ಸ್ವರ್ಣ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆ ವತಿಯಿಂದ ಮಾಜಿ ಸಚಿವ ಎಸ್.ಡಿ. ಜಯರಾಂ ಸ್ಮಾರಕ ಮಂಡ್ಯ ಜಿಲ್ಲಾ ಪ್ರೊ ಲೀಗ್ ಹೊನಲು-ಬೆಳಕಿನ ಫುಟ್‌ಬಾಲ್ ಪಂದ್ಯಾವಳಿಯನ್ನು ಜುಲೈ1ರಿಂದ 3 ರವರೆಗೆ ಮಂಡ್ಯ ನಗರದ ಗುತ್ತಲುವಿನ ದಾಸೇಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ವರಪ್ರಸಾದ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಂದ್ಯಾವಳಿಯು ಐಪಿಎಲ್ ಮಾದರಿಯಲ್ಲಿ ನಡೆಯಲಿದ್ದು, ಟಿಎಲ್‌ಪಿ ವಾರಿಯರ‍್ಸ್, ಮಾಂಡವ್ಯ ಎಫ್‌ಸಿ, ಮುನ್ನ ಎಫ್‌ಸಿ, ಪವರ್ ಸ್ಟಾರ್ ಎಫ್‌ಸಿ, ಎಂಎಚ್ 7ಎಸ್, ಸ್ಟ್ರೈಕರ್ ಎಫ್‌ಸಿ, ಫಿನಿಕ್ಸ್ ಎಫ್‌ಸಿ, ಲಕ್ಷ್ಯ ಎಫ್‌ಸಿ ಎಂಬ ಎಂಟು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದರು.
ಜು.1 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಶ್ರೀನಿವಾಸ್, ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕ ಎಚ್.ಹೊನ್ನಪ್ಪ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ, ಯುವ ನಾಯಕ ಅಶೋಕ್ ಜಯರಾಂ, ಕಾಂಗ್ರೆಸ್ ಮುಖಂಡ ರವಿಕುಮಾರ್ ಗಣಿಗ, ಸಮಾಜ ಸೇವಕ ಕೆ.ಕೆ.ರಾಧಾಕೃಷ್ಣ ಭಾಗವಹಿಸಲಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭವು ಜು.1ರಂದು ಮಧ್ಯಾಹ್ನ 2.30ರಿಂದ ಆರಂಭಗೊಂಡು, ರಾತ್ರಿ 9ಕ್ಕೆ ಮುಕ್ತಾಯವಾಗಲಿದೆ. ಎರಡನೇ ದಿನದ ಪಂದ್ಯಾವಳಿಗಳು ಸಂಜೆ 5 ರಿಂದ ರಾತ್ರಿ 9 ಗಂಟೆಗೆ ಮುಕ್ತಾಯವಾಗಲಿದೆ. ಸಮಾರೋಪ ಸಮಾರಂಭವು ಜು.3ರ ಭಾನುವಾರ ಸಂಜೆ 6 ಗಂಟೆಗೆ ಆರಂಭಗೊಂಡು ರಾತ್ರಿ 9 ಗಂಟೆಗೆ ಮಕ್ತಾಯವಾಗಲಿದ್ದು,ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹ ನೀಡಬೇಕೆಂದು ಕೋರಿದರು.
ಎಸ್.ಡಿ.ಜಯರಾಮ್ ಪ್ರೊಲೀಗ್
ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್ ಮಾತನಾಡಿ, ನಮ್ಮ ತಂದೆ ಎಸ್.ಡಿ. ಜಯರಾಮ್ ಹೆಸರಿನಲ್ಲಿ ಸ್ವರ್ಣ ಫುಟ್ಬಾಲ್ ಸಂಸ್ಥೆ ಪಂದ್ಯಾವಳಿ ಆಯೋಜಿಸಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ದೊಡ್ಡ ಮಟ್ಟದಲ್ಲಿ ಫುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು, ಐಪಿಎಲ್ ಮಾದರಿಯಲ್ಲಿ ವೃತ್ತಿಪರ ಆಟಗಾರರನ್ನು ಆಯ್ಕೆ ಮಾಡಿ ಎಂಟು ತಂಡಗಳನ್ನಾಗಿ ಮಾಡಲಾಗುವುದು.ಎಲ್ಲಾ ತಂಡದಲ್ಲಿ ಅನುಭವಿ ಆಟಗಾರರಿದ್ದು ಪಂದ್ಯಾವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಅಭಿಮಾನಿಗಳು ಆಗಮಿಸಿ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಎಂ.ವಿ. ವೇಣುಗೋಪಾಲ್ ಮಾತನಾಡಿ ಮೊದಲನೇ ಬಹುಮಾನವಾಗಿ 30,000 ರೂ. ಮತ್ತು ಪಾರಿತೋಷಕ, ಎರಡನೇ ಬಹುಮಾನವಾಗಿ 20,000 ರೂ.ಮತ್ತು ಪಾರಿತೋಷಕ ಹಾಗೂ ಮೂರನೇ ಬಹುಮಾನಾಗಿ 10,000 ರೂ. ಮತ್ತು ಪಾರಿತೋಷಕ ನೀಡಲಾಗುವುದು ಎಂದರು.
ಗೋಷ್ಠಿಯಲ್ಲಿ ಸ್ವರ್ಣ ಫುಟ್ಬಾಲ್ ಸಂಸ್ಥೆಯ ಬಿ.ವೆಂಕಟ್,ಸುನಿಲ್ ಹಾಜರಿದ್ದರು.