Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಾಧಿಕಾರಕ್ಕೆ ಸಂಕಷ್ಟಸೂತ್ರ ಮನವರಿಕೆ ಮಾಡಿಕೊಡಲಿ- ಪ್ರೊ.ಕೆ.ಸಿ ಬಸವರಾಜ್

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ ಸಂಕಷ್ಟ ಸೂತ್ರ ರೂಪಿಸಲಾಗಿದೆ, ಆದರೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ಈಗಲಾದರೂ  ಸಂಕಷ್ಟದ ಸೂತ್ರ ಅಂಶವನ್ನು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಿ ಎಂದು ಕಾವೇರಿ ಕುಟುಂಬದ ಪ್ರೊ.ಕೆ.ಸಿ ಬಸವರಾಜ್ ಒತ್ತಾಯಿಸಿದರು.

ಮಂಡ್ಯದಲ್ಲಿ ಕಳೆದ 48 ದಿನಗಳಿಂದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ಯದಲ್ಲಿ ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ತಮಿಳುನಾಡಿಗೆ ಪ್ರತಿವರ್ಷ 172.25 ಟಿಎಂಸಿ ನೀರು ಹರಿಸಬೇಕು, ಈ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ಸಂಕಷ್ಟ ಕಾಲದಲ್ಲಿನ ನೀರಿನ ಕುಂಠಿತ ಪ್ರಮಾಣ ಕಳೆಯಬೇಕಾಗಿತ್ತು, ಆದರೆ ಸರ್ಕಾರ ಹೆಚ್ಚಿನ ಪ್ರಮಾಣದ ನೀರನ್ನ ಹರಿಸುತ್ತಿದೆ, ಇದರಿಂದ ರಾಜ್ಯದಲ್ಲಿ ಸಂಕಷ್ಟ ಹೆಚ್ಚಿದೆ ಎಂದರು.

ಕಾವೇರಿ ನ್ಯಾಯಾಧಿಕರಣದ ತೀರ್ಪಿನ 27ನೇ ಅಧ್ಯಾಯದಲ್ಲಿ ಸಂಕಷ್ಟ ಸೂತ್ರದ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಅದೇ ರೀತಿ 28ನೇ ಅಧ್ಯಾಯದಲ್ಲಿ ಸಂಕಷ್ಟ ಸಂದರ್ಭದಲ್ಲಿ ನೀರು ಹಂಚಿಕೆಯ ಪರಿಹಾರದ ಬಗ್ಗೆಯೂ ಸಹ ತಿಳಿಸಿದೆ. ಕಾವೇರಿ ಕೊಳ್ಳದ ಪ್ರದೇಶದಲ್ಲಿ ಪ್ರಸ್ತುತ ಮಳೆ ಕೊರತೆಯಿಂದ ಶೇ.55 ರಷ್ಟು ನೀರು ಕೊರತೆ ಇದೆ ಎಂದು ಅಂಕಿ ಅಂಶ ತಿಳಿಸಿದ್ದು, ಕೇರಳ ರಾಜ್ಯ ಹೊರತುಪಡಿಸಿ ಕರ್ನಾಟಕ, ತಮಿಳುನಾಡು, ಪುದುಚೇರಿ ರಾಜ್ಯವು ನೀರಿನ ಕುಂಠಿತ ಪ್ರಮಾಣವನ್ನು ಹಂಚಿಕೊಳ್ಳಬೇಕು, ಹಾಗೆ ನೋಡಿದರೆ ತಮಿಳುನಾಡಿಗೆ ಶೇ.27.50 ಕಡಿಮೆ ನೀರು ಹರಿಸಬೇಕು, ಆದರೆ ಸರ್ಕಾರ ಇದರ ಅರಿವು ಇಲ್ಲದಂತೆ ನಿರಂತರ ನೀರು ಹರಿಸುತ್ತಿದೆ ಎಂದು ದೂರಿದರು.

ಶಿವಳ್ಳಿ-ನಗರಕೆರೆ ಗ್ರಾ.ಪಂ. ವ್ಯಾಪ್ತಿಯ ರೈತರ ಬೆಂಬಲ

ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಇಂದಿನ ಹೋರಾಟದಲ್ಲಿ ಶಿವಳ್ಳಿ ಹಾಗೂ ನಗರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಶಿವಳ್ಳಿ, ಗುನ್ನನಾಯಕನಹಳ್ಳಿ, ಗೊರವಾಲೆ, ಮರಡಿಪುರ ಗ್ರಾಮದ ರೈತರು ಭಾಗಿಯಾದರು. ಶಿವಲಿಂಗಯ್ಯ,ನಾಗರಾಜ್.ನಾಗಣ್ಣ, ಶಿವಲಿಂಗಪ್ಪ, ಜಯರಾಮು ನೇತೃತ್ವ ವಹಿಸಿದ್ದರು. ಮದ್ದೂರು ತಾಲೂಕು ನಗರಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಿಗೆರೆಪುರ, ಉಪ್ಪಾರ ದೊಡ್ಡಿ, ಸೋಂಪುರ, ವೈದ್ಯನಾಥಪುರ, ಮಾಲಗಾರನಹಳ್ಳಿ ರೈತರು ನಿರಂತರ ಧರಣಿ ಬೆಂಬಲಿಸಿದರು. ಮುಖಂಡರಾದ ದೇವೇಗೌಡ, ಚೆನ್ನೇಗೌಡ, ಸುರೇಶ್, ಪ್ರಸನ್ನ, ಪುಟ್ಟಯ್ಯ, ಅಭಿ, ಸೋಮು, ಕಿರಣ್ ಕುಮಾರ್ ಭಾಗವಹಿಸಿದ್ದರು.

ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸುನಂದ ಜಯರಾಂ.ಕೆ ಬೋರಯ್ಯ, ಬೇಕರಿ ರಮೇಶ್, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕೃಷ್ಣಪ್ರಕಾಶ್, ಕನ್ನಡಸೇನೆ ಮಂಜುನಾಥ್, ಮಹಾಂತಪ್ಪ,ಕೆ.ಸಿ.ಸುಧೀರ್ ಕುಮಾರ್, ಫಯಾಜ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!