Friday, September 20, 2024

ಪ್ರಾಯೋಗಿಕ ಆವೃತ್ತಿ

ಪಾಕಿಸ್ತಾನಿ ಸೈನಿಕರ ಹುಟ್ಟಡಗಿಸಿದ ಕ್ಷಣವೇ ಕಾರ್ಗಿಲ್ ವಿಜಯ್ ದಿವಸ್

ಭಾರತೀಯ ಸೇನೆಯು ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿದ ಕ್ಷಣವೇ ಕಾರ್ಗಿಲ್ ವಿಜಯ್ ದಿವಸ್ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ಈ.ಸಿ. ನಿಂಗರಾಜುಗೌಡ ಹೇಳಿದರು.

ಮಂಡ್ಯ ನಗರದಲ್ಲಿರುವ ಗಾಂಧಿಭವನದಲ್ಲಿ ಮಂಗಳವಾರ ಸಂಜೆ ಕಲಾತಪಸ್ವಿ ಟ್ರಸ್ಟ್ ಮಂಡ್ಯ, ಡಾ. ನಿಂಗರಾಜು ಗೌಡ ಫೌಂಡೇಶನ್, ಚಿದಂಬರ ನಟೇಶ ನಾಟ್ಯ ಶಾಲೆ ಮಂಡ್ಯ ಇವರು ಆಯೋಜಿಸಿದ್ದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 527 ವೀರ ಯೋಧರಿಗೆ ದೀಪ ನಮನ ಹಾಗೂ ಪ್ರಜಾ ಭಾರತ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1971ರ ಇಂಡೋ-ಪಾಕ್ ಯುದ್ಧದ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಗಳು ತೀವ್ರಗೊಂಡವು. 1990 ರ ದಶಕದಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಕಾರ್ಯಾಚರಣೆಗಳ ಪರಿಣಾಮವಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ಇದು ಕಣಿವೆಯಲ್ಲಿ ಬೆಳೆಯುತ್ತಿರುವ ಹಗೆತನದ ವಾತಾವರಣಕ್ಕೆ ಕಾರಣವಾಯಿತು ಎಂದು ನುಡಿದರು.

ಭಾರತ ಸರ್ಕಾರವು ಆಪರೇಷನ್ ವಿಜಯ್ ಅನ್ನು ಪ್ರಾರಂಭಿಸಿತು, ಲಾಹೋರ್ ಒಪ್ಪಂದದ ನಿಬಂಧನೆಗಳ ತಿರಸ್ಕಾರದ ಉಲ್ಲಂಘನೆಗಳಿಗೆ ಪ್ರತಿಕ್ರಿಯೆಯಾಗಿ ಕಣಿವೆಯಲ್ಲಿ ಎರಡು ಲಕ್ಷ ಭಾರತೀಯ ಸೈನಿಕರನ್ನು ನಿಯೋಜಿಸಿತು. 1999 ರಲ್ಲಿ ಯುದ್ಧವು ಕೊನೆಗೊಂಡಿತು ಮತ್ತು 527 ಭಾರತೀಯ ಸೈನಿಕರು ಯುದ್ಧದಲ್ಲಿ ಹುತಾತ್ಮರಾಗಿ ಕಾರ್ಗಿಲ್ ಪ್ರದೇಶವನ್ನು ಗೆಲುವಾಗಿ ಭಾರತಕ್ಕೆ ಅರ್ಪಿಸಿದರು ಎಂದು ಸ್ಮರಿಸಿದರು.

ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಭಾರತದ ಹುತಾತ್ಮ ಸೈನಿಕರ ಸ್ಮರಿಸುವ ಭಾಗವಾಗಿ ಜುಲೈ 26 ನ್ನು ಕಾರ್ಗಿಲ್ ವಿಜಯೋತ್ಸವ ಎಂದು ಆಚರಿಸಿ, ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವುದು ಯೋಧರಿಗೆ ಗೌರವ ಸಲ್ಲಿಸುವುದು ಸಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಲಾತಪಸ್ವಿ ಟ್ರಸ್ಟ್ ನಲ್ಲಿ ಚಿತ್ರಕಲಾ ತರಬೇತಿ ಪಡೆಯುವ ವಿದ್ಯಾರ್ಥಿಗಳು ಮತ್ತು ರಾಜ್ಯಮಟ್ಟದ ಚಿತ್ರಕಲೆ ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾರ್ಥಿಗಳು, ಪೋಷಕರು ದೀಪಗಳನ್ನು ಹಚ್ಚಿ ವೀರಯೋಧರಿಗೆ ದೀಪ ನಮನ ಸಲ್ಲಿಸಿದರು. ಗಣ್ಯರು ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು.ಚಿದಂಬರನಟೇಶ ನಾಟ್ಯ ಶಾಲೆಯ ನಾಟ್ಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಕೆ.ಟಿ.ಹನುಮಂತು,ಮಿಮ್ಸ್ ನ ವೈದ್ಯರಾದ ಡಾ.ಪೂರ್ಣಿಮಾ,ಪೊದಾರ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲ ವಿಜಯ್ ರಾಜ್‌ ರೋಮನ್, ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನ ಪ್ರಧಾನ ಕಾರ್ಯದರ್ಶಿ ಎಸ್. ಮಂಜು, ಚಿದಂಬರ ನಟೇಶ ನಾಟ್ಯ ಶಾಲೆ ನಿರ್ದೇಶಕಿ ವಿದುಷಿ ಸುನಿತಾ ನಂದಕುಮಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ವಿನೋದ್‌ಕುಮಾರ್, ಕಲಾವಿದರಾದ ಎಂ ಶಿವಪ್ರಸಾದ್, ವಿದ್ಯಾಶ್ರೀ, ಲಾವಣ್ಯ, ಶ್ರೀಕಂಠೇಗೌಡ, ಲೋಹಿತ್‌ಕುಮಾರ್, ಕಲಾತಪಸ್ವಿ ಟ್ರಸ್ಟ್ ಕಾರ್ಯದರ್ಶಿ ಅನಿಲ್‌ಕುಮಾರ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!