Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಿಎಫ್ಐ ಜಿಲ್ಲಾಧ್ಯಕ್ಷ ಇರ್ಫಾನ್ ಪಾಷಾ ಬಂಧನ

ದೇಶಾದ್ಯಂತ ಪಿಎಫ್ಐ, ಎಸ್.ಡಿ.ಪಿ.ಐ  ಸಂಘಟನೆಗಳ ಮುಖಂಡರನ್ನು ಬಂಧಿಸುತ್ತಿದ್ದು, ಇಂದು ಮಂಡ್ಯ ನಗರದಲ್ಲಿ ಪಿಎಫ್ಐ ಅಧ್ಯಕ್ಷ ಇರ್ಫಾನ್ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಪಿಎಫ್ಐ ಜಿಲ್ಲಾಧ್ಯಕ್ಷ ಇರ್ಫಾನ್ ಪಾಷ ಅವರ ಮನೆಗೆ ಮಂಡ್ಯ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ನೇತೃತ್ವದ ಪೊಲೀಸರ ತಂಡ ಇಂದು ಬೆಳಗಿನ ಜಾವ 4:30 ಗಂಟೆಗೆ ದಾಳಿ ಮಾಡಿ ಇರ್ಫಾನ್ ಪಾಷಾ ಅವರನ್ನು ಬಂಧಿಸಿದರು.

ನಂತರ ಮೊದಲು ಮಂಡ್ಯ ನಗರದ ಪೂರ್ವ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು. ವಿಷಯ ತಿಳಿದು ಅಲ್ಲಿಗೆ ಬಂದ ಪಿಎಫ್ಐ ಕಾರ್ಯಕರ್ತರು ಪೊಲೀಸರ ನಡೆಯನ್ನು ಖಂಡಿಸಿದರು. ನಂತರ ತಹಶೀಲ್ದಾರ್ ಮಹಮದ್ ಕುಂಇ ಅವರ ನಿವಾಸಕ್ಕೇ ತೆರಳಿ ಅವರ ಮುಂದೆ  ಹಾಜರು ಪಡಿಸಲಾಯಿತು. ಈ ಸಂದರ್ಭದಲ್ಲಿ ಅಲ್ಲಿಯೂ ಕೂಡ ಪಿಎಫ್ಐ, ಎಸ್.ಡಿ.ಪಿ.ಐ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಪಿಎಫ್ಐ ಸಂಘಟನೆಯಿಂದ ಯಾವುದೇ ಚಟುವಟಿಕೆ ನಡೆಸದಂತೆ ಮುಂಜಾಗ್ರತೆ ಕ್ರಮವಾಗಿ ಇರ್ಫಾನ್ ಪಾಷಾ ಅವರನ್ನು ಬಂಧಿಸಿ ತಹಶೀಲ್ದಾರ್ ಎದುರು ಹಾಜರು ಪಡಿಸಲಾಯಿತು. ಆದರೆ ಇರ್ಫಾನ್ ಪಾಷಾ ಬಂಧನ ಖಂಡಿಸಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ತಹಶೀಲ್ದಾರ್ ನಿವಾಸದ ಎದುರು ಜಮಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದರು.

ಯಾವುದೇ ನೋಟಿಸ್ ನೀಡದೆ ಏಕಾಏಕಿ ಪಿಎಫ್ಐ ಸಂಘಟನೆಯ ಅಧ್ಯಕ್ಷರನ್ನು ಬಂಧಿಸಿರುವುದು ಖಂಡನೀಯ ಎಂದು ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪಿಎಫ್ಐ ಸಂಘಟನೆಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಪೋಲಯ ಇಬ್ರಾಹಿಂ, ದಾದಾಪೀರ್ ಹಾಗೂ ಮುಕ್ತಾರ್ ಅಹಮದ್ ಸೇರಿದಂತೆ ಮೂವರನ್ನು ಕೂಡ ಬಂಧಿಸಿದರು. ಪಿಎಫ್ಐ ಅಧ್ಯಕ್ಷ ಇರ್ಫಾನ್ ಪಾಷಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಂವಿಧಾನ ಬಿಟ್ಟು ನಡೆದಿಲ್ಲ

ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಸಾದತ್ ಪಾಷಾ ಮಾತನಾಡಿ, ಪಿಎಫ್ಐ ಅಧ್ಯಕ್ಷ ಇರ್ಫಾನ್ ಪಾಷಾರನ್ನು ತಹಶೀಲ್ದಾರ್ ಅವರ ಹತ್ತಿರ ಕರೆದುಕೊಂಡು ಹೋಗಿ ಬಿಡುತ್ತೇವೆ ಎಂದು ಪೊಲೀಸರು ಬಂಧಿಸಿದ್ದಾರೆ. ಆದರೆ ತಹಶೀಲ್ದಾರ್ ರವರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಮೂವರು ಕಾರ್ಯಕರ್ತರನ್ನು ಬಂಧಿಸುವ ಮೂಲಕ ಪಿಎಫ್ಐ ಸಂಘಟನೆಯನ್ನು ಹತ್ತಿಕ್ಕುವ ಕೆಲಸವನ್ನು ಪೊಲೀಸರು ಮತ್ತು ರಾಜಕಾರಣಿಗಳು ಸೇರಿ ಮಾಡಿದ್ದಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಬಿಟ್ಟು ನಾವು ಯಾವುದೇ ಕಾನೂನು ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿಲ್ಲ. ಆದರೆ ಪೊಲೀಸರು ನಮ್ಮ ಸಂಘಟನೆಯ ‌ಮುಖಂಡರನ್ನು ಬಂಧಿಸುವ ಮೂಲಕ ಕಾನೂನು ವಿರೋಧಿ ಚಟುವಟಿಕೆಯನ್ನು ಮಾಡಲು ಪ್ರೇರೇಪಿಸುತ್ತಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಮುಂದೆಯೂ ಕೂಡ ಕಾನೂನು ವಿರೋಧಿ ಕೆಲಸ ಮಾಡುವುದಿಲ್ಲ. ನಮ್ಮ ಮುಖಂಡರನ್ನು ಕಾನೂನು ಪ್ರಕಾರ ಬಿಡುಗಡೆ ಮಾಡಿಸಿಕೊಂಡು ಬರುತ್ತೇವೆ ಎಂದರು.

ಇನ್ನು ಮುಂದೆ ಹೀಗೆ ಮಾಡಿದರೆ ಜೈಲಿಗೆ ಹೋಗಲು ನಾವು ಸಿದ್ಧ. ಪೊಲೀಸರು ರಾತ್ರಿ ಎಷ್ಟೊತ್ತಿಗೆ ಬರಲಿ,  ಹೆದರಿ ಓಡಿ ಹೋಗುವ ಕಾರ್ಯಕರ್ತರು ನಮ್ಮಲ್ಲಿಲ್ಲ. ನಮ್ಮ ಸಂಘಟನೆ ಸಂವಿಧಾನಕ್ಕೆ ಬದ್ಧವಾಗಿ ನಡೆದಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!