Thursday, September 26, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹಸಿರು ಪಟಾಕಿಗೆ ಮಾತ್ರ ಅವಕಾಶ, ಬೇರೆ ಪಟಾಕಿ ಮಾರಾಟ ಮಾಡುವಂತಿಲ್ಲ: ಜಿಲ್ಲಾಧಿಕಾರಿ

ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲೆಯ ಪಟಾಕಿ ಮಾರಾಟಗಾರರಿಗೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದ್ದು, ಅಂತಹ ಮಾರಾಟಗಾರರಿಗೆ ಮಾತ್ರ ತಾತ್ಕಾಲಿಕ ಪಟಾಕಿ ಪರವಾನಗಿಯನ್ನು ನೀಡಲಾಗುವುದು. ಹಸಿರು ಪಟಾಕಿಯನ್ನು ಹೊರತು ಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡಿದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ 2024 ನೇ ಸಾಲಿನ ದೀಪಾವಳಿ ಹಬ್ಬದ ಪ್ರಯುಕ್ತ ತಾತ್ಕಾಲಿಕ ಪಟಾಕಿ ಪರವಾನಗಿ ನೀಡುವ ಹಾಗೂ ಮುಂಜಾಗ್ರತಾ ಕ್ರಮದ ಬಗ್ಗೆ ಸಭೆ ನಡೆಸಿ ಮಾತನಾಡಿದರು.

ಅಕ್ಟೋಬರ್ 29 ರಿಂದ ನವೆಂಬರ್ 02 ರವರೆಗೆ ಹಸಿರು ಪಟಾಕಿ ಮಾರಾಟಗಾರರಿಗೆ ಪರವಾನಿಗೆ ನೀಡಲಾಗುವುದು. ಶಾಲೆ, ಆಸ್ಪತ್ರೆ ಹಾಗೂ ಜನ ಸಂದಣಿ ಇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಪಟಾಕಿ ಮಾರಾಟ ನಿಷೇಧಿಸಲಾಗುವುದು ಎಂದರು.

ಸಾರ್ವಜನಿಕರಿಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಹೊಡೆಯಲು ಮಾತ್ರ ಸುಪ್ರೀಂ ಕೋರ್ಟ್ ಆದೇಶದಂತೆ ಅವಕಾಶವಿದೆ. ಈ ಆದೇಶವನ್ನು ಜಿಲ್ಲೆಯ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು.

ಪಟಾಕಿ ಪರವಾನಿಗೆ ಪಡೆಯುವವರು ವಿಶಾಲ ಮೈದಾನದಲ್ಲಿ ಪಟಾಕಿಯನ್ನು ಮಾರಾಟ ಮಾಡಬೇಕು. ಪರವಾನಿಗೆ ( ಲೈಸೆನ್ಸ್ ) ನೀಡಲಾದ ಪ್ರದೇಶವನ್ನು ಹೊರತು ಪಡಿಸಿ ಬೇರೆ ಸ್ಥಳದಲ್ಲಿ ಪಟಾಕಿಯನ್ನು ಮಾರಾಟ ಮಾಡುವಂತಿಲ್ಲ. ಒಂದು ಅಂಗಡಿ ಮಳಿಗೆಯಿಂದ ಮತ್ತೊಂದು ಅಂಗಡಿ ಮಳಿಗೆಗೆ 6 ಮೀಟರ್ ಅಂತರ ಇರಬೇಕು. ಪ್ರತಿ ಮಳಿಗೆಗಳಲ್ಲು ಎಂಟ್ರಿ ಹಾಗೂ ಎಕ್ಸಿಟ್ ಇರಬೇಕು. ಒಂದು ವೇಳೆ ಬೆಂಕಿ ಅವಗಢ ಸಂಭವಿಸಿದರೆ ಬೆಂಕಿಯನ್ನು ನಂದಿಸಲು ಡ್ರಮ್ ಗಳಲ್ಲಿ ನೀರು ತುಂಬಿಸಿರಬೇಕು. ಪಟಾಕಿ ಅಂಗಡಿಗಳಲ್ಲಿ ರಾತ್ರಿ ಸಮಯದಲ್ಲಿ ಯಾರು ಮಲಗುವಂತಿಲ್ಲ. ಅಂಗಡಿಯಲ್ಲಿ ಧೂಮಪಾನ ಮಾಡುವುದರಿಂದ ಅದರ ಕಿಡಿಯಿಂದ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು, ಧೂಮಪಾನ ಮಾಡುವಂತಿಲ್ಲ. ಈ ನಿಯಮವಳಿಗಳನ್ನು ಅನುಸರಿಸಬೇಕು ಎಂದರು.

ಪ್ರತಿ ಪಟಾಕಿ ಅಂಗಡಿ ಮುಂದೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಹಸಿರು ಪಟಾಕಿಯನ್ನೇ ಬಳಸಬೇಕು ಹಾಗೂ ರಾತ್ರಿ 10 ಗಂಟೆಯ ನಂತರ ಪಟಾಕಿ ಹೊಡೆಯುವಂತಿಲ್ಲ ಎಂದು ಮಾರ್ಗಸೂಚಿಯ ನಾಮಫಲಕವನ್ನು ಅಳವಡಿಸಬೇಕು ಎಂದರು.

ಈಗಾಗಲೇ ಪರಾವನಗಿ ನೀಡಲು ತಾಲ್ಲೂಕು ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲೆಯ ಪ್ರತಿ ತಾಲ್ಲೂಕಿಗೆ ತಹಶೀಲ್ದಾರರುಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಆಯಾ ತಾಲ್ಲೂಕಿನ ತಹಶೀಲ್ದಾರರುಗಳು ಪಟಾಕಿ ಮಾರಾಟಗಾರರು ಅಂಗಡಿಯನ್ನು ತೆರೆಯುವ ಸ್ಥಳಗಳನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು ಎಂದರು.

ಸಾರ್ವಜನಿಕರಲ್ಲಿ ಆದಷ್ಟು ಪಟಾಕಿ ಕಡಿಮೆಗೊಳಿಸಿ, ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮಿಸಿ ಎಂದು ಮನವಿ ಮಾಡಿದರು.

ನಗರಸಭೆಯ ಪೌರ ಕಾರ್ಮಿಕರುಗಳು ಮನೆ ಮನೆಗೆ ಕಸಸಂಗ್ರಹ ಮಾಡಲು ಹೋದಾಗ ಸಾರ್ವಜನಿಕರಲ್ಲಿ ಪಟಾಕಿಗಳನ್ನು ಕಡಿಮೆಗೊಳಿಸಿ ದೀಪವನ್ನು ಹಚ್ಚಿ ಎಂದು ಜಾಗೃತಿ ಮೂಡಿಸಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಪಟಾಕಿ ಮಾರಾಟಗಾರರು ಪಟಾಕಿ ಗೋಡೌನ್ ಇಡಲು ಯಾವುದೇ ಅವಕಾಶವಿಲ್ಲ. ಪಟಾಕಿ ಮಾರಾಟಗಾರರು ಕಡಿಮೆ ಬೆಲೆಗೆ ಸಿಗುವಂತಹ ಪಟಾಕಿ, ಸಿಡಿಮದ್ದುಗಳನ್ನು ಖರೀದಿ ಮಾಡುತ್ತಾರೆ. ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಹಸಿರು ಪಟಾಕಿಗೆ ಸಂಬಂಧಿಸಿದಂತೆ ಪಟಾಕಿ ಬಾಕ್ಸ್ ಮೇಲೆ ಇರುವ ಕ್ಯೂ ಆರ್ ಕೋಡ್ ಅನ್ನು ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿದಾಗ ಹಸಿರು ಪಟಾಕಿ ಎಂದು ತಿಳಿಯಬಹುದಾಗಿದೆ. ಪಟಾಕಿ ಮಾರಾಟ ಮಾಡಲು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಅವಕಾಶ. ಸಂಜೆ 6 ಗಂಟೆಯ ನಂತರ ಪಟಾಕಿ ಅಂಗಡಿ ತೆರೆದಿದ್ದರೆ ಅಲ್ಲಿಗೆ ಪೊಲೀಸ್ ತಂಡವು ಭೇಟಿ ನೀಡಿ ಅಂಗಡಿ ಮುಚ್ಚಿಸಲಾಗುತ್ತದೆ. ಅಂತವರ ಪರವಾನಿಗೆ ರದ್ದಾಗುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು ಮಾತನಾಡಿ, ಕೆಲವರು ರಾತ್ರಿ 10 ಗಂಟೆಯ ನಂತರ ಪಟಾಕಿ ಹೊಡೆಯುವುದು ಕಂಡು ಬರುತ್ತದೆ. ಇದು ಶಬ್ದ ಮಾಲಿನ್ಯಕ್ಕೆ ಕಾರಣವಾಗುವುದಲ್ಲದೇ ಅನಾರೋಗ್ಯ ವ್ಯಕ್ತಿಗಳಿಗೆ ತೊಂದರೆ ಉಂಟಾಗುತ್ತದೆ. ರಾತ್ರಿ 10 ಗಂಟೆಯ ನಂತರ ಪಟಾಕಿ ಸಿಡಿಸುವವರಿಗೆ ಪೊಲೀಸ್ ತಂಡವು ನಿರ್ದಿಷ್ಟ ದಂಡ ವಿಧಿಸಿ ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಾರೆ. ಜೊತೆಗೆ ಪಟಾಕಿ ಪರವಾನಿಗೆ ತೆಗೆದುಕೊಂಡಿರುವ ಪಟಾಕಿ ಮಾರಾಟಗಾರರ ಮನೆಯನ್ನು ಪರಿಶೀಲನೆ ನಡೆಸಬೇಕು. ಮಾರಾಟಗಾರರು ಯಾವುದೇ ಕಾರಣಕ್ಕೂ ಮನೆಯಲ್ಲಿ ಪಟಾಕಿಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಅಸಿಫ್, ಜಿಲ್ಲಾ ಅಗ್ನಿಶಾಮಕ‌ ಅಧಿಕಾರಿ ರಾಘವೇಂದ್ರ, ಮಂಡ್ಯ ತಹಶೀಲ್ದಾರ್ ಡಾ ಶಿವಕುಮಾರ್ ಬಿರಾದಾರ, ಮದ್ದೂರು ತಹಶೀಲ್ದಾರ್ ಸ್ಮಿತಾ ರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!