Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಹಾರ| ಹೊಟ್ಟೆಯಲ್ಲಿರುವುದು ಹೆಣ್ಣು ಮಗುವೆಂದು 4 ತಿಂಗಳ ಗರ್ಭಿಣಿಗೆ ಬೆಂಕಿ ಹಚ್ಚಿ ಕೊಂದ ಪತಿ !

ಹೊಟ್ಟೆಯಲ್ಲಿರುವುದು ಹೆಣ್ಣು ಮಗು ಎಂದು ತಿಳಿದು ಕೋಪಗೊಂಡ ಪತಿ ಬೆಂಕಿ ಹಚ್ಚಿದ ಹಿನ್ನಲೆ ಗರ್ಭಿಣಿ ಮೃತಪಟ್ಟ ಆಘಾತಕಾರಿ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ.

ರಾಧಾ ದೇವಿ(27) ಮೃತ ಮಹಿಳೆ. ಪತಿ ಬೆಂಕಿ ಹಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಈಕೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ, ಮೃತ ರಾಧಾ ದೇವಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಆಕೆಯ ಹೊಟ್ಟೆಯಲ್ಲಿರುವುದು ಹೆಣ್ಣು ಮಗು ಎಂದು ತಿಳಿದ ಪತಿ ರಂಜಿತ್ ಶಾ ಬೆಂಕಿ ಹಚ್ಚಿದ್ದಾರೆ. ಭ್ರೂಣದ ಲಿಂಗ ಪತ್ತೆಗಾಗಿ ಜಮುಯಿಯ ಖಾಸಗಿ ಕ್ಲಿನಿಕ್ ಒಂದರಲ್ಲಿ ರಂಜಿತ್ ಶಾ ಕಾನೂನು ಬಾಹಿರವಾಗಿ ಪತ್ನಿಗೆ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಿದ್ದ.

ಆರೋಪಿ ತನ್ನ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಮಹಿಳೆಯನ್ನು ಆರಂಭದಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬರ್ಹತ್ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಎಕೆ ಆಜಾದ್, “ಸುದಾಮಪುರ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ ಎಂದು ನಮಗೆ ಮಾಹಿತಿ ದೊರೆತಿತ್ತು. ನಾವು ಸ್ಥಳಕ್ಕೆ ಧಾವಿಸಿ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದಿದೆವು. ಅಪರಾಧ ನಡೆದ ಸ್ಥಳದಲ್ಲಿ ಸೀಮೆ ಎಣ್ಣೆಯ ಬಾಟಲಿ ಮತ್ತು ಬೆಂಕಿಕಡ್ಡಿ ಪತ್ತೆಯಾಗಿದೆ. ಆರೋಪಿ ಹಾಗೂ ಆತನ ಇಡೀ ಕುಟುಂಬ ಪರಾರಿಯಾಗಿದ್ದಾರೆ. ಅವರನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ” ಎಂದಿದ್ದಾರೆ.

ಪತಿ ಭ್ರೂಣ ಲಿಂಗ ಪತ್ತೆಗಾಗಿ ಅಲ್ಟ್ರಾಸೌಂಡ್ ಟೆಸ್ಟ್ ಮಾಡಿಸಿದ್ದಾನೆ. ಗಂಡು ಮಗುವಿಗಾಗಿ ಆತ ವಿಚ್ಚೇದನ ನೀಡಲು ಮುಂದಾಗಿದ್ದಾರೆ ಎಂದು ಮೃತ ಮಹಿಳೆ ಆಕೆಯ ಪೋಷಕರಿಗೆ ತಿಳಿಸಿದ್ದರು ಎಂದು ವರದಿಗಳು ಹೇಳಿವೆ.

ಮೃತಳ ಸೋದರ ಮಾವ ಕೇದಾರ್ ಶಾ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ಆರೋಪಿ ರಂಜಿತ್‌ಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿರುವುದರಿಂದ ಗಂಡು ಮಗು ಬೇಕಿತ್ತು. ಆತ ತನ್ನ ಹೆಂಡತಿಯನ್ನು ಖಾಸಗಿ ಕ್ಲಿನಿಕ್‌ಗೆ ಕರೆದೊಯ್ದು ಭ್ರೂಣ ಲಿಂಗ ಪತ್ತೆ ಮಾಡಿಸಿದ್ದ. ಹೆಣ್ಣು ಮಗು ಎಂದು ತಿಳಿದು ಕೋಪಗೊಂಡಿದ್ದ” ಎಂದು ಹೇಳಿದ್ದಾರೆ.

ಕಳೆದ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದ ಸಹರಾನ್‌ಪುರದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಎಂಟು ತಿಂಗಳ ಗರ್ಭಿಣಿ ಮಹಿಳೆಯನ್ನು ಕೊಂದ ಆಕೆಯ ಪತಿ ಶವವನ್ನು ಹೂತು ಹಾಕಿದ್ದ. ಇಂಡಿಯಾ ಟುಡೇ ವರದಿ ಮಾಡಿರುವಂತೆ ಯುಪಿ ಪೊಲೀಸರು ಕೊಲೆ ಆರೋಪದ ಮೇಲೆ ಪತಿಯನ್ನು ಬಂಧಿಸಿದ್ದಾರೆ.

ಪ್ರಸವ ಪೂರ್ವ ಭ್ರೂಣ ಪತ್ತೆ ಮತ್ತು ಹತ್ಯೆ ಅಪರಾಧ 

ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಅಧಿನಿಯಮ 1994ರ ಪ್ರಕಾರ ಭಾರತದಲ್ಲಿ ಭ್ರೂಣ ಪತ್ತೆ ಮತ್ತು ಹತ್ಯೆ ನಿಷೇಧವಿದೆ. ಯಾವುದೇ ವ್ಯಕ್ತಿ ವೈಜ್ಞಾನಿಕ ತಂತ್ರಜ್ಞಾನಗಳನ್ನು ಭ್ರೂಣದ ಲಿಂಗ ಪತ್ತೆಗಾಗಿ ಬಳಸಿದರೆ, ಬಳಸಲು ಕಾರಣನಾದರೆ, ಸಹಾಯ ಮಾಡಿದರೆ, ಲಿಂಗಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಗರ್ಭಿಣಿ ಮಹಿಳೆಯ ಮೇಲೆ ಒತ್ತಡ ಹೇರಿದರೆ ಅದು ಅಪರಾಧವಾಗುತ್ತದೆ. ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಪ್ರತಿಯೊಂದು ಕೇಂದ್ರದ ನೋಂದಣಿ ಈ ಅಧಿನಿಯಮದ ಅಡಿ ಕಡ್ಡಾಯವಾಗಿದೆ.

ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡಿದ ವ್ಯಕ್ತಿ ಶಿಕ್ಷಾರ್ಹ. ಮೊದಲ ಅಪರಾಧಕ್ಕೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ನಂತರದ ಅಪರಾಧಕ್ಕೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಲಾಗತ್ತದೆ. ಇಂತಹ ಕೃತ್ಯಕ್ಕೆ ಸಹಾಯ ಮಾಡುವ ವ್ಯಕ್ತಿಯೂ ಶಿಕ್ಷಾರ್ಹ. ಸಹಾಯ ಮಾಡುವವರಿಗೆ ಮೊದಲ ಅಪರಾಧಕ್ಕೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ನಂತರದ ಅಪರಾಧಕ್ಕೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!