Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರತಿಮಾ ಕೊಲೆ ಪ್ರಕರಣ| ಆರೋಪಿ ವಿರುದ್ಧ 600 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದ ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಕೆ.ಎಸ್.ಪ್ರತಿಮಾ ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಬೆಂಗಳೂರಿನ ದೊಡ್ಡ ಕಲ್ಲಸಂದ್ರದ ಕುವೆಂಪು ನಗರದಲ್ಲಿ ನಡೆದಿದ್ದ ಪ್ರತಿಮಾ ಅವರ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಇನ್ಸ್‌ಪೆಕ್ಟರ್‌ ಎನ್‌ ಜಗದೀಶ್‌ ಅವರು, ಆರೋಪಿ ಕಿರಣ್‌ನಿಂದ ಪಡೆದ ಹೇಳಿಕೆ, 70 ಸಾಕ್ಷಿಗಳ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ, ಡಿಜಿಟಲ್‌ ಸಾಕ್ಷ್ಯಾಧಾರ, ಸಾಂದರ್ಭಿಕ ಸಾಕ್ಷ್ಯ ಸೇರಿ ಸುಮಾರು 600 ಪುಟಗಳ ದೋಷಾರೋಪ ಪಟ್ಟಿಯನ್ನು ನಗರದ 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ದೊಡ್ಡಕಲ್ಲಸಂದ್ರದ ಕುವೆಂಪು ನಗರದ ಪ್ರತಿಮಾ ಅವರ ನಿವಾಸಕ್ಕೆ ನ.4ರಂದು ರಾತ್ರಿ ನುಗ್ಗಿದ್ದ ಆರೋಪಿ, ಕೊಲೆ ಮಾಡಿ ಪರಾರಿಯಾಗಿದ್ದ. ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

ಕಿರಣ್‌ ಅಪರಾಧದ ಹಿನ್ನೆಲೆಯನ್ನು ಹೊಂದಿದ್ದ ಕಾರಣಕ್ಕೆ ಪ್ರತಿಮಾ ಅವರು ಕಿರಣ್‌ನನ್ನು ಕೆಲಸದಿಂದ ವಜಾಗೊಳಿಸಿದ್ದರು. ಪುನಃ ಕೆಲಸ ಕೊಡಿಸುವಂತೆ ಕಿರಣ್‌ ಕೇಳಿಕೊಂಡಿದ್ದ, ಆದರೆ ಪ್ರತಿಮಾ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಇದೇ ವೈಷಮ್ಯದಿಂದ ನ.4ರಂದು ಪ್ರತಿಮಾ ಮನೆಗೆ ತೆರಳಿದ್ದ ಆರೋಪಿ ಮಹಡಿಯಲ್ಲಿ ಅವಿತು ಕುಳಿತಿದ್ದ. ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಪ್ರತಿಮಾ ಅವರನ್ನು ಹಿಂಬಾಲಿಸಿದ್ದ ಆರೋಪಿ, ಅವರ ಬಾಯಿ ಮುಚ್ಚಿ ವೇಲ್‌ನಿಂದ ಕುತ್ತಿಗೆಯನ್ನು ಬಿಗಿದು ನಂತರ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಪ್ರತಿಮಾ ಕೈಯ್ಯಲ್ಲಿದ್ದ ಚಿನ್ನದ ಬಳೆ, ಚಿನ್ನದ ಸರ, ಕಬೋರ್ಡ್‌ನಲ್ಲಿದ್ದ 5 ಲಕ್ಷ ನಗದು ದೋಚಿ ಪರಾರಿಯಾಗಿದ್ದ.

ಆರೋಪಿ ಕೃತ್ಯ ನಡೆಸಲು 8 ನಿಮಿಷ ತೆಗೆದುಕೊಂಡಿದ್ದ. ಅದಾದ ಮೇಲೆ ಇಬ್ಬರು ಸ್ನೇಹಿತರ ಜೊತೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ. ಅಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಕಿರಣ್‌ ಕೃತ್ಯ ಎಸಗಿರುವುದಕ್ಕೆ ಪೂರಕ ಸಾಕ್ಷ್ಯಾಧಾರಗಳನ್ನು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಿ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!