Saturday, May 18, 2024

ಪ್ರಾಯೋಗಿಕ ಆವೃತ್ತಿ

ಗೂಂಡಾ ಸಂಸ್ಕೃತಿ ಜೆಡಿಎಸ್ ಗೆ ಶೋಭೆ ತರುವುದಿಲ್ಲ – ಸಿ.ಡಿ.ಗಂಗಾಧರ್

ಕಳೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವು ಬಹುಮತ ಇದ್ದರೂ ನಮ್ಮ ನಿರ್ದೇಶಕರನ್ನು ಅನರ್ಹಗೊಳಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಾಗ ನಾವು ಹಾದಿ ಬೀದಿಯಲ್ಲಿ ಮಾತನಾಡದೇ ಕಾನೂನು ಹೋರಾಟ ಮಾಡಿ ಜಯಗಳಿಸಿದ್ದೇವೆ, ಅದೇ ರೀತಿ ಅವರಿಗೆ ಅನ್ಯಾಯವಾಗಿದ್ದರೆ ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕು. ಅದು ಬಿಟ್ಟು ಗೂಂಡಾ ಸಂಸ್ಕೃತಿಯ ರೀತಿಯಲ್ಲಿ ಸಹಕಾರ ಸಂಘಗಳ ಕಚೇರಿಗೆ ಹೋಗಿ ಗಲಾಟೆ ಮಾಡುವುದು, ಸಾರ್ವಜನಿಕವಾಗಿ ನಮ್ಮ ನಾಯಕರನ್ನು ನಿಂದಿಸುವಂತಹ ಕೆಲಸ ಜೆಡಿಎಸ್‌ನವರಿಗೆ ಶೋಭೆ ತರುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಬೋರೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಸಹಿಸದ ಜೆಡಿಎಸ್ ಮಾಜಿ ಶಾಸಕರು ಹಾಗೂ ಕೆಲ ಸದಸ್ಯರು ನಮ್ಮ ನಾಯಕರಾದ ಸಚಿವ ಚಲುವರಾಯಸ್ವಾಮಿ ವಿರುದ್ಧ ಆರೋಪ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಜಾಹೀರಾತು

ಗೊಂದಲ ಮೂಡಿಸುವ ಕಾರ‍್ಯ ಬೇಡ

ವಿರೋಧ ಪಕ್ಷದಲ್ಲಿರುವವರು ಸಮರ್ಥವಾಗಿ ವಿರೋಧ ಪಕ್ಷದ ಕೆಲಸ ಮಾಡಬೇಕು. ಆಡಳಿತ ಪಕ್ಷದವರು ಎಡವಿದರೆ ಅದನ್ನು ತಿದ್ದಿ ಸರಿಪಡಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಜನರಲ್ಲಿ ಗೊಂದಲ ಮೂಡಿಸುವಂತಹ ಕಾರ‍್ಯ ನಡೆಸಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

2008ರಲ್ಲಿ ನರೇಂದ್ರಸ್ವಾಮಿಯವರು ಮಂತ್ರಿಯಾಗುವುದಕ್ಕೆ ಕುಮಾರಸ್ವಾಮಿ ಕಾರಣ ಎಂದು ಮಳವಳ್ಳಿಯ ಮಾಜಿ ಶಾಸಕ ಡಾ. ಅನ್ನದಾನಿ ಹೇಳಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ನರೇಂದ್ರಸ್ವಾಮಿ ನೇತೃತ್ವದಲ್ಲಿ ಸುಮಾರು 9 ಮಂದಿ ಸಚಿವರು ರಾಜೀನಾಮೆ ನೀಡಿ ಹೊರಬಂದಿದ್ದಕ್ಕೆ ಕಾರಣ ಯಾರು, ಸುಪ್ರೀಂಕೋರ್ಟಿಗೆ ಅಲೆದಾಡಿದ್ದಕ್ಕೆ ಯಾರು ಕಾರಣ ಎಂದು ಎಲ್ಲರಿಗೂ ತಿಳಿದಿದೆ ಎಂದು ಕುಮಾರಸ್ವಾಮಿ ಹೆಸರೇಳದೆ ಟೀಕಿಸಿದರು.

ನಾಗಮಂಗಲದ ಮಾಜಿ ಶಾಸಕ ಸುರೇಶ್‌ಗೌಡ ಅವರು ಆ್ಯಂಬುಲೆನ್ಸ್ ತಡೆಯುವ ಮೂಲಕ ತಪ್ಪಿತಸ್ಥರೆನಿಸಿಕೊಂಡಿದ್ದಾರೆ. ಅವರಿಗೆ ಕಾನೂನಿನ ಅಡಿಯಲ್ಲಿ ತಕ್ಕ ಶಿಕ್ಷೆಯಾಗಲಿದೆ. ದೇವೇಗೌಡರ ಬಗ್ಗೆ ನಮಗೆ ಅಭಿಮಾನವಿದೆ. ಆದರೆ ಕುಮಾರಸ್ವಾಮಿ ಅವರು ಒಕ್ಕಲಿಗ ನಾಯಕರನ್ನು ತುಳಿದು ದ್ವೇಷದ ರಾಜಕೀಯ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಕೆ.ಆರ್.ಪೇಟೆಯ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಮಾತನಾಡಿ, ಒಕ್ಕಲಿಗರ ನಾಯಕರೆಂದು ಹೇಳಿ ಕೊಳ್ಳುವ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಒಕ್ಕಲಿಗ ನಾಯಕರ ಬೆಳವಣಿಗೆಗೆ ಅಡ್ಡಿಯಾಗಿದ್ದಾರೆ. ಇವರಿಂದ ಹಲವಾರು ಮಂದಿ ಜೆಡಿಎಸ್ ತೊರೆದು ಬೇರೆ ಬೇರೆ ಪಕ್ಷಗಳಿಗೆ ಹೋಗಿದ್ದಾರೆ. ಇದು ಅವರ ಬೆಳವಣಿಗೆಯೇ ಎಂದು ಪ್ರಶ್ನಿಸಿದರು.

ಜಿಲ್ಲೆಯ ಅಭಿವೃದ್ಧಿ ಮಾಡಲಿಲ್ಲ

ಕಳೆದ ಬಾರಿ ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಜನ ಜೆಡಿಎಸ್ ಶಾಸಕರನ್ನು ಕೊಟ್ಟಿದ್ದರೂ ಜಿಲ್ಲೆಯ ಅಭಿವೃದ್ಧಿ ಮಾಡಲಿಲ್ಲ. ಮೈಷುಗರ್ ಬಾಗಿಲು ಮುಚ್ಚಿದ್ದು ನಿಮ್ಮ ಕೊಡುಗೆಯೇ ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಮಂದಿ ಯುವಕರಿಗೆ ಬಿ ಫಾರಂ ನೀಡಿ ಅವರ ಭವಿಷ್ಯವನ್ನು ಹಾಳು ಮಾಡಿದ್ದೀರಿ ? ನಿಮ್ಮ ಪಕ್ಷ ಎಲ್ಲಿ ಪ್ರಾಬಲ್ಯವಿದೆಯೋ ಅಲ್ಲಿ ಸ್ಪರ್ಧಿಸಲು ಅವಕಾಶ ನೀಡದೇ ಬೇರೆ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಅವರಿಗೆ ಅನ್ಯಾಯ ಮಾಡಿದ್ದೀರಿ ಎಂದು ಕಿಡಿಕಾರಿದರು.

ಇಂತಹ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ಬಿಟ್ಟು ಈಗತಾನೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ವಿಶ್ವದಲ್ಲಿ ಎಲ್ಲೂ ಮಾಡದ ಯೋಜನೆಗಳನ್ನು ನಮ್ಮ ಸರ್ಕಾರ ನೀಡಿದೆ. ಸ್ವಲ್ಪ ಕಾಲಾವಕಾಶ ಕೊಟ್ಟು ನೋಡಿ. ತಪ್ಪು ಮಾಡಿದರೆ ಅದರ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಕ್ಷುಲ್ಲಕ ರಾಜಕೀಯ ಮಾಡುವುದು ತರವಲ್ಲ ಎಂದು ಸಲಹೆ ನೀಡಿದರು.

ನಗರಸಭಾ ಸದಸ್ಯರಾದ ಶ್ರೀಧರ್, ನಯೀಂ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ರಾಜೇಗೌಡ, ಮುಖಂಡರಾದ ಸುಂಡಹಳ್ಳಿ ಮಂಜುನಾಥ್, ನಂದೀಶ್ ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!