ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನವು ಮಳವಳ್ಳಿಯಲ್ಲಿ ಶಾಂತಿಯುತವಾಗಿ ನಡೆಯಿತು.ಶಾಸಕ ಡಾ ಕೆ.ಅನ್ನದಾನಿ, ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಸೇರಿದಂತೆ ಪ್ರಮುಖ ನಾಯಕರು ಮತದಾನ ಮಾಡಿದರು.
ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಪದವೀಧರ ಮತದಾರರು ಸರದಿಯಲ್ಲಿ ನಿಂತು ಮತದಾನ ಮಾಡಿದರು.
ಸಾಮಾನ್ಯ ಮತದಾರನಂತೆ ಸರದಿಯಲ್ಲಿ ನಿಂತು ಮತದಾನ ಮಾಡಿದ ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ಪದವೀಧರ ಮತದಾರನಾಗಿ ಮತದಾನ ಮಾಡಿದ್ದೇನೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡರ ಗೆಲುವು ನಿಶ್ಚಿತವಾಗಿದೆ.
ನಾಲ್ಕು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪದವೀಧರರ ಮತದಾರರು ಇಷ್ಟು ದೊಡ್ಡ ಪ್ರಮಾಣದಲ್ಲಿ ಸರದಿಯಲ್ಲಿ ನಿಂತು ಮತದಾನ ಮಾಡುತ್ತಿರುವುದು ಇತಿಹಾಸದಲ್ಲಿಯೇ ಮೊದಲಾಗಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಯನ್ನು ಒಂದು ವರ್ಷದ ಮೊದಲೇ ಆಯ್ಕೆ ಮಾಡಿ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ 4 ಜಿಲ್ಲೆಯಲ್ಲಿ ಅತಿ ಪದವೀಧರರ ನೊಂದಣಿ ಮಾಡಿದ ಪರಿಣಾಮ ಹೆಚ್ಚು ಮತದಾರರು ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಬಿಜೆಪಿ ದುರಾಡಳಿತ ಹಾಗೂ ಇತರ ಪಕ್ಷಗಳ ಕಿತ್ತಾಟದಿಂದ ಮತ್ತೊಮ್ಮೆ ಕಾಂಗ್ರೆಸ್ ಬರಲಿ ಎನ್ನುವುದು ವಿದ್ಯಾವಂತರ ಅಭಿಮತವಾಗಿದೆ ಎಂದರು.
ಶಾಸಕ ಡಾ.ಕೆ ಅನ್ನದಾನಿ ಮಾತನಾಡಿ,ದಕ್ಷಿಣ ಪದವೀಧರ ವಿಧಾನ ಪರಿಷತ್ ಚುನಾವಣೆಯು ತಾಲ್ಲೂಕಿನಲ್ಲಿ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಸಣ್ಣ ಅಹಿತಕರ ಘಟನೆಯೂ ನಡೆಯಬಾರದು ಎಂದರು.
ಪ್ರಜ್ಞಾವಂತ ಪದವೀಧರ ಮತದಾರರು ಸರದಿಯಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿಗಳ ಪರವಾಗಿ ಮತ ಹಾಕುವಂತೆ ಕೇಳುತ್ತಿರುವುದು ಕಂಡು ಬಂದಿತು.