಆವೃತ್ತಿ

ನರ್ಸಿಂಗ್ ವೃತ್ತಿಯನ್ನು ಗೌರವಿಸಿ, ನ್ಯಾಯ ಒದಗಿಸಿ – ಶಾಸಕ ಪಿ. ರವಿಕುಮಾರ್

ನರ್ಸಿಂಗ್ ವೃತ್ತಿಯನ್ನು ಹೆಚ್ಚು ಗೌರವಿಸುವ ಮೂಲಕ ವೃತ್ತಿಗೆ ನ್ಯಾಯ ದೊರಕಿಸಿ ಕೊಡುವ ಜತೆಗೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವುದು ಅಗತ್ಯ ಎಂದು ಶಾಸಕ ಪಿ. ರವಿಕುಮಾರ್ ಅಭಿಪ್ರಾಯಿಸಿದರು.

ಎಇಟಿ ನರ್ಸಿಂಗ್ ಕಾಲೇಜು ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ನರ್ಸಿಂಗ್ ಕಾಲೇಜು ವತಿಯಿಂದ  ಮಂಡ್ಯನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆದ ನರ್ಸಿಂಗ್ ಪೂರೈಸಿದ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನರ್ಸಿಂಗ್ ವೃತ್ತಿ, ವೈದ್ಯ ವೃತ್ತಿಗಿಂತ ಹೆಚ್ಚು ಮಹತ್ವ ಉಳ್ಳದ್ದು. ಪ್ರತಿಜ್ಞಾ ಸ್ವೀಕಾರ ಮಾಡಿದಂತೆ ನಡೆದುಕೊಳ್ಳುವ ಮೂಲಕ ವೃತ್ತಿ ಗೌರವ ಹೆಚ್ಚಿಸಿ. ಮದರ್‌ ಥೆರೆಸಾ ಸೇರಿದಂತೆ ಹಲವು ಮಹನೀಯರನ್ನು ಮಾದರಿಯಾಗಿಟ್ಟುಕೊಂಡು ಸೇವೆ ಮಾಡುವಂತೆ ಸಲಹೆ ನೀಡಿದರು.

ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಎಷ್ಟೋ ಮಂದಿ ದೇಶದ ಹಲವು ಸ್ಥಳಗಳಲ್ಲಿ ಉದ್ಯೋಗನಿರತರಾಗಿದ್ದಾರೆ. ಇನ್ನೂ ಹೆಚ್ಚಿನ ಮಟ್ಟದ ಸಾಧನೆ ಮಾಡುವ ಮೂಲಕ ಕೀರ್ತಿ ತರಲಿ ಎಂದು ಶುಭಕೋರಿದರು.

ನಿವೃತ್ತ ಪ್ರಾಂಶುಪಾಲ ಡಾ. ಎಸ್.ಬಿ. ಶಂಕರೇಗೌಡ ಮಾತನಾಡಿ, ನರ್ಸಿಂಗ್ ಹಾಗೂ ವೈದ್ಯ ವೃತ್ತಿಯ ಬಗ್ಗೆ ಈಚೆಗೆ ಗೌರವ ಕಡಿಮೆಯಾಗುತ್ತಿದೆ. ರೋಗಿಗಳು ಮತ್ತು ವೈದ್ಯರ ಸಂಬಂಧ ಉತ್ತಮವಾಗಿಲ್ಲ, ಹಿಂದೆ ವೈದ್ಯರನ್ನು ದೇವರ ರೂಪದಲ್ಲಿ ಕಾಣುತ್ತಿದ್ದರು. ಪ್ರಾಣ ಯಾರ ಕೈಯಲ್ಲಿಯೂ ಇಲ್ಲ ಎಂಬ ಸತ್ಯವನ್ನು ಅರಿಯದೆ, ವೈದ್ಯರು ಮತ್ತು ಶುಶ್ರೂಷಕಿಯರ ತಾತ್ಸಾರ ಕಾರಣ ಎಂದು ಅಪಾದಿಸಲಾಗುತ್ತಿದೆ. ಯಾವ ವೈದ್ಯನೂ ಪ್ರಾಣದ ಜತೆ ಚೆಲ್ಲಾಟ ಆಡುವುದಿಲ್ಲ. ವೃತ್ತಿಗೆ ಎಷ್ಟು ಗೌರವ ಇದೆಯೋ ಅಷ್ಟು ಹಿಂಸೆಯೂ ಇದೆ. ಎಲ್ಲವನ್ನೂ ಸಮನಾಗಿ ಸ್ವೀಕರಿಸಿ ಬದುಕುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಮಿಮ್ಸ್ ನಿವೃತ್ತ ಪಿಆರ್‌ಓ ಸಿ.ಎಂ.ಉಮೇಶ್, ಕಾಂಗ್ರೆಸ್ ಮುಖಂಡ ಎಂ.ಎಸ್. ಚಿದಂಬರ್, ಕಾಲೇಜಿನ ನಾಗೇಂದ್ರ, ಮಿಮ್ಸ್ ನರ್ಸಿಂಗ್ ಅಧೀಕ್ಷಕಿ ಜಯಭಾರತಿ, ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಂ. ನಂದಿನಿ, ಕಾರ‍್ಯದರ್ಶಿ ಎಂ.ಆರ್.ಜೀವನ್‌ಗೌಡ, ಎಂ.ಡಿ. ಪ್ರತಿಕ್‌ದೇವ್ ಸಮಾರಂಭದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!