Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ವಿವಾದ| ಸರ್ವಪಕ್ಷ ನಿಯೋಗದ ಭೇಟಿಗೆ ಸಮಯಾವಕಾಶ ನೀಡದ ಪ್ರಧಾನಿ- ಚಲುವರಾಯಸ್ವಾಮಿ

ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಬಳಿಗೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ರಾಜ್ಯ ಸರ್ಕಾರ ಸಿದ್ದವಿದ್ದರೂ, ರಾಜ್ಯದ ಸರ್ವಪಕ್ಷ ನಿಯೋಗದ ಭೇಟಿಗೆ ಪ್ರಧಾನಿ ಮೋದಿ ಅವಕಾಶ ನೀಡುತ್ತಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ದೂರಿದರು.

ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತರ ಹಿತರಕ್ಷಣ ಸಮಿತಿ ವತಿಯಿಂದ  ನಡೆಯುತ್ತಿರುವ ನಿರಂತರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಳೆದ 10 ದಿನಗಳಿಂದ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ತೆರಳಲು ಅವಕಾಶ ಕೇಳುತ್ತಿದ್ದೇವೆ, ಆದರೆ ಇದುವರೆಗೆ ಪ್ರಧಾನಿ ಮೋದಿಯವರು ಅವಕಾಶ ನೀಡಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳ ಮೂಲಕ ಹಲವಾರು ಬಾರಿ ಸಮಯಾವಕಾಶ ಕೇಳಿ ಮನವಿ ಸಲ್ಲಿಸಿದರೂ ಪ್ರಧಾನಿಯವರು ಸ್ಪಂದಿಸುತ್ತಿಲ್ಲ ದೂರಿದರು.

ತಮಿಳುನಾಡು ಪ್ರತಿನಿತ್ಯ 25,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಪ್ರಾಧಿಕಾರ ಮತ್ತು ನ್ಯಾಯಾಲಯದ ಮೊರೆ ಹೋಗಿದ್ದು, ಕರ್ನಾಟಕ ಸರ್ಕಾರ ಇಲ್ಲಿನ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಬಂದಿದೆ, ಹಾಗಾಗಿ ನೀರು ಬಿಡುವ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ, ಸರ್ವೋಚ್ಚ ನ್ಯಾಯಾಲಯದಲ್ಲಿ ನಾಳೆ ವಿಚಾರಣೆ ನಡೆಯಲಿದೆ, ಅಲ್ಲಿ ಸರ್ಕಾರ ಸಮರ್ಥ ವಾದ ಮಂಡನೆಗೆ ಮುಂದಾಗಿದೆ, ನಾಳಿನ ವಿಚಾರಣೆಯ ನಂತರ ಸರ್ಕಾರ ಮುಂದೆ ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಿದೆ ಎಂದರು.

ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ

ರಾಜ್ಯದ 28 ಸಂಸದರು, ರಾಜ್ಯಸಭಾ ಸದಸ್ಯರು ಕಾವೇರಿ ವಿಚಾರದಲ್ಲಿ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ, ಸರ್ವಪಕ್ಷ ನಿಯೋಗ ಪ್ರಧಾನಿಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಡಬೇಕಾಗಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಪರ್ಕ ಕೊಂಡಿಯಾಗಿ ಸಂಸದರು ಕಾರ್ಯನಿರ್ವಹಿಸಬೇಕು. ಕಾವೇರಿ ಸಮಸ್ಯೆ ವಿಚಾರದಲ್ಲಿ ಸಂಸದರಿಗೆ ಪತ್ರ ಬರೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ಅವರು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ ಎಂದರು.

ರೈತರು ಮಂಡ್ಯದಲ್ಲಿ ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ. ಹಿಂದೆ ಇಂತಹ ಹೋರಾಟದಲ್ಲಿ ನಾನೂ ಭಾಗವಹಿಸಿದ ಅನುಭವವಿದೆ, ಇದೀಗ ಮಂತ್ರಿಯಾಗಿದ್ದೇನೆ ಅಷ್ಟೇ. ರಾಜ್ಯವನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಸಮಸ್ಯೆಯನ್ನು ಎದುರಿಸಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನಿಗೆ ಸ್ಪಂದಿಸಬೇಕಾಗಿದೆ.ಸರ್ಕಾರ ರೈತರ ಹಿತ ಕಾಪಡಲು ಬದ್ಧವಾಗಿದೆ ಎಂದರು.

ಕೆ ಆರ್ ಎಸ್ ಜಲಾಶಯದಿಂದ ಕಟ್ಟು ಪದ್ಧತಿಯಲ್ಲಿ ನಾಳೆಯಿಂದ ನಾಲೆಗಳಿಗೆ ಎರಡನೇ ಕಂತಿನ ನೀರು ಹರಿಸಲಾಗುವುದು, ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಸಹ ಒಗ್ಗೂಡಿ ರೈತರ ರಕ್ಷಣೆಗೆ ಮುಂದಾಗಬೇಕಾಗಿದೆ, ಹೋರಾಟದ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ಗಮನ ಸೆಳೆಯುತ್ತಿದ್ದು.ನಾಡಿನ ರೈತರಿಗೆ ಒಳಿತಾಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ ಸೇರಿದಂತೆ ಮತ್ತಿತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!