Friday, September 20, 2024

ಪ್ರಾಯೋಗಿಕ ಆವೃತ್ತಿ

ಲೋಕಸಭೆ| ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ನೋಟಿಸ್ ನೀಡಿದ ಕಾಂಗ್ರೆಸ್

ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವುದನ್ನು ವಿರೋಧಿಸಿ ಕಾಂಗ್ರೆಸ್ ಸಂಸದರಾದ ಕೆ.ಸಿ ವೇಣುಗೋಪಾಲ್ ಮತ್ತು ಹಿಬಿ ಈಡನ್ ಅವರು ನೋಟಿಸ್ ನೀಡಿದ್ದಾರೆ.

ಇಂದು ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಸಂಸದರ ಸಭೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಕುರಿತು ಚರ್ಚಿಸಲಾಗಿದ್ದು, ಮಸೂದೆಯನ್ನು ಒಮ್ಮತದಿಂದ ವಿರೋಧಿಸಲು ಕಾಂಗ್ರೆಸ್ ಸಂಸದರು ನಿರ್ಧರಿಸಿದ್ದಾರೆ.

ಇತರ ವಿರೋಧ ಪಕ್ಷಗಳು ಕೂಡ ಪ್ರಸ್ತಾವಿತ ತಿದ್ದುಪಡಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಪರಿಶೀಲನೆಗೆ ಕಳುಹಿಸಬೇಕೆಂದು ಒತ್ತಾಯಿಸಿವೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, “ಬಿಜೆಪಿಯು ರಿಯಲ್ ಎಸ್ಟೇಟ್ ಕಂಪನಿಯಂತೆ ಕೆಲಸ ಮಾಡುತ್ತಿದೆ. ಹಾಗಾಗಿ ಅದನ್ನು “ಭಾರತೀಯ ಜಮೀನ್ ಪಾರ್ಟಿ” ಎಂದು ಮರುನಾಮಕರಣ ಮಾಡಬೇಕು” ಎಂದು ವ್ಯಂಗ್ಯವಾಡಿದ್ದಾರೆ.

ಎಕ್ಸ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಅಖಿಲೇಶ್ ಯಾದವ್ “ವಕ್ಫ್ ಆಸ್ತಿ ಒಂದು ನೆಪ ಮಾತ್ರವಾಗಿದ್ದು, ಇದು ರಕ್ಷಣಾ ಭೂಮಿ, ರೈಲ್ವೆ ಭೂಮಿ ಮತ್ತು ನಝುಲ್ ಭೂಮಿಯಂತೆ ಬಿಜೆಪಿ ಸದಸ್ಯರಿಗೆ ಅನುಕೂಲ ಮಾಡಿಕೊಡುವ ಯೋಜನೆಯ ಭಾಗವಾಗಿದೆ” ಎಂದಿದ್ದಾರೆ.

“ವಕ್ಫ್ ಬೋರ್ಡ್ ಜಮೀನುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಲಿಖಿತವಾಗಿ ಖಾತರಿ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

“ಮಸೂದೆಯು ವಕ್ಫ್ ಆಸ್ತಿಯನ್ನು ಅತಿಕ್ರಮಿಸುವ ಸರ್ಕಾರದ ಪ್ರಯತ್ನವಾಗಿದೆ. ಸಂಸತ್ತಿನಲ್ಲಿ ಮಸೂದೆ ಮಂಡಿಸಲಿ, ಸಮಾಜವಾದಿ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಲಿದೆ” ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ.

“>

 

“ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು, “ಮಸೂದೆಯ ಕುರಿತು ಎಲ್ಲಾ ಪಕ್ಷಗಳೊಂದಿಗೆ ಸಮಾಲೋಚಿಸಬೇಕು ಮತ್ತು ಅಗತ್ಯವಿದ್ದರೆ ತಿದ್ದುಪಡಿಗಳನ್ನು ಮಾಡಬೇಕು” ಎಂದಿದ್ದಾರೆ.

“ಈ ಮಸೂದೆಯನ್ನು ಹೇಗೆ ತರಲಾಗುತ್ತಿದೆ, ಅದನ್ನು ಅವರ ಮೈತ್ರಿ (ಎನ್‌ಡಿಎ) ಯಲ್ಲಿ ಚರ್ಚಿಸಲಾಗಿದೆಯೇ? ಜೆಡಿಯು ಮತ್ತು ಟಿಡಿಪಿ ಈ ವಕ್ಫ್ ಮಸೂದೆಯನ್ನು ನೋಡಿ ಒಪ್ಪಿಗೆ ನೀಡಿವೆಯೇ? ಒಂದು ಇದು ಮಾಡಿರದಿದ್ದರೆ, ಎಲ್ಲಾ ಮಧ್ಯಸ್ಥಗಾರರು, ಸಂಸದರ ಜೊತೆ ಚರ್ಚಿಸಬೇಕು” ಎಂದು ಆಗ್ರಹಿಸಿದ್ದಾರೆ.

“ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲು ಸರ್ಕಾರ ಬಯಸಿದೆ ಮತ್ತು ಅದನ್ನು ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಕೂಡ ಮುಕ್ತವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

“ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ” ಎಂದು ವಕ್ಫ್ ಕಾಯ್ದೆಗೆ ಮರು ನಾಮಕರಣಗೊಳಿಸಿ, ಕೇಂದ್ರ ಪೋರ್ಟಲ್ ಮೂಲಕ ವಕ್ಫ್ ಆಸ್ತಿಗಳ ನೋಂದಣಿ ವಿಧಾನವನ್ನು ಸುಗಮಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಜೊತೆಗೆ ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ರಚನೆಯ ವಿಷಯಗಳು ಮಸೂದೆಯಲ್ಲಿ ಒಳಗೊಂಡಿದ್ದು, ಇದು ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರಿಗೆ ವಕ್ಫ್ ಮಂಡಳಿಗಳಲ್ಲಿ ಪ್ರಾತಿನಿಧ್ಯ ಕೊಡುವ ಉದ್ದೇಶ ಹೊಂದಿದೆ.

ಪ್ರಸ್ತಾವಿತ ವಿಧೇಯಕ ಜಾರಿಯಾದರೆ ವಕ್ಫ್ ಆಸ್ತಿಯೇ ಅಥವಾ ಸರ್ಕಾರಿ ಭೂಮಿಯೇ? ಎಂಬುದನ್ನು ತೀರ್ಮಾನಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಸಿಗಲಿದೆ ಎಂದು ವರದಿಗಳು ಹೇಳಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!