ಮಹಾರಾಷ್ಟ್ರ ವಿಶ್ವವಿದ್ಯಾಲಯದಲ್ಲಿ ನಡೆದ ಕಾನೂನು ತೀರ್ಪು ಬರೆಯುವ ಸ್ಪರ್ಧೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ರ್‍ಯಾಂಕ್ ಪಡೆದುಕೊಂಡ ಮೈಸೂರಿನ ವಿದ್ಯಾ ವಿಕಾಸ್ ಕಾನೂನು ಕಾಲೇಜಿನ ವಿದ್ಯಾಥಿ೯ನಿ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದ ಬಿ.ಕೆ. ಭಾವನ ಅವರನ್ನು ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಡಿಎಸ್ಎಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮಳವಳ್ಳಿ ಪಟ್ಟಣದ ಗಣೇಶ ಕಾಂಪ್ಲೆಕ್ಸ್ ನಲ್ಲಿರುವ ಅಂಬೇಡ್ಕರ್ ವಿಚಾರ ವೇದಿಕೆಯ ಕಚೇರಿಯಲ್ಲಿ ಭಾವನ ಅವರನ್ನು ಅಭಿನಂದಿಸಲಾಯಿತು.
ಅಂಬೇಡ್ಕರ್ ವಿಚಾರ ವೇದಿಕೆಯ ಜಯರಾಜು ಮಾತನಾಡಿ, ಗ್ರಾಮೀಣ ಪ್ರದೇಶದ ಹೆಣ್ಣು ಮಗಳು ರಾಷ್ಟ್ರ ಮಟ್ಟದ ಕಾನೂನು ತೀರ್ಪು ಬರೆಯುವ ಸ್ಪಧೆ೯ಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ನ್ಯಾಯಾಧೀಶರಾಗಿ ಬಡವರಿಗೆ ಮತ್ತು ದಲಿತರಿಗೆ ಸಹಾಯವಾಗುವಂತೆ ಸೇವೆ ಸಲ್ಲಿಸಲಿ ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿ ಬಿ.ಕೆ. ಭಾವನ ಮಾತನಾಡಿ, ಇಂದು ಕಾನೂನಿನ ಅಡಿಯಲ್ಲಿ ಪ್ರತಿಯೊಬ್ಬರೂ ಬದುಕುತ್ತಿದ್ದೇವೆ. ಸಂವಿಧಾನ ಮತ್ತು ಕಾನೂನು ಅರಿವು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಕಾನೂನು ತೀರ್ಪು ಬರೆಯುವ ಸಿಕ್ಕಿದ ಅವಕಾಶವನ್ನು ಸಮರ್ಪಕ ವಾಗಿ ಬಳಸಿಕೊಂಡಿದ್ದೇನೆ.
ಅಂಬೇಡ್ಕರ್ ಅವರನ್ನು ಪೂಜಿಸಿ ವಿಜೃಂಭಿಸಿದರೇ ಸಾಲದು. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರ ಸಹಕಾರ ಮತ್ತು ಸ್ಪೂರ್ತಿಯಿಂದ ಇನ್ನೂ ಹೆಚ್ಚಿನ ಸಾಧನೆ ಮಾಡಲು ಶ್ರಮಿಸುತ್ತೇನೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಮಹೇಶ್, ಸುರೇಶ್, ಡಿಎಸ್ಎಸ್ ಯತೀಶ್, ದ್ಯಾವಪಟ್ಟಣ ಪವನ್ ಕುಮಾರ್, ಲಿಂಗದೇವರು, ಸಾಗ್ಯ ಕೆಂಪಣ್ಣ, ನಂಜುಂಡಸ್ವಾಮಿ, ಮಹದೇವು ಸೇರಿದಂತೆ ಇತರರಿದ್ದರು.