ಪರಿಸರ ಅಸಮತೋಲನದಿಂದಾಗಿ ಅತಿವೃಷ್ಠಿ-ಅನಾವೃಷ್ಠಿಯಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತಿದ್ದು, ಭೂಮಿಗೆ ಗಂಡಾಂತರ ಕಾದಿದೆ ಎಂದು ಜನನಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ ಜಗದೀಶ್ ಎಚ್ಚರಿಕೆ ನೀಡಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದ ಜನನಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಜಾಥ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಮಾನವ ತನ್ನ ದುರಾಸೆಗಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಪರಿಸರ ನಾಶದಿಂದ ಅತಿವೃಷ್ಟಿ-ಅನಾವೃಷ್ಟಿಯಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಈ ಹಿನ್ನಲೆಯಲ್ಲಿ ನಾವೆಲ್ಲ ಪರಿಸರವನ್ನು ರಕ್ಷಿಸಿ ಉಳಿಸುವ ಸಂಕಲ್ಪ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗಿಡಗಳನ್ನು ನೆಟ್ಟು ಬೆಳೆಸಿದರೆ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯವಾಗಲಿದ್ದು, ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಬೆಳೆಸಬೇಕು. ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜನನಿ ವಿದ್ಯಾ ಸಂಸ್ಥೆಯ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಬಸವಣ್ಣ, ಕಾಳಯ್ಯ, ಕುಸುಮ, ಸುಷ್ಮಿತಾ, ಶ್ರುತಿ, ಪೂರ್ಣಿಮಾ, ರಶ್ಮಿ, ಮಂಗಳ ಸೇರಿದಂತೆ ಇತರರಿದ್ದರು.