Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಸಂಕಷ್ಟ| ಮತ್ತೇ ಒಂದು ತಿಂಗಳು ನೀರು ಹರಿಸಲು ಆದೇಶ: ಮಂಡ್ಯದಲ್ಲಿ ರೈತರ ಆಕ್ರೋಶ

ಕಾವೇರಿ ವಿಚಾರದಲ್ಲಿ ಮತ್ತೆ ರಾಜ್ಯಕ್ಕೆ ಹಿನ್ನಡೆಯಾಗಿದೆ. ದೆಹಲಿಯಲ್ಲಿ ಇಂದು ಸಭೆ ಸೇರಿದ್ದ ಕಾವೇರಿ ನೀರು ನಿರ್ವಾಹಣೆ ಪ್ರಾಧಿಕಾರವು ಒಂದು ತಿಂಗಳ ಕಾಲ ಅಂದರೆ ಮುಂದಿನ ಡಿ.23ರವರೆಗೆ ತಮಿಳುನಾಡಿಗೆ ಪ್ರತಿದಿನ 2700 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿದೆ.

ಪ್ರಾಧಿಕಾರದ ತೀರ್ಪಿಗೆ ತೀವ್ರ ಆಕ್ರೋಶ

ಪ್ರಾಧಿಕಾರದ ಸೂಚನೆ ಹಿನ್ನಲೆಯಲ್ಲಿ ಮಂಡ್ಯ ನಗರದಲ್ಲಿ ಕಳೆದ 80 ದಿನಗಳಿಂದ ಹೋರಾಟ ನಡೆಸುತ್ತಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು, ಬೆಂಗಳೂರು ಮೈಸೂರು ಹೆದ್ದಾರಿ ತಡೆ ನಡೆಸಿ ಆಕ್ರೋಶ ಹೊರ ಹಾಕಿತು.

ಡಿ.23 ರವರೆಗೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವುದು ಕರ್ನಾಟಕದ ರೈತ ಸಮೂಹಕ್ಕೆ ಮಾಡಿದ ದ್ರೋಹವಾಗಿದೆ ಅದೇ ರೀತಿ ನಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪು ಪಾಲಿಸುವಂತೆ ಸೂಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ, ಮತ್ತೆ ಮತ್ತೆ ನೀರು ಬಿಡಲು ಏಕಪಕ್ಷೀಯವಾಗಿ ಆದೇಶ ಮಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ, ಜಲಾಶಯಗಳಲ್ಲಿನ ನೀರಿನ ಲಭ್ಯತ ಬಗ್ಗೆ ಪರಿಶೀಲಿಸದೆ ಕಳೆದ ಮೂರು ತಿಂಗಳಿಂದ ನೀರು ಬಿಡಿ ಎನ್ನುತ್ತಿರುವುದು ಕರ್ನಾಟಕದ ಮೇಲಿನ ಗದಾ ಪ್ರಹಾರವಾಗಿದೆ ಎಂದು ಕಿಡಿಕಾರಿದರು. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಶಿಫಾರಸಿಗೆ ಮಾನ್ಯತೆ ನೀಡಬಾರದು, ಕೆ ಆರ್ ಎಸ್ ಸೇರಿದಂತೆ ಇತರೆ ಜಲಾಶಯಗಳಿಂದ ನೀರು ಹರಿಸಬಾರದು ಎಂದು ಒತ್ತಾಯಿಸಿದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ, ತಮಿಳುನಾಡಿಗೆ ನೀರು ಬಿಡಬೇಕೆಂದು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತೆ ಶಿಫಾರಸ್ಸನ್ನು ವಿರೋಧಿಸಲಾಗುವುದು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸಮಿತಿಯ ಶಿಫಾರಸಿಗೆ ಮಣಿಯಬಾರದು, ನೆರೆ ರಾಜ್ಯಕ್ಕೆ ನೀರು ಹರಿಸಬಾರದು ಎಂದು ಒತ್ತಾಯಿಸಿದರು.

ಕಾವೇರಿ ನದಿ ನೀರು ಸಂರಕ್ಷಣೆಗಾಗಿ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ, ಆದರೆ ಸರ್ಕಾರ ನೀರು ಉಳಿಸುವ ಬಗ್ಗೆ ಚರ್ಚೆ ಮಾಡಿಲ್ಲ, ವಿಶೇಷ ಜಂಟಿ ಅಧಿವೇಶನಕ್ಕೆ ಒತ್ತಾಯಿಸಿದ್ದವು, ಆದರೆ ಅದನ್ನು ಕರೆದಿಲ್ಲ, ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸುತ್ತಿದ್ದು ಜಲಾಶಯವನ್ನ ಬರಿದು ಮಾಡಿ ಕುಡಿಯಲು ನೀರು ಸಹ ಇಲ್ಲದಂತೆ ಮಾಡುತ್ತಿದೆ ಎಂದು ಕಿಡಿಕಾರಿದರು.

ಕಾವೇರಿ ಚಳವಳಿಯನ್ನು ಮುಂದುವರಿಸುವ ಬಗ್ಗೆ ಸಮಿತಿಯ ಸದಸ್ಯರು, ಹೋರಾಟ ಸಂಘಟನೆಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಬೋರಯ್ಯ, ಗುರುಪ್ರಸಾದ್ ಕೆರಗೋಡು, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ನಾರಾಯಣ್, ಸಿ.ಟಿ ಮಂಜುನಾಥ್, ಫಯಾಜ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!