Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಜನಸಾಮಾನ್ಯರಿಗೂ ಜವಾಬ್ದಾರಿ ಇದೆ- ಎನ್.ಯತೀಶ್

ಸಾರ್ವಜನಿಕರು ಕೂಡ ಪೊಲೀಸರೇ, ನಾವು ಖಾಕಿ ಸಮವಸ್ತ್ರ ಹಾಕಿರುವ ಪೊಲೀಸರು, ಜನರು ಖಾಕಿ ಹಾಕದ ಪೊಲೀಸರು, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ನಮ್ಮಷ್ಟೇ ಜವಾಬ್ದಾರಿ ಜನಸಾಮಾನ್ಯರಿಗೂ ಇರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.

ಜನಗಣ ಮುದ್ರಣ ಮತ್ತು ಪ್ರಕಾಶನವು ನಗರದ ವಾರ್ತಾ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ “ಪೊಲೀಸ್ ಮತ್ತು ಸಮುದಾಯ-ಮಂಡ್ಯ ಜಿಲ್ಲಾ ಪೊಲೀಸ್ ವ್ಯವಸ್ಥೆ ಒಂದು ಪಕ್ಷಿನೋಟ” ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಪೊಲೀಸರಿಗೆ ಮಾತ್ರವೇ ದಕ್ಷತೆ, ಪ್ರಾಮಾಣಿಕತೆ, ಬದ್ಧತೆ ಇರಬೇಕೆ? ಜನರಿಗೆ ಇರಬಾರದೆ ಎಂದು ಪ್ರಶ್ನಿಸಿದರು.

“ಜನರ ಮನಸ್ಥಿತಿಯಂತೆ ಸಮಾಜ ಇರಲಿದೆ. ಒಂದು ಪ್ರದೇಶದಲ್ಲಿನ ಕ್ರಿಮಿನಲ್‌ಗಳನ್ನು ಆಧರಿಸಿ ಆ ಸೊಸೈಟಿ ಇರುತ್ತದೆ” ಎಂದು ಜಾನ್ ಎಫ್.ಕೆನಡಿ ಹೇಳಿದ್ದಾರೆ. ಇದು ನಿಜವೂ ಹೌದು. ಸಮಾಜದಲ್ಲಿ ಒಂದು ಸಣ್ಣ ತಪ್ಪು, ಕಳ್ಳತನ, ದರೋಡೆ, ಬೆದರಿಕೆ ಪ್ರಕರಣಗಳು ಸಂಭವಿಸಿದಾಗ ಜನರು ಅದಕ್ಕೆ ಸ್ಪಂದಿಸಬೇಕು. ಪೊಲೀಸರಿಗೆ ದೂರು ನೀಡಬೇಕು. ಪೊಲೀಸ್ ವಿಚಾರಣೆಗೆ ಸಹಕರಿಸಬೇಕು. ಆದರೆ, “ಸುಮ್ಮನೆ ನಮಗ್ಯಾಕೆ ಊರ ಉಸಾಬರಿ” ಎಂದು ಸುಮ್ಮನಾದರೆ ಆ ಸೊಸೈಟಿ ಹಾಳಾಗಲಿದೆ. ಕ್ರಿಮಿನಲ್‌ಗಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಆ ಸೊಸೈಟಿಯ ಜನರೇ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು.

“ಪೊಲೀಸ್ ಮತ್ತು ಮಾಧ್ಯಮ” ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ನವೀನ್ ಚಿಕ್ಕಮಂಡ್ಯ, ಪೊಲೀಸರು ಮತ್ತು ಮಾಧ್ಯಮ ಸಮಾಜ ಆಧಾರದ ಸ್ತಂಭಗಳು. ಪೊಲೀಸರು ಮತ್ತು ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚು. ಇಬ್ಬರ ನಡುವೆ ಸಮನ್ವಯತೆ ಇದ್ದಾಗ ಸಾಮಾಜಿಕ ವ್ಯವಸ್ಥೆಯ ಆರೋಗ್ಯ ಕಾಪಾಡಲು ಸಾಧ್ಯ. ಪತ್ರಕರ್ತರಿಗೆ ಪೊಲೀಸ್ ವ್ಯವಸ್ಥೆ ಮತ್ತು ಕಾನೂನಿನ ಅರಿವಿದ್ದರೆ ಜವಾಬ್ದಾರಿ ನಿರ್ವಹಣೆ ಸುಲಭ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಪೊಲೀಸ್ ಮತ್ತು ಮಾಧ್ಯಮ ಇಲ್ಲದ ಸಮಾಜವನ್ನು ಊಹಿಸಿಕೊಳ್ಳುವುದು ಕಷ್ಟ. ಮಾಧ್ಯಮವು ಇಡೀ ವ್ಯವಸ್ಥೆಗೆ ಅಂಕುಶವಿದ್ದಂತೆ. ಪೊಲೀಸರು ಮತ್ತು ರಾಜಕಾರಣಿಗಳೊಂದಿಗೆ ಪತ್ರಕರ್ತರಿಗೆ ಸಂಪರ್ಕವಿರಬೇಕು, ಸಂಬಂಧವಿರಬಾರದು ಎಂಬ ಮಾತುಗಳನ್ನು ಹಿರಿಯರು ಹೇಳುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಸಮಾಜದ ಹಿತಕ್ಕಾಗಿ ವೃತ್ತಿ ಸಂಬಂಧ, ಭಾವನಾತ್ಮಕ ಸಂಬಂಧ ಇರಬೇಕು. ಆಗ ಮಾಹಿತಿ ವಿನಿಮಯ ಸರಿಯಾಗಿ ನಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

“ಪೊಲೀಸ್ ಮತ್ತು ನ್ಯಾಯಾಂಗ” ಕುರಿತು ಮಾತನಾಡಿದ ಹಿರಿಯ ವಕೀಲರ ಪಿ.ನರೇಂದ್ರಕುಮಾರ್, ಪೊಲೀಸ್ ಮತ್ತು ನ್ಯಾಯಾಂಗದ ಗುರಿ, ಕಾರ‍್ಯೋದ್ಧೇಶ ಒಂದೆ. ಅದು ನೊಂದ ವ್ಯಕ್ತಿಗೆ ನ್ಯಾಯ ಕೊಡಿಸುವುದು. ಆದರೆ, ಇಬ್ಬರೂ ಕರ್ತವ್ಯದ ಮಾರ್ಗ ಮಾತ್ರ ಬೇರೆ ಬೇರೆ. ಪೊಲೀಸರು ತನಿಖಾ ಮಾರ್ಗವಾದರೆ, ನ್ಯಾಯಾಂಗದ್ದು ವಿಚಾರಣಾ ಮಾರ್ಗವಾಗಿದೆ ಎಂದು ಹೇಳಿದರು.

“ಪೊಲೀಸ್ ಮತ್ತು ಸಮುದಾಯ-ಮಂಡ್ಯ ಜಿಲ್ಲಾ ಪೊಲೀಸ್ ವ್ಯವಸ್ಥೆ ಒಂದು ಪಕ್ಷಿನೋಟ” ಕೃತಿಯ ಬಗ್ಗೆ ಹಿರಿಯ ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ ಮಾತನಾಡಿದರು. ಹಿರಿಯ ವಕೀಲ ಕೆ.ಎಸ್.ದೊರೆಸ್ವಾಮಿ, ಕೃತಿಯ ಕರ್ತೃ ಹಾಗೂ ಹಿರಿಯ ಪತ್ರಕರ್ತ ಕೌಡ್ಲೆ ಚನ್ನಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್.ಎಸ್.ನಿರ್ಮಲ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!