Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರೊ.ಎಚ್ಚೆಲ್ಕೆ ಅವರದು ಬೆರಗುಗೊಳಿಸುವ ವೈಚಾರಿಕ ವ್ಯಕ್ತಿತ್ವ- ಡಾ.ಲೀಲಾ ಅಪ್ಪಾಜಿ

ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರನ್ನು ನಾನು ಬೆರಗುಗಣ್ಣಿನಿಂದ ನೋಡಿದ್ದೇನೆ, ಅವರು ಕೇವಲ ವಿದ್ಯಾಸಂಸ್ಥೆಯಲ್ಲಿ ಗುರುವಾಗಿರಲಿಲ್ಲ, ಬದಲಾಗಿ ಸಮಾಜಕ್ಕೆ ಗುರುವಾಗಿ ಅಕ್ಷರಾಂದೋಲನ ಹಾಗೂ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡು, ಆ ಮೂಲಕ ಸಮಾಜವನ್ನು ತಿದ್ದುವ ಕೆಲಸ ಕೈಗೊಂಡಿದ್ದರು ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ಲೀಲಾ ಅಪ್ಪಾಜಿ ಬಣ್ಣಿಸಿದರು.

ಮಂಡ್ಯನಗರದ ಗಾಂಧಿಭವನದಲ್ಲಿ ಪ್ರೊ.ಹೆಚ್‌.ಎಲ್‌ ಕೇಶವಮೂರ್ತಿ ಪ್ರತಿಷ್ಠಾನದ ವತಿಯಿಂದ ನಡೆದ ಪ್ರೊ. ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೀಬೀ ಪಾತೀಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಎಚ್ಚಲ್ಕೆ ಅವರು ಪ್ರಾಧ್ಯಾಪಕರಾಗಿ ಶಿಕ್ಷಣದ ಮಹತ್ವ ಜೊತೆಗೆ ಅರಿವು ಹಂಚಿದವರು, ಅದೇ ರೀತಿ ಸಮಾಜದಲ್ಲಿ ಮೌಲ್ಯದ ಮಹತ್ವ ಸಾರಿದರು, ಸಮಾಜದಲ್ಲಿ  ವೈಚಾರಿಕ ಚಿಂತನೆ ಬಿತ್ತುವ ಕೆಲಸ ಮಾಡಿದವರು. ವೈಚಾರಿಕ ವಿಚಾರಗಳನ್ನು ಜನಸಾಮಾನ್ಯರಲ್ಲಿ ಬಿತ್ತಿದ್ದಲ್ಲದೆ ವಿಡಂಬನೆ ಬರಹದ ಮೂಲಕ ಸಮಾಜ ಎಚ್ಚರಿಸುವ ಕೆಲಸ ಮಾಡಿದರು ಎಂದರು.

ಉತ್ತಮ ವಿಚಾರ ಗಳಿಗೆ ಅಕ್ಷರರೂಪ ಕೊಟ್ಟು ಸಮಾಜದ ಒಳಿತು ಬಯಸಿದ್ದ ಅವರ ಲೇಖನಗಳನ್ನು ಓದುವಾಗ ನಕ್ಕು ಸುಮ್ಮನಾಗಿ ಬಿಟ್ಟರೆ ಅರ್ಥವಾಗುತ್ತಿರಲಿಲ್ಲ, ಬದಲಾಗಿ ಅವರ ವಿಷಯದ ಬಗ್ಗೆ ಆಲೋಚನೆ ಮಾಡಿದರೆ ಅವರು ಏನು ಹೇಳಿದ್ದಾರೆ ಎಂಬುದು ತಿಳಿಯುತಿತ್ತು ಎಂದರು.

ವೈಚಾರಿಕ ಪ್ರಶಸ್ತಿಯನ್ನು ಸಿರಿಧಾನ್ಯ ಕೃಷಿಕರಿಗೆ ನೀಡಿರುವುದು ಹೆಚ್ಚಿನ ಮಹತ್ವ ತಂದಿದೆ, ಪ್ರಶಸ್ತಿಯಿಂದ ಕುಂದಗೋಳದ ಬೀಬೀ ಪಾತಿಮಾ ಮಹಿಳಾ ಸ್ವಸಹಾಯ ಸಂಘಕ್ಕೆ ಜವಾಬ್ದಾರಿ ಹೆಚ್ಚಾಗಿದೆ, ಸಿರಿಧಾನ್ಯ ಸೇವನೆಯಿಂದ ಆರೋಗ್ಯಕರ ಜೀವನ ಸಾಧ್ಯ ಎಂಬ ಅರಿವು ಜನಸಾಮಾನ್ಯರಲ್ಲಿ ಮೂಡಿದೆ, ಮಂಡ್ಯ ಜಿಲ್ಲೆಯಲ್ಲಿರುವ ಸಿರಿಧಾನ್ಯ ಬೆಳೆಯಲು ಮುಂದಾಗಬೇಕು, ಕಾವೇರಿ ನದಿ ನೀರಿನ ವಿಚಾರದಲ್ಲಿ ಸಂಕಷ್ಟದಲ್ಲಿರುವ ಜಿಲ್ಲೆಯ ಜನತೆ ನೀರನ್ನು ಮಿತವಾಗಿ ಬಳಸಿ ಕೃಷಿ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಶಸ್ತಿ ಪುರಸ್ಕೃತರಾದ ಬೀಬಿ ಪಾತೀಮಾ ಮಾತನಾಡಿ, ಸಿರಿಧಾನ್ಯ ಉತ್ಪಾದನೆಯಿಂದ ನಮ್ಮ ಬದುಕಿನಲ್ಲಿ ಬದಲಾವಣೆಯಾಗಿದೆ, ಹಂತ ಹಂತವಾಗಿ ಮುನ್ನಡೆ ಕಂಡಿದ್ದು, ಹಲವರಿಗೆ ಉದ್ಯೋಗ ದೊರಕಿದೆ, ಮತ್ತಷ್ಟು ಜನರಿಗೆ ಕೆಲಸ ನೀಡಬೇಕೆಂಬ ಆಸೆ ಇದೆ, ಸಿರಿಧಾನ್ಯ ಉತ್ಪಾದಿಸಿ, ಸಂಸ್ಕರಿಸಿ ಮಾರಾಟ ಮಾಡುವುದರ ಜೊತೆಗೆ ಸಿರಿಧಾನ್ಯದ ಆಹಾರ ತಯಾರಿಸಿ ಜನರಿಗೆ ಮಾರಾಟ ಮಾಡುತ್ತಿದ್ದೇವೆ, ಜನತೆ ಒಳ್ಳೆಯ ಊಟ ಮಾಡಲಿ ಎಂಬ ಆಶಯ ನಮ್ಮದಾಗಿದೆ ಎಂದರು.

ಮೈಸೂರಿನ ಸಹಜ ಸಮೃದ್ಧ ನಿರ್ದೇಶಕ ಕೃಷ್ಣಪ್ರಸಾದ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿ ಸಿರಿಧಾನ್ಯದ ಬಗ್ಗೆ ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾನಿಲಯ ಮಹತ್ವ ನೀಡಿಲ್ಲ, ಹೆಚ್ಚಿನ ಪ್ರೋತ್ಸಾಹ ಸಿರಿಧಾನ್ಯಕ್ಕೆ ಸಿಗಬೇಕಾಗಿದೆ, ಹಲವು ಕಡೆ ಪಾಲಿಸ್ ಮಾಡಿದ ಸಿರಿಧಾನ್ಯ ಮಾರಾಟ ಮಾಡಲಾಗುತ್ತಿದೆ, ಇದರಿಂದ ಯಾವುದೇ ಪ್ರಯೋಜನ ಇಲ್ಲ, ಪಾಲಿಶ್ ಮಾಡದ ಸಿರಿಧಾನ್ಯ ಬಳಕೆ ಉತ್ತಮ ಎಂದು ಹೇಳಿದರು.

ಪತ್ರಿಷ್ಟಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಮಾತನಾಡಿ, ಬೀಬೀ ಪಾತೀಮಾ ಮಾಡಿರುವ ಸಾಧನೆ ಮಂಡ್ಯ ಜಿಲ್ಲೆಯ ರೈತರಿಗೆ ಪರಿಹಾರವಾಗಬಲ್ಲದು, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿರುವ ಇಂತಹ ಮಹಿಳಾ ಸಂಘಗಳು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದಿದ್ದರೆ ದೊಡ್ಡಮಟ್ಟದಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂದರು.

ಮುಂದಿನ ತಲೆಮಾರಿಗೆ ಪ್ರೊ.ಎಚ್ಚೆಲ್ಕೆ ಅವರ ವಿಚಾರಗಳನ್ನು ಕೊಂಡೊಯ್ಯುವ ಉದ್ಧೇಶದಿಂದ ಎಚ್ಚೆಲ್ಕೆ ಅವರ ಹೆಸರಿನಲ್ಲಿ ದತ್ತಿನಿಧಿಯೊಂದನ್ನು ಸ್ಥಾಪಿಸಲು ಉದ್ಧೇಶಿಸಲಾಗಿದೆ. ಇದಕ್ಕೆ ಅವರ ಕುಟುಂಬದವರು, ಒಡನಾಡಿಗಳು, ಶಿಷ್ಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಳೆದ 6  ವರ್ಷಗಳಿಂದ ಪ್ರೊ.ಎಚ್ಚೆಲ್ಕೆ ಅವರ ವೈಚಾರಿಕತೆಗೆ ಕುಂದುಂಟಾಗದಂತೆ ಅವರ ಒಡನಾಟದಲ್ಲಿದವರ ಆರ್ಥಿಕ ಸಹಾಯದಿಂದಲೇ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಂಡು ಬಂದಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನಷ್ಟು ವೈಚಾರಿಕ ವಿಚಾರಗಳನ್ನು ಪಸರಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸುವ ಇರಾದೆ ಇದೆ, ಇದಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.

ಪ್ರತಿಷ್ಠಾನದ ಸದಸ್ಯ ಕೆ.ಬೋರಯ್ಯ ಕಾರ್ಯಕ್ರಮದ ಖರ್ಚು ವೆಚ್ಚದ ಪಟ್ಟಿಯನ್ನು ಸಭೀಕರ ಮುಂದಿಟ್ಟರು. ಕವಿ ರಾಜೇಂದ್ರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಗಾಯಕ ಹುರುಗಲವಾಡಿ ರಾಮಯ್ಯ ಮತ್ತು ತಂಡ ಗಾಯನ ನಡೆಸಿಕೊಟ್ಟಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!