ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾರಿನ ಟೈರ್ ಸಿಡಿದು ಪಲ್ಟಿ ಹೊಡೆದ ಪರಿಣಾಮ ಐವರು ಗಾಯಗೊಂಡು ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಚಿಕ್ಕಮಂಡ್ಯದ ಸಮೀಪ ನಡೆದಿದೆ.
ಬೆಂಗಳೂರು ಮೂಲದವರಾದ ಅರ್ಜುನ್, ಮಂಜುನಾಥ್ ಜಿ.ಅಡಿಗ, ಶ್ರೀಕಾಂತ್, ಕೃಷ್ಣ, ಮೂರ್ತಿ ಎಂಬುವರೇ ಗಾಯಗೊಂಡವರು.
ಬೆಂಗಳೂರು ಕಡೆಯಿಂದ ಮೈಸೂರಿನತ್ತ ತೆರಳುತ್ತಿದ್ದ ಕಾರು ಚಿಕ್ಕಮಂಡ್ಯ ಸಮೀಪಿಸುತ್ತಿದ್ದಂತೆ ಕಾರಿನ ಟೈಯರ್ ಸಿಡಿದಿದೆ. ಇದರಿಂದ ವೇಗವಾಗಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎರಡು ಬಾರಿ ಪಲ್ಟಿಯಾಗಿದೆ. ಇದರಿಂದ ಕಾರಿನಲ್ಲಿದ್ದ ಐವರು ಗಾಯಗೊಂಡರು.
ಕಾರು ಪಲ್ಟಿಯಾದಾಗ ಹಿಂದೆ-ಮುಂದೆ ವಾಹನಗಳು ಇಲ್ಲದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಎಲ್ಲರನ್ನು ನಗರದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಸ್ಥಳಕ್ಕೆ ಮಂಡ್ಯ ನಗರದ ಸೆಂಟ್ರಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕಾರನ್ನು ಹೆದ್ದಾರಿಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.