Saturday, September 7, 2024

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಮಂಡ್ಯದ ಭಕ್ತರು

ಮಂಡ್ಯದ ಅರ್ಕೇಶ್ವರ ಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 18ನೇ ವರ್ಷದ ಪಾದಯಾತ್ರೆಗೆ ಭಕ್ತಾದಿಗಳು ತೆರಳಿದರು.

ಮಂಡ್ಯ ನಗರದ ರೈಲು ನಿಲ್ದಾಣದ ಪಕ್ಕ ಇರುವ ಅಯ್ಯಪ್ಪ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪಾದಯಾತ್ರಿಗಳು ಪ್ರಯಾಣ ಬೆಳೆಸಿದರು. ಮಂಡ್ಯ ತಾಲೂಕಿನ ದುದ್ದ ಗ್ರಾಮದಲ್ಲಿರುವ ನೀರಾವರಿ ಇಲಾಖೆ ಆವರಣದಲ್ಲಿ ಪಾದಯಾತ್ರಿಗಳಿಗೆ ಪದ್ಮಿನಿ ಎಂ.ಜೆ. ಚಿಕ್ಕಣ್ಣ ಅವರು ಬೆಳಗಿನ ಉಪಹಾರ ಕೊಟ್ಟು ಬೀಳ್ಕೊಟ್ಟರು.

ಬಳಿಕ ಮಾತನಾಡಿದ ನಗರಸಭೆ ಮಾಜಿ ಸದಸ್ಯ ಎಂ.ಜೆ‌. ಚಿಕ್ಕಣ್ಣ ಅವರು ಭಕ್ತಾದಿಗಳಿಗೆ ಯಾವುದೇ ವಿಘ್ನ ಬರದ ಹಾಗೆ ದೇವರ ದರ್ಶನ ಪಡೆಯಲಿ. ಅವರ ಕುಟುಂಬ ವರ್ಗಕ್ಕೆ ಸುಖ ಶಾಂತಿ ಕೊಡಲಿ ಎಂದು ಮಂಜುನಾಥನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದರು.

ಪಾದಯಾತ್ರೆ ಸಮಿತಿ ಅಧ್ಯಕ್ಷ ಎಂ.ಡಿ.ಜವರಪ್ಪ ಮಾತನಾಡಿ, ಪಾದಯಾತ್ರೆಗೆ ಅನೇಕ ದಾನಿಗಳು ಸಹಕಾರ ನೀಡುತ್ತಿದ್ದಾರೆ. ಕಳೆದ 18 ವರ್ಷಗಳಿಂದ ಚಿಕ್ಕಣ್ಣ ಅವರು ಪಾದಯಾತ್ರಿಗಳಿಗೆ ಬೆಳಗಿನ ಉಪಹಾರ ನೀಡಿ ಬೀಳ್ಕೊಡುತ್ತಿದ್ದಾರೆ ಎಂದು ತಿಳಿಸಿದರು.

ದೇಹ ದಂಡಿಸಿ ದೇವರ ಸೇವೆ ಮಾಡಬೇಕು ಎಂದು ಹಿರಿಯರು ಹೇಳಿದ ರೀತಿ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ. ಪಾದಯಾತ್ರೆ ಮಾಡುವುದರಿಂದ ನಮಗೆ ಒಳ್ಳೆಯದಾಗಿದೆ ಎಂದು ಪಾದಯಾತ್ರಿಗಳು ಬರುತ್ತಿದ್ದಾರೆ. ಅನೇಕ ದಾನಿಗಳು ನಮಗೆ ಪ್ರತಿ ವರ್ಷದಿಂದಲೂ ಸಹಕಾರ ನೀಡಿ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಪ್ರತಿಯೊಂದುಕ್ಕೂ ಸಹಕರಿಸುತ್ತಿದ್ದಾರೆ ಅವರೆಲ್ಲರಿಗೂ ಭಗವಂತನ ಕೃಪೆ ಸಿಗಲಿ ಎಂದು ಪ್ರಾರ್ಥಿಸಿದರು.

ಕಳೆದ ಬಾರಿಯೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 600ಕ್ಕೂ ಹೆಚ್ಚು ಪಾದಯಾತ್ರಿಗಳು ಯಶಸ್ವಿಯಾಗಿ ದೇವರ ದರ್ಶನ ಮಾಡಿ ಬಂದಿದ್ದೇವೆ. ಪಾದಯಾತ್ರಿಗಳು ಕೇಸರಿ ಬಣ್ಣದ ಉಡುಪುಗಳನ್ನು ಕಡ್ಡಾಯವಾಗಿ ಧರಿಸಿ, ತಟ್ಟೆ,ಲೋಟ, ಬ್ಯಾಗ್ ಹೊದಿಕೆ ತರಬೇಕು, ಪಾದಯಾತ್ರೆ ಸಮಯದಲ್ಲಿ ದುಶ್ಚಟಗಳಿಂದ ದೂರವಿರುವಂತೆ ಅನೇಕ ಸಲಹೆ ಸೂಚನೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಂಕರ ಮಠದ ಬೋರೇಗೌಡ, ದಿವಾಕರ್, ರಾಜು, ಗುತ್ತಿಗೆದಾರ ಚೆನ್ನಪ್ಪ, ಲಾವಣ್ಯ ಹೋಟೆಲ್ ಮ್ಯಾನೇಜರ್ ನಾಗೇಂದ್ರ, ಸತೀಶ್, ಜವರೇಗೌಡ, ಮೊಳ್ಳೆಗೌಡ ಇತರರು ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!