ಕಾನೂನು ರಕ್ಷಣೆಯಲ್ಲಿ ತೊಡಗಿರುವ ಪೊಲೀಸರು ಮತ್ತು ವಕೀಲರು ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕ್ರೀಡೆ ಕ್ರಿಕೆಟ್ ಪಂದ್ಯಾವಳಿ ಮನರಂಜನೆ ಹಾಗೂ ಒತ್ತಡ ನಿವಾರಣೆಗೆ ಸಹಕಾರಿಯಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿ.ಮಾದೇಶ್ ತಿಳಿಸಿದರು.
ಮಳವಳ್ಳಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ನಡುವೆ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಕೀಲರ ದಿನಾಚರಣೆ ಅಂಗವಾಗಿ ಸ್ನೇಹ ಪೂರ್ವಕ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ, ಪೊಲೀಸ್ ಇಲಾಖೆ ಸಿಬ್ಬಂದಿಗೆ ಮತ್ತು ವಕೀಲರಿಗೆ ವಿಶ್ರಾಂತಿ ಸಿಗುವುದು ಬಹಳ ಕಡಿಮೆ. ಒಂದು ದಿನವಾದರೂ ಮನಸ್ಸಿಗೆ ಉಲ್ಲಾಸ ಸಿಗಲಿ ಎಂಬ ಉದ್ದೇಶದಿಂದ ಬಾಂಧವ್ಯ ಬೆಸೆಯುವ ಪಂದ್ಯಾವಳಿ ಆಯೋಜಿಸಲಾಗಿದೆ, ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮ ನಡೆಯಲಿ ಎಂದು ಆಶಿಸಿದರು.
ಡಿವೈಎಸ್ಪಿ ನವೀನ್ ಕುಮಾರ್ ಮಾತನಾಡಿ, ಪೊಲೀಸರು ಹಾಗೂ ವಕೀಲರು ನ್ಯಾಯಾಂಗ ಇಲಾಖೆ ನಡುವೆ ಸೌಹಾರ್ದತೆ ಹಾಗೂ ಸ್ನೇಹ ಪರತೆ ಮೂಡಿಸುವ ಉದ್ದೇಶದಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ನ್ಯಾಯಾಧೀಶರು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು, ವಕೀಲರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ, ಕ್ರಿಕೆಟ್ ಎನ್ನುವುದು ಎಲ್ಲರಿಗೂ ಇಷ್ಟವಾಗಿರುವುದರಿಂದ ಉತ್ತಮವಾಗಿ ಪಂದ್ಯ ನಡೆಯುತ್ತಿದೆ ಎಂದರು.
ನ್ಯಾಯಾಂಗ ಇಲಾಖೆ ವತಿಯಿಂದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿ.ಮಾದೇಶ್, ಹೆಚ್ಚುವರಿ ನ್ಯಾಯಾಧೀಶರಾದ ಸಚಿನ್ ಕುಮಾರ್ ಶಿವಪೂಜಿ, ಪೊಲೀಸ್ ಇಲಾಖೆಯ ಡಿವೈಎಸ್‌ಪಿ ನವೀನ್‌ಕುಮಾರ್ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್, ಸಬ್ ಇನ್ಸ್‌ಪೆಕ್ಟರ್ ಗಳಾದ ಅಶೋಕ್, ರವಿಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರಿಕೆಟ್ ಆಡುವುದರ ಮೂಲಕ ರಂಜಿಸಿದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊಲೀಸ್ ಇಲಾಖೆ ಪ್ರಥಮ ಹಾಗೂ ವಕೀಲರ ಸಂಘ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವು.




