Friday, September 20, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕಕ್ಕೆ ಅನ್ಯಾಯ| ಫೆ. 7ರಂದು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ: ಡಿ.ಕೆ ಶಿವಕುಮಾರ್

‘ಕೇಂದ್ರ ಬಜೆಟ್ನಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಕೇಂದ್ರದ ಮಲತಾಯಿ ಧೋರಣೆಯಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ ₹62 ಸಾವಿರ ಕೋಟಿ ಹಣ ನಷ್ಟವಾಗಿದೆ. ಹೀಗಾಗಿ, ಕೇಂದ್ರ ಸರ್ಕಾರದ ವಿರುದ್ಧ ಫೆ. 7 ರಂದು ಕರ್ನಾಟಕ ಸರ್ಕಾರವು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್, ‘ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾನು ಸೇರಿದಂತೆ ರಾಜ್ಯದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸುತ್ತೇವೆ’ ಎಂದರು.

‘ಪ್ರತಿಭಟನೆಗೆ ಸ್ಥಳಾವಕಾಶ ನೀಡುವಂತೆ ಕೆಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ಸಿಕ್ಕ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ನಮ್ಮ ಮೂಲಭೂತ ಹಕ್ಕು. ಕಾಂಗ್ರೆಸ್ ಜನಪ್ರತಿನಿಧಿಗಳು ಭಾಗವಹಿಸಲಿರುವ ಈ ಪ್ರತಿಭಟನೆಯಲ್ಲಿ ಪ್ರತಿಪಕ್ಷದ ಸಂಸದರು. ಶಾಸಕರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

‘2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 24.5 ಲಕ್ಷ ಕೋಟಿ ಇತ್ತು. 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದು 45 ಲಕ್ಷ ಕೋಟಿಯಾಗಿದೆ. 2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯಕ್ಕೆ 46 ಸಾವಿರ ಕೋಟಿ ಅನುದಾನ ಸಿಕ್ಕಿತ್ತು. ಆದರೆ 2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಬಂದಿರುವ ಅನುದಾನ ಕೇವಲ 50 ಸಾವಿರ ಕೋಟಿ ಮಾತ್ರ. ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದರೂ ರಾಜ್ಯಕ್ಕೆ ಬರುವ ಅನುದಾನದ ಪ್ರಮಾಣದಲ್ಲಿ ಅತ್ಯಲ್ಪ ಏರಿಕೆ ಮಾತ್ರವಾಗಿದೆ’ ಎಂದರು.

‘ದೇಶದಲ್ಲೇ ಕರ್ನಾಟಕ ರಾಜ್ಯ ಪ್ರಗತಿಪರ ರಾಜ್ಯ; ಮಹಾರಾಷ್ಟ್ರ ಬಿಟ್ಟರೆ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕ. ನಿನ್ನೆ ಬಜೆಟ್ ಅನ್ನು ನಾವೆಲ್ಲ ಗಮನಿಸಿದ್ದೇವೆ. ಕೇವಲ ನಿನ್ನೆಯ ಬಜೆಟ್ ಮಾತ್ರವಲ್ಲ. ಕಳೆದ ಐದು ವರ್ಷಗಳ ಬಜೆಟ್ ನೋಡಿದರೆ ನಮಗೆ ನಮ್ಮ ಪಾಲು ನ್ಯಾಯುತವಾಗಿ ಸಿಕ್ಕಿಲ್ಲ. ರಾಜ್ಯದ 28 ಸಂಸದರ ಪೈಕಿ 27 ಸಂಸದರು ಎನ್‌ಡಿಎ ಮೈತ್ರಿಕೂಟದವರೇ ಆಗಿದ್ದರೂ ನಮಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ’ ಎಂದು ವಿವರಿಸಿದರು.

ರಾಜ್ಯದ ಪಾಲಿನಲ್ಲಿ 40ರಿಂದ 45% ಪಾಲು ಕಡಿಮೆ

‘2018-19ರಿಂದ ಈಗಿನವರೆಗೂ ಕೇಂದ್ರ ಬಜೆಟ್ ಗಮನಿಸಿದರೆ, ನಮ್ಮ ರಾಜ್ಯದ ಪಾಲಿನಲ್ಲಿ 40ರಿಂದ 45% ಪಾಲು ಕಡಿಮೆಯಾಗಿದೆ. ಇದರಿಂದಾಗಿ ನಮ್ಮ ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ ವರ್ಷ 7-10 ಸಾವಿರ ಕೋಟಿ ಅನುದಾನ ಕಡಿಮೆಯಾಗುತ್ತಾ ಬರುತ್ತಿದೆ. 14ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯಕ್ಕೆ 4.71% ಪಾಲು ನೀಡಲಾಗಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲನ್ನು 3.64% ಗೆ ಇಳಿಸಲಾಗಿದೆ. ಇದರಿಂದಾಗಿ ನಮಗೆ ಐದು ವರ್ಷಕ್ಕೆ ₹62 ಸಾವಿರ ಕೋಟಿಯಷ್ಟು ಹಣ ಕಡಿಮೆಯಾಗಿದೆ. ಇನ್ನು ವಿವಿಧ ರೀತಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಘೋಷಣೆ ಮಾಡಿದ್ದ ಅನುದಾನ ಕೂಡ ಸರಿಯಾಗಿ ನೀಡಿಲ್ಲ’ ಎಂದು ಹೇಳಿದರು.

ನಯಾಪೈಸೆ ಹಣ ಬಂದಿಲ್ಲ

‘ನಮಗೆ ಆಗಿರುವ ಅನ್ಯಾಯದ ಬಗ್ಗೆ ರಾಜ್ಯದ ಜನರಿಗೆ ತಿಳಿಸಬೇಕು. ನಮ್ಮ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಕೇಂದ್ರ ಬರ ನಿಯಮಾನುಸಾರ ನಾವು ಘೋಷಣೆ ಮಾಡಿದ್ದೇವೆ. ನಮ್ಮ ಹಣಕಾಸು ಹಾಗೂ ಕೃಷಿ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ನೀಡಿದ್ದರು. ಸಂಸದರು ಕೂಡ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದೆವು; ಆದರೂ ನಯಾಪೈಸೆ ಹಣ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನರೇಗಾ ಯೋಜನೆ ಪ್ರಕಾರ ಬರ ಪೀಡಿತ ಪ್ರದೇಶಗಳಲ್ಲಿ ಮಾನವ ಕೂಲಿ ದಿನಗಳನ್ನು 100ರಿಂದ 150 ದಿನಗಳಿಗೆ ಹೆಚ್ಚಳ ಮಾಡಬೇಕು ಎಂದು ಕಾನೂನಿನಲ್ಲಿ ಇದೆ. ಯಾವುದೇ ಯೋಜನೆ ತೆಗೆದುಕೊಂಡರೂ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರದ ಅನುದಾನದಲ್ಲಿ ಕರ್ನಾಟಕ ಮತ್ತು ಗುಜರಾತ್ ನಡುವೆ ನಾನು ಹೋಲಿಕೆ ಮಾಡಲು ಹೋಗುವುದಿಲ್ಲ. ಬೇರೆಯವರಿಗೆ ನೀವು ಎಷ್ಟಾದರೂ ನೀಡಿ ಆದರೆ ನಮಗೆ ನ್ಯಾಯಯುತವಾಗಿ ಸಿಗಬೇಕಾದ ನಮ್ಮ ಪಾಲನ್ನು ನೀಡಿ ಎಂದು ಕೇಳುತ್ತಿದ್ದೇವೆ’ ಎಂದರು.

‘ಬಿಜೆಪಿ ಸರ್ಕಾರ ಇದ್ದಾಗ ಡಬಲ್ ಇಂಜಿನ್ ಸರ್ಕಾರದಿಂದ ನಮಗೆ ಲಾಭ ಆಗಿರಬಹುದು ಎಂದು ಭಾವಿಸಿದ್ದೆವು. ಆದರೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದಾಗ ನಮ್ಮ ರಾಜ್ಯಕ್ಕೆ ₹62 ಸಾವಿರ ಕೋಟಿ ನಷ್ಟವಾಗಿದೆ. ಇದನ್ನು ಹೇಗೆ ಅರಗಿಸಿಕೊಳ್ಳುವುದು? ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಡಬಲ್ ಆಗಿದ್ದರೂ ರಾಜ್ಯದ ಪಾಲಿನ ಅನುದಾನ ಮಾತ್ರ ಹೆಚ್ಚಳವಾಗಿಲ್ಲ’ ಎಂದು ಹೇಳಿದರು.

ಹುಟ್ಟುತ್ತಾ ಭಾರತೀಯ ಸಾಯುವಾಗಲೂ ಭಾರತೀಯ

‘ಡಿ.ಕೆ. ಸುರೇಶ್ ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆ ವಿಚಾರವಾಗಿ ಬಿಜೆಪಿ ನಾಯಕರು ಕ್ಷಮೆಯಾಚನೆಗೆ ಆಗ್ರಹಿಸುತ್ತಿರುವ ಬಗ್ಗೆ ಕೇಳಿದಾಗ, ‘ನಾನು ಭಾರತೀಯ; ಹುಟ್ಟತ್ತಾ ಭಾರತೀಯನಾಗಿದ್ದೇನೆ. ಸಾಯುವಾಗಲೂ ಭಾರತೀಯನಾಗಿ ಸಾಯುತ್ತೇನೆ. ಭಾರತ ಅಖಂಡ ದೇಶ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಭಾರತವೊಂದೆ. ಬಿಜೆಪಿ ಈ ವಿಚಾರ ರಾಜಕೀಯಗೊಳಿಸುತ್ತಿದೆ. ಸಂಸದ ಸುರೇಶ್ ವರು ಬಿಜೆಪಿ ಸರ್ಕಾರದಿಂದ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಿದ್ದಾರೆ. ಹೀಗೆ ಅನ್ಯಾಯ ಮುಂದುವರಿದರೆ ಮುಂದೆ ಇಂತಹ ಆಲೋಚನೆಗಳು ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ಸುರೇಶ್ ಕೂಡ ಭಾರತೀಯ; ಕಾಂಗ್ರೆಸಿಗನಾಗಿದ್ದು ಕಾಂಗ್ರೆಸ್ ಪಕ್ಷ ಈ ದೇಶವನ್ನು ಒಗ್ಗಟ್ಟಾಗಿಟ್ಟಿದೆ. ಕಾಂಗ್ರೆಸ್ ಪಕ್ಷ ಅಥವಾ ಕಾಂಗ್ರೆಸ್ ಸರ್ಕಾರಗಳು ದೇಶವನ್ನು ಸಮಾನತೆಯಿಂದ ನೋಡಿದೆ. ಬಿಜೆಪಿಯವರು ಬಜೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಲಾಗದೇ ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. ರಾಜ್ಯದ 27 ಸಂಸದರು ಒಂದು ದಿನವೂ ಪ್ರಧಾನಮಂತ್ರಿ, ಕೇಂದ್ರ ವಿತ್ತ ಸಚಿವರನ್ನು ಭೇಟಿ ಮಾಡಿ ರಾಜ್ಯದ ಹಿತದ ಬಗ್ಗೆ ಚರ್ಚೆ ಮಾಡಿಲ್ಲ. ಬೊಮ್ಮಾಯಿ ಅವರಾಗಲಿ, ಯಡಿಯೂರಪ್ಪ ಅವರಾಗಲಿ ರಾಜ್ಯದ ಬಗ್ಗೆ ತಮ್ಮ ನಾಯಕರ ಜತೆ ಮಾತನಾಡಿಲ್ಲ. ಅವರು ತಮ್ಮ ಸಮಸ್ಯೆಗಳಲ್ಲೇ ಮುಳುಗಿದ್ದಾರೆ. ಇವರ ಅವಧಿಯಲ್ಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯವಾಗಿದೆ ಎಂಬುದನ್ನು ದಾಖಲೆಗಳು ಹೇಳುತ್ತಿವೆ’ ಎಂದು ಸ್ಪಷ್ಟನೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!