Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಿಡಿಓ ಜೇಷ್ಠತೆ ಪಟ್ಟಿ ತಯಾರಿಕೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಮನವಿ

2014ರಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪಡೆದ ಅಂಕಗಳ ಆಧಾರದ ಮೇಲೆ ಜೇಷ್ಠತಾ ಪಟ್ಟಿಯನ್ನು ತಯಾರಿಸಿದ್ದು, ಇದರದಲ್ಲಿ ಮಂಡ್ಯ, ಮೈಸೂರು. ರಾಮನಗರ. ಚಾಮರಾಜನಗರ ಸೇರಿದಂತೆ 13 ಜಿಲ್ಲೆಗಳ ಪಿಡಿಓಗಳಿಗೆ ಅನ್ಯಾಯವಾಗಿದ್ದು, ಇದನ್ನೂ ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು ಮಂಡ್ಯ ಜಿಲ್ಲಾಧಿಕಾರಿ ಡಾ.ಹೆಚ್.ಎನ್. ಗೋಪಾಲಕೃಷ್ಣ ಅವರ ಮೂಲಕ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿತು.

ಮಂಡ್ಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಲು ಈ ಹಿಂದೆ ಇದ್ದ 2014ರ ಜೇಷ್ಠತಾ ಪಟ್ಟಿಯಂತೆ, ಈಗಾಗಲೇ ಸುಮಾರು 300ಕ್ಕಿಂತ ಹೆಚ್ಚಿನ ಪಂಚಾಯತಿ ಅಭಿ ವೃದ್ಧಿ ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಗೆ ಬಡ್ತಿ ನೀಡಲಾಗಿದೆ. ಆದರೆ 2019 ರಲ್ಲಿ ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 2014ರ ಜೇಷ್ಠತಾ ಪಟ್ಟಿ ಯಲ್ಲಿ ಗೊಂದಲವಾಗಿದೆ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣ ನ್ಯಾಯಾಲಯದಲ್ಲಿದ್ದು, 2010ರಲ್ಲಿ ಆಯ್ಕೆಯಾಗಿರುವ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಳಿಗೆ ಸಂಬಂಧಪಟ್ಟಂತೆ ಒಂದೇ ದಿನ ನೋಟಿಫಿಕೇಶನ್, ಒಂದೇ ದಿನಾಂಕದಲ್ಲಿ ಪರೀಕ್ಷೆ, ಒಂದೇ ದಿನ ಫಲಿತಾಂಶ ಪ್ರಕಟ ಆಗಿರುತ್ತದೆ. ಅದರಂತೆ ಅಭ್ಯರ್ಥಿಗಳು ಪಡೆದಿರುವ ಅಂಕಗಳ ಆಧಾರದ ಮೇಲೆ 2014ರಲ್ಲಿ ಜೇಷ್ಠತಾ ಪಟ್ಟಿಯನ್ನು ತಯಾರಿಸಲಾಗಿದೆ. ಆದರೆ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು ಈ ಮಧ್ಯೆ ತಾತ್ಕಾಲಿಕವಾಗಿ ವರ್ಕಿಂಗ್ ಅರೇಂಜ್ಮೆಂಟ್ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸೇವೆಗೆ ಸೇರಿದ ದಿನಾಂಕದ ಆಧಾರದ ಮೇಲೆ 17 ಜಿಲ್ಲೆಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಆದ್ಯತೆಯಲ್ಲಿ ಮೊದಲಿಗೆ ಪರಿಗಣಿಸಿ, ನಂತರ 13 ಜಿಲ್ಲೆಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಕೊನೆಯಲ್ಲಿ ಸೇರಿಸಿ ಜೇಷ್ಠತಾ ಪಟ್ಟಿ ತಯಾರಿಸಿರುವುದು ದೋಷಪೂರಿತವಾಗಿದೆ ಎಂದು ದೂರಿದರು.

ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು ಸರಿಯಾದ ಕ್ರಮ ಅನುಸರಿಸಬೇಕೆಂದು ಹಾಗೂ ತಾತ್ಕಾಲಿಕ ವರ್ಕಿಂಗ್ ಅರೇಂಜ್ಮೆಂಟ್ ಮಾಡುತ್ತಿರುವುದನ್ನು ತಕ್ಷಣವೇ ಕೈಬಿಡಬೇಕೆಂದು ಜಿಲ್ಲಾಧಿಕಾರಿ ಹಾಗೂ  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎ.ಪ್ರಶಾಂತ ಬಾಬು, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಕುಮಾರ್, ರಾಜ್ಯ ಪರಿಷತ್ ಸದಸ್ಯರಾದ ದಿನೇಶ್ ಕುಮಾರ್, ಸೋಮಶೇಖರ್, ಪಿಡಿಓಗಳಾದ ಮಲ್ಲೇಶ್, ಗಂಗಾಧರ್, ಮಂಜು, ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!