Thursday, September 19, 2024

ಪ್ರಾಯೋಗಿಕ ಆವೃತ್ತಿ

ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ; ಹೈನು ಬೆಳೆಗೆ ನೀರೊದಗಿಸಲು ತೀರ್ಮಾನ ಕೈಗೊಳ್ಳಿ – ರೈತಸಂಘ ಆಗ್ರಹ

ಕೊಡಗು, ಮಡಿಕೇರಿ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುರಿಂದ ಕೆಆರ್’ಎಸ್ ಒಳಹರಿವು ಹೆಚ್ಚಾಗಿದ್ದು, ಅಣೆಕಟ್ಟೆಯ ನೀರಿನ ಮಟ್ಟ 105 ಅಡಿಗೆ ತಲುಪಿದೆ, ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ ಇನ್ನೂ ಒಂದು ದಿನದಲ್ಲಿ ನೀರಿನ ಮಟ್ಟ 110 ಅಡಿಗೆ ತಲುಪಲಿದೆ, ಹಾಗಾಗಿ ರೈತರು ಹೈನು (ರಬಿ) ಬೆಳೆಯೊಡ್ಡಲು ಕೂಡಲೇ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಕೂಡಲೇ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರು ಕೂಡಲೇ ನೀರಾವರಿ ಸಲಹೆ ಸಮಿತಿ ಸಭೆಯನ್ನು ಕರೆದು ಹೈನು ಬೆಳೆಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಬೇಕು. ಅಲ್ಲದೇ ಸರ್ಕಾರದ ವತಿಯಿಂದ ಉತ್ತಮ ಭಿತ್ತನೆ ಬೀಜಗಳು ಹಾಗೂ ರಸಗೊಬ್ಬರವನ್ನು ರಿಯಾಯಿತಿ ದರದಲ್ಲಿ ಪೂರೈಕೆ ಮಾಡಬೇಕೆಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಒತ್ತಾಯಿಸಿದರು.

ಕಬ್ಬಿಗೆ ಬೆಂಬಲ ಬೆಲೆ ಘೋಷಿಸಿ

ಕಬ್ಬು ಬೆಳೆಗೆ ರಾಜ್ಯ ಸರ್ಕಾರ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು, ಕಳೆದ 9 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಯಾವ ಸರ್ಕಾರವು ಕೂಡ ಬೆಂಬಲ ಬೆಲೆಯನ್ನು ಘೋಷಣೆ ಮಾಡಲಿಲ್ಲ, ಹಾಗಾಗಿ ಚುನಾವಣೆಯಲ್ಲಿ ಅವರಿಗೆ ರಾಜ್ಯದ ಜನರು ಸರಿಯಾದ ಪಾಠ ಕಲಿಸಿದ್ದಾರೆ. ಈಗ ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರವು ಬೆಂಬಲ ಬೆಲೆ ಘೋ‍ಷಿಸಿ ರೈತರ ಪರ ನಿಲ್ಲಬೇಕೆಂದು ಆಗ್ರಹಿಸಿದರು.

ಕೊಬ್ಬರಿಗೆ ಬೆಂಬಲ ಬೆಲೆ ನೀಡಿ

ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಇದರಿಂದ ತೆಂಗು ಬೆಳೆಗಾರರು ಕಂಗಾಲಾಗಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಬೇಕು. ನಾಫೆಡ್ ವತಿಯಿಂದ 11,750 ರೂ.ಗಳ ದರದಲ್ಲಿ ಕೊಬ್ಬರಿ ಖರೀದಿ ಮಾಡುತ್ತಿದ್ದು, ಇದರ ಉಪಯೋಗವು ಕೆಲವೇ ಕೆಲವು ರೈತರಿಗೆ ಆಗುತ್ತಿದೆ, ಆದ್ದರಿಂದ ಎಲ್ಲಾ ತೆಂಗು ಬೆಳೆಗಾರರಿಂದ ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿ ಮಾಡಬೇಕೆಂದು ಒತ್ತಾಸಿದರು.

ಜಾಹೀರಾತು

ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ, 15 ಜಿಲ್ಲೆಗಳಲ್ಲಿ ಆ.12ರಂದು ಸಂಸದರ ಕಚೇರಿಗಳಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು, ಅಲ್ಲದೇ ಆಕ್ಟೋಬರ್ 2ರಿಂದ ತಿಪಟೂರಿನಿಂದ ಬೆಂಗಳೂರು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿಸ್ನಿಲ್ಯಾಂಡ್ ಬೇಡವೇ ಬೇಡ

ಕೆ.ಆರ್.ಎಸ್ ಬಳಿ ಡಿಸ್ನಿಲ್ಯಾಂಡ್ ನಿರ್ಮಾಣ ಮಾಡುವುದಾಗಿ ಸರ್ಕಾರ ಪ್ರಸ್ತಾಪಿಸಿದೆ, ಆದರೆ ಇದಕ್ಕೂ ರೈತಸಂಘ ಎಂದಿಗೂ ಅವಕಾಶ ನೀಡುವುದಿಲ್ಲ, ಡಿಸ್ನಿಲ್ಯಾಂಡ್ ನಿಂದ ಅಣೆಕಟ್ಟೆಗೆ ಅಪಾಯವಿರುವುದರಿಂದ ಇದಕ್ಕೆ ನಾವು ಒಪ್ಪಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜು.31ರಂದು ರೈತರ ಪ್ರತಿಭಟನಾ ಸಭೆ 

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಜು.31ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದರು ರೈತರ ಪ್ರತಿಭಟನಾ ಸಭೆ ನಡೆಸಲಾಗುವುದೆಂದು ಕೆಂಪೂಗೌಡ ತಿಳಿಸಿದರು.

ರೈತ ವಿರೋಧಿ  ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ & ಸಂರಕ್ಷಣಾ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಹಾಗೂ ಕೃಷಿ ಬೆಲೆ ಆಯೋಗಕ್ಕೆ ಶಾಸನ ಬದ್ಧ ಅಧಿಕಾರ ನೀಡಬೇಕು.  ಟನ್ ಕಬ್ಬಿಗೆ 4500 ರೂ.ಗಳನ್ನು ನಿಗದಿಪಡಿಸಬೇಕು ಹಾಗೂ ರಂಗರಾಜನ್‌ ವರದಿಯಂತೆ ಉಪ ಉತ್ಪನ್ನಗಳ ಮೇಲಿನ ಲಾವಾಂಶದಲ್ಲಿ ಕಬ್ಬು ಬೆಳೆಗಾರರಿಗೆ ಶೇ.70ರಷ್ಟು ಲಾಭಾಂಶ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದರು.

ಮಂಡ್ಯ ಹಾಲು ಒಕ್ಕೂಟವು ರೈತರಿಗೆ ನೀಡುತ್ತಿದ್ದ ಲೀಟರ್ ಹಾಲಿಗೆ 1,75 ಪೈಸೆಗಳನ್ನು ಕಡಿತ ಮಾಡಿರುವುದನ್ನು ಕೂಡಲೇ ವಾಪಸ್‌ ಪಡೆಯಬೇಕು. ಅಲ್ಲದೇ ಒಕ್ಕೂಟದಲ್ಲಿ ಈ ಹಿಂದೆ ನಡೆದಿರುವ 72ಕೋಟಿ ರೂಪಾಯಿಗಳ ದುರುಪಯೋಗ ಬಾಬ್ತು ನ್ಯಾಯಾಲಯದ ಆದೇಶದಂತೆ ವಸೂಲಿ ಮಾಡಿ, ಒಕ್ಕೂಟಕ್ಕೆ ಜಮಾ ಮಾಡಿಕೊಳ್ಳಲು ನಿರ್ದೇಶನ ನೀಡಬೇಕೆಂದು ಆಗ್ರಹಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ರೈತ ಮುಖಂಡರಾದ ಲಿಂಗಾಪ್ಪಾಜಿ, ವಿಜಯ್ ಕುಮಾರ್, ರವಿಕುಮಾರ್, ರಘು, ಮಂಜು, ಪ್ರಕಾಶ್,  ಬಾಲಕೃಷ್ಣ ಹಾಗೂ ರಾಣಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!