Thursday, September 19, 2024

ಪ್ರಾಯೋಗಿಕ ಆವೃತ್ತಿ

ಆ.10 ರಂದು ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

ನಾಗಮಂಗಲ ತಾಲೂಕಿನ ಹಾಲತಿ ಗ್ರಾಮದ ವ್ಯಾಪ್ತಿಯಲ್ಲಿ ಗೋಮಾಳ ಜಮೀನು ಗುರುತಿಸುವಂತೆ ಒತ್ತಾಯಿಸಿ ಹಾಗೂ ರೈತರ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ ಖಂಡಿಸಿ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಸಾವಿರಾರು ಜನರೊಂದಿಗೆ ಆಗಸ್ಟ್ 10 ರಂದು ಪ್ರತಿಭಟನೆ ನಡೆಸುವುದಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯವರು ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಸರ್ವೆ ನಂ.135ರಲ್ಲಿರುವ ನೂರಾರು ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸಿದ್ದಾರೆ. ಆರ್‌ಟಿಸಿಯಲ್ಲಿ ಗೋಮಾಳ ಎಂದು ನಮೂದಾಗಿದೆ.ಅರಣ್ಯ ಇಲಾಖೆಗೆ ಸೇರಿದ ಜಾಗ ಹಾಗೂ ಗೋಮಾಳ ಜಾಗ ಗುರುತಿಸಿ ಜಂಟಿ ಸರ್ವೆ ಮಾಡುವಂತೆ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಯಾರೊಬ್ಬರೂ ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು.

ಶಾಸಕ ಸುರೇಶ್‌ಗೌಡರು ಅರಣ್ಯಾಧಿಕಾರಿಗಳ ವಿರುದ್ಧ ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. ರೈತ ಚಂದ್ರೇಗೌಡರ ಮೇಲೆ ಏಕಾಏಕಿ ಗುಂಡುಹಾರಿಸಿದ್ದು, ಕೂದಲೆಳೆಯ ಅಂತರದಲ್ಲಿ ಅವರು ತಪ್ಪಿಸಿಕೊಂಡಿದ್ದಾರೆ. ಇದರಿಂದ ಆವೇಶಭರಿತರಾಗಿ ಅವರು ಮಾತನಾಡಿದ್ದಾರಷ್ಟೇ. ಈ ಬಗ್ಗೆ ವಲಯ ಅರಣ್ಯಾಧಿಕಾರಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಹೇಳಿದರು.

ಅರಣ್ಯ ಅಧಿಕಾರಿಗಳ ಮೇಲೆ ಶಾಸಕರ ವರ್ತನೆ ಸರಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದರು. ಇದರಿಂದ ಸಿಟ್ಟಾದ ಶಾಸಕ ಸುರೇಶ್‌ಗೌಡ ರೈತರ ಪರವಾಗಿ ಉದ್ವೇಗದಿಂದ ಮಾತನಾಡಿದ್ದಾರೆ. ಅದನ್ನೇ ತಪ್ಪಾಗಿ ಅರ್ಥೈಸಿಕೊಂಡು ಎಫ್‌ಐಆರ್ ದಾಖಲಿಸಿದ್ದಾರೆ ಎಂದರು.

ಕಳೆದ ಐದು ವರ್ಷದಿಂದ ಸಭೆ ನಡೆಸುವಂತೆ ಶಾಸಕ ಸುರೇಶ್ ಗೌಡ ಆಗ್ರಹಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಕಳೆದ 30-40 ವರ್ಷಗಳಿಂದ ಈ ರೀತಿ ಗಲಾಟೆ ನಡೆದು ಅರಣ್ಯ ಇಲಾಖೆಯವರು ರೈತರ ಮೇಲೆ ಕೇಸು ಹಾಕುತ್ತಿದ್ದಾರೆ. ಹಾಲತಿ ಗ್ರಾಮದಲ್ಲಿ 132 ಎಕರೆ ಜಾಗ ನಮ್ಮದೆಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ನಲ್ಕುಂದಿ, ನೇರಳೆಕೆರೆ ಸೇರಿದಂತೆ ಸುಮಾರು 130 ಹಳ್ಳಿಗಳಲ್ಲಿ ಈ ರೀತಿ ಅರಣ್ಯ ಇಲಾಖೆಯವರು ರೈತರ ಮೇಲೆ ಉಳುಮೆ ಮಾಡದಂತೆ ಕಿರುಕುಳ ನೀಡುತ್ತಿದ್ದಾರೆ. ಪ್ರಾಣ ಹೋದರೂ ಸರಿಯೇ ಆ ಜಾಗವನ್ನು ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದರು.

ತಾಲೂಕಿನ ಶಿಕಾರಿಪುರದಲ್ಲಿ ಎಸ್. ಟಿ ಜನಾಂಗದವರಿಗೆ ಜಮೀನು ನೀಡಬೇಕು ಎಂದು ಸರ್ಕಾರದ ಆದೇಶವಿದೆ. ಅರಣ್ಯ ಇಲಾಖೆ ಜಾಗದಲ್ಲಿ ಇದ್ದರೂ ಅವರಿಗೆ ಜಮೀನು ಕೊಡಬೇಕೆಂದು ಸರ್ಕಾರವೇ ಆದೇಶ ಮಾಡಿದೆ. ಹೀಗಿದ್ದರೂ ಅವರಿಗೆ ತೊಂದರೆ ನೀಡಲಾಗುತ್ತಿದೆ. ಅರಣ್ಯ ಇಲಾಕೆಯ ದೌರ್ಜನ್ಯ ಖಂಡಿಸಿ ಆಗಸ್ಟ್ 10ರಂದು ಸುಮಾರು 5000 ಜನರೊಂದಿಗೆ ಅರಣ್ಯ ವಲಯ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ನಾಗೇಶ್, ಕಾರ್ಯಕರ್ತರಾದ ಪ್ರಶಾಂತ್, ಶಿವರಾಮಯ್ಯ, ಶ್ರೀನಿವಾಸ್, ಅಶೋಕ್ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!