Thursday, September 19, 2024

ಪ್ರಾಯೋಗಿಕ ಆವೃತ್ತಿ

ಏ.1ರಂದು ಚಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ

ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ 27 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದ್ದು, ಏ.1ರಂದು ವೈರಮುಡಿ ಉತ್ಸವ ಜರುಗಲಿದ್ದು, ಜಿಲ್ಲಾಡಳಿತದಿಂದ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುವಂತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು ಅವರು ತಿಳಿಸಿದರು.

ಮಂಡ್ಯ  ಜಿಲ್ಲಾ ಪಂಚಾಯತಿ ಕಾವೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದರು. ಮಾ.27 ರಿಂದ ಏ.8 ರವರೆಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಚ್ಚುಕಟ್ಟಾಗಿ ನಡೆಯಬೇಕು. ಅಧಿಕಾರಿಗಳು ಇದಕ್ಕೆ ಬೇಕಿರುವ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಿ. ಮೇಲುಕೋಟೆ ಮುಖ್ಯ ರಸ್ತೆಗಳ ದುರಸ್ತಿ ಕಾರ್ಯಗಳನ್ನು ಕೈಗೊಂಡು ಬೇಗನೆ ಪೂರ್ಣಗೊಳಿಸಿ,ಭಕ್ತಾಧಿಗಳ ಅಗತ್ಯತೆಗೆ ತಕ್ಕಂತೆ ಸಾರಿಗೆ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಸಿ.ಸಿ ಟಿ.ವಿ, ನಿರಂತರ ವಿದ್ಯುತ್ ಸರಬರಾಜು ಹಾಗೂ ಅಚ್ಚುಕಟ್ಟಾಗಿ ದೀಪಾಲಂಕಾರವನ್ನು ಮಾಡುವಂತೆ, ಅಲ್ಲದೇ ಮೇಲುಕೋಟೆಯ ದಾಸೋಹ ಭವನದಲ್ಲಿ ಭಕ್ತಾಧಿಗಳಿಗೆ ದಾಸೋಹದ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ವಾಹನದ ಪಾರ್ಕಿಂಗ್ ಸ್ಥಳವು ಸಮತಟ್ಟಾಗಿ ಇರಲಿ, ಪಾರ್ಕಿಂಗ್ ಸ್ಥಳದಲ್ಲಿ  ವಿದ್ಯುತ್ ದೀಪ ವ್ಯವಸ್ಥೆ ಮಾಡಿ,
ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಲಕ್ಷಾಂತರ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಹೆಚ್ಚು ಜನ ಸೇರುವ ವಾಹನ ಪಾರ್ಕಿಂಗ್ ಸ್ಥಳ ದೇವಸ್ಥಾನದ ಹತ್ತಿರ ಕುಡಿಯುವ ನೀರಿನ ಟ್ಯಾಂಕರ್ ಗಳ ವ್ಯವಸ್ಥೆ ಮಾಡಿ ಎಂದರು.

ಉಸ್ತುವಾರಿ ಕಾರ್ಯದರ್ಶಿ ಜಯಾರಮ್ ರಾಯಪುರ ಮಾತನಾಡಿ, ಎಲ್ಲಾ ಅಗತ್ಯತೆಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ. ತಮಗೆ ವಹಿಸಿರುವ ಕೆಲಸಗಳಿಗೆ ಸಂಬಂಧಪಟ್ಟಂತೆ ಉಪಸಮಿತಿ ರಚಿಸಿಕೊಂಡು ಕೆಲಸ ನಿರ್ವಹಿಸಿ. ಕೆರೆ ತೊಣ್ಣುರಿನಲ್ಲೂ ಕೂಡ ಉತ್ಸವ ಆಗಬೇಕು.  ಏ.1 ರಂದು ನಡೆಯುವ ವೈರಮುಡಿ ಉತ್ಸವಕ್ಕೂ ಮುಂಚಿತವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕರೆ ತೊಣ್ಣುರಿನಲ್ಲಿ ಉತ್ಸವ ಆಗಬೇಕು. ಈ ಉತ್ಸವ ವೈರಮುಡಿ ಉತ್ಸವದ ಒಂದು ಭಾಗವಾಗಬೇಕು. ಜಲಕ್ರೀಡೆಯು ಕೂಡ ಇಲ್ಲಿ ನಡೆಯಬೇಕು ಎಂದು ಚಿಂತನೆ ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್,  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!