ಸುಳ್ಳು ಹೆಚ್ಚಿಗೆ ದಿನ ನಡೆಯುವುದಿಲ್ಲ. ಸುಳ್ಳಿಗೆ ತಿಲಾಂಜಲಿ ಇಡೋ ದಿನ ಬಂದಾಗ, ಸತ್ಯ ಮೇಲೆದ್ದು ನಿಂತು ಧರ್ಮವು ಮೇಲೆಳುತ್ತದೆ ಎಂದು ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಆದಿನಾಡು ಚಿಕ್ಕಮ್ಮತಾಯಿ ಪುಣ್ಯಕ್ಷೇತ್ರದಲ್ಲಿ ನಡೆದ ಕ್ಯಾಲೆಂಡರ್, ‘ಕೆಂಡ ಕಾರಿತು’ ಕಾದಂಬರಿ ಬಿಡುಗಡೆ ಹಾಗೂ ದಾಸೋಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಬಾರಿ ಧರ್ಮದ ಹೆಜ್ಜೆಯಲ್ಲಿ ಅಧಿಕಾರ ನಡೆಸಿ ನಂತರ ಆದಂತಹ ಲೋಪದ ಬಗ್ಗೆ ಇಂದು ಪ್ರತಿಯೊಂದು ಜನರು ಮಾತನಾಡುತ್ತಿದ್ದಾರೆ. ಇದು ಸತ್ಯಕ್ಕೆ ಸಿಕ್ಕ ಜಯ ಎಂದು ಸಿದ್ದರಾಮಯ್ಯನವರ ಆಡಳಿತವನ್ನು ಗುಣಗಾನ ಮಾಡಿದರು.
ನಾವು, ನೀವೆಲ್ಲ ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾದ ಹೆಜ್ಜೆಯನ್ನು ಇಡುವ ಮೂಲಕ ನಾಡಿಗೆ ಸುಭಿಕ್ಷೆ, ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡಬೇಕಿದೆ. ಜನರಿಗೆ ಮಾಡುವ ಸೇವೆ ಬಗ್ಗೆ ಭಾಷಣ ಮಾಡದೆ, ಸೇವೆಯಲ್ಲಿ ಪರಿಪೂರ್ಣತೆ ಸಾಧಿಸಿದಾಗ ದೇವರಿಗೆ ಕೈ ಮುಗಿಯುವುದು ಬೇಡ, ದೇವರೇ ನಮಗೆ ಆಶೀರ್ವಾದ ಮಾಡುತ್ತಾನೆ ಎಂದರು.
ಧರ್ಮ ಮರೆಯಬಾರದು
ಧರ್ಮಕ್ಕೆ ಇರುವ ಬೆಲೆಯನ್ನು ಯಾರೂ ಮರೆಯಬಾರದು. ಕೊರೊನಾ ಬಂದ ಸಂದರ್ಭದಲ್ಲಿ ಇಡೀ ಪ್ರಪಂಚದಲ್ಲಿ ಸತ್ತವರು ಯಾರೋ, ಅವರನ್ನು ಹೂತು ಹಾಕಿದವರು ಯಾರೋ, ಶುಶ್ರೂಷೆ ಮಾಡಿದ ದಾದಿ, ಡಾಕ್ಟರ್ ಯಾರು ಎಂಬುದನ್ನು ನೋಡಿದ್ದೇವೆ. ಕೊರೋನಾ ಬಂದಾಗ ಯಾವ ಚಿಕಿತ್ಸೆಯು ಸಿಗುತ್ತಿರಲಿಲ್ಲ. ಕೇವಲ ಆಕ್ಸಿಜನ್, ವೆಂಟಿಲೇಟರ್ ಎಂದು ಹೆಣಗಾಡಬೇಕಿತ್ತು.
ಎಲ್ಲಾ ದೇಶದಲ್ಲೂ ಇದೇ ಸಮಸ್ಯೆ ಆಗಿತ್ತು, ಜನರಿಗೆ ಉಸಿರು ಉಳಿಸಿಕೊಳ್ಳುವುದೇ ಮುಖ್ಯವಾಗಿತ್ತು. ಅವನ ಆಸ್ತಿ, ಹಣ, ಶೌರ್ಯ,ದರ್ಪ ಯಾವುದು ನಡೆಯಲಿಲ್ಲ. ಹುಟ್ಟಿಸಿದ ಮಗ, ಕಟ್ಟಿಕೊಂಡ ಹೆಂಡತಿ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಆಸ್ತಿಗಾಗಿ ಕಿತ್ತಾಡುವವರು ಯಾರೂ ಬರಲಿಲ್ಲ. ದೇವರು ಕೊರೊನಾ ಕಾಯಿಲೆಯ ರೂಪದಲ್ಲಿ ಸತ್ಯದ ರೂಪದ ದರ್ಶನ ಮಾಡಿಸಿದ. ಇದನ್ನು ಯಾರು ಮರೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯೆ ಸುಷ್ಮಾರಾಜು, ಮುಖಂಡರಾದ ಸಿ.ಪಿ.ರಾಜು, ಸವಿತಾ, ಮರೀಗೌಡ, ಟ್ರಸ್ಟ್ ಅಧ್ಯಕ್ಷ ಲಿಂಗಣ್ಣ ಸೇರಿದಂತೆ ಹಲವರಿದ್ದರು.




