Thursday, September 19, 2024

ಪ್ರಾಯೋಗಿಕ ಆವೃತ್ತಿ

ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ನೆಮ್ಮದಿ- ನ್ಯಾ. ಬಿ.ಜಿ ರಮಾ

ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ ರಮಾ ಸ್ಮರಿಸಿದರು.

ಮಂಡ್ಯನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ನಿರ್ವಹಣೆಗೆ ಹಲವಾರು ಇಲಾಖೆಗಳಿವೆ, ಆದರೆ ಸೇನೆ ಹಾಗೂ ಪೊಲೀಸ್ ಇಲಾಖೆ ವಿಶೇಷವಾಗಿದೆ. ಹುತಾತ್ಮರಿಗೆ ನಮನ ಸಲ್ಲಿಸುವ ಪದ್ಧತಿ ಸೇನೆ ಹಾಗೂ ಪೊಲಿಸ್ ಇಲಾಖೆಯಲ್ಲಿದೆ ಇದಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.

ಸಮಾಜದ ನಿರ್ವಹಣೆಗೆ ಎಲ್ಲಾ ರಂಗಗಳು ಮುಖ್ಯವಾಗುತ್ತದೆ. ಸಮಾಜದ ಶಾಂತಿಯುತ ನಿರ್ವಹಣೆ ಹಾಗೂ ಸುವ್ಯವಸ್ಥೆಗೆ ಎಲ್ಲರೂ ಮುಖ್ಯ, ಸಮಾಜಕ್ಕೆ ಸೇವೆ ಸಲ್ಲಿಸುವುದು ಎಲ್ಲರ ಮನೋಭಾವವಾಗಿರಬೇಕು. ಸೇವೆಯಲ್ಲಿ ಪ್ರಾಣ ತೆತ್ತವರು ಮಾತ್ರ ಹೆಚ್ಚಲ್ಲ. ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕ ಹಾಗು ಕರ್ತವ್ಯನಿಷ್ಠೆಯಿಂದ ಮಾಡಿದರು ಕೂಡ ಅಭಿನಂದನಾರ್ಹ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ದೇಶಕ್ಕಾಗಿ ಸೇವೆ ಸಲ್ಲಿಸುವುದರ ಮೂಲಕ ತಮ್ಮ ಪ್ರಾಣತೆತ್ತ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವುದು ನಮ್ಮ‌ಕರ್ತವ್ಯವಾಗಿದೆ. ಹುತಾತ್ಮರಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಗೌರವಿಸಿದರೆ ನಮ್ಮ ದೇಶ ಹಾಗೂ ಸಂವಿಧಾನದ ಗೌರವ ಹೆಚ್ಚಾಗುತ್ತದೆ. ಸಮವಸ್ತ್ರ ಧರಿಸಿ ಸಮಯದ ಇತಿಮಿತಿ ಇಲ್ಲದೇ, ಕುಟುಂಬವನ್ನು ಲೆಕ್ಕಿಸದೇ ಸಮಾಜಕ್ಕಾಗಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.

ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜೊತೆಗೆ ಸೈನಿಕ, ಕೃಷಿಕ, ಶಿಕ್ಷಕ, ಆರಕ್ಷಕ ಇವು ದೇಶದ ನಾಲ್ಕೂ ಆಧಾರ ಸ್ತಂಭಗಳೆನ್ನಬಹುದು. ಸೈನಿಕರು ಗಡಿಯಲ್ಲಿ ದೇಶಕ್ಕಾಗಿ ಹೋರಾಟ ಮಾಡಿದರೆ. ಆರಕ್ಷಕ ದೇಶದ ಒಳಗೆ ನಿಂತು ನಮಗೆ ರಕ್ಷಣೆ ಕೊಡುತ್ತಾರೆ. ಸಮಾಜವನ್ನು ಶಾಂತಿ ಸುವ್ಯವಸ್ಥಿತಯತ್ತ ಕೊಂಡೊಯ್ಯುತ್ತಾರೆ ಹಾಗಾಗಿ ಸೈನಿಕನಷ್ಟೆ ಆರಕ್ಷಕರ ಪಾತ್ರವೂ ಕೂಡ ಗೌರವ ಸೂಚಕವಾಗಿದೆ ಎಂದರು‌.

ಪೊಲೀಸರು ಸಮಾಜವನ್ನೇ ತಮ್ಮ ಕುಟುಂಬ ಎಂದು ಕೆಲಸ ನಿರ್ವಹಿಸುತ್ತಾರೆ. ಕರ್ತವ್ಯ ನಿಷ್ಠೆ ಹಾಗೂ ಸಮಯಪಾಲತೆ, ಶಿಸ್ತು, ವಿನಯತೆ, ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಾರೆ. ಪೊಲೀಸ್ ಅಧಿಕಾರಿಗಳು ನಿಮ್ಮ ವೈಯಕ್ತಿಕ ಬದುಕಿಗು ಗಮನಕೊಟ್ಟು ಆರೋಗ್ಯ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು‌.

ಇತ್ತೀಚೆಗೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತವಾದಾಗ ನಮ್ಮ ಆರಕ್ಷಕ ಸಿಬ್ಬಂದಿಗಳು ತಮ್ಮ ಜೀವವನ್ನು ಲೆಕ್ಕಿಸದೇ ಕಾರಿನ ಗಾಜನ್ನು ಹೊಡೆದು ಪ್ರಾಣ ಉಳಿಸಿದರು. ಇದು ಅವರ ಸಮಾಜದ ಕಳಕಳಿಯನ್ನು ಸೂಚಿಸಿತ್ತದೆ. ಅಪಘಾತದಲ್ಲಿ ಕಾಪಾಡಿದ ಪೊಲೀಸ್ ಅಧಿಕಾರಿಗಳನ್ನು ಜಿಲ್ಲಾಡಳಿತ ವತಿಯಿಂದ ಗೌರವಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಪೊಲೀಸ್ ಹುತಾತ್ಮರ ಇತಿಹಾಸವನ್ನು ತಿಳಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ ರಮಾ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರು ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಹುತಾತ್ಮರಾದ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು. ಹುತಾತ್ಮ ಯೋಧರಿಗೆ ಗೌರವ ಸೂಚಕವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!