Friday, September 20, 2024

ಪ್ರಾಯೋಗಿಕ ಆವೃತ್ತಿ

ಆರ್ಥಿಕ ಸಮತೆಗೆ ವಿರುದ್ದವಾದ ಮಧ್ಯಂತರ ಬಜೆಟ್; ದಸಂಸ ಪ್ರತಿಭಟನೆ

ದಲಿತ, ಶೋಷಿತ ತಳ ಸಮುದಾಯಗಳ ಅಭ್ಯುದಯ, ಸಾಮಾಜಿಕ, ಆರ್ಥಿಕ ನ್ಯಾಯಕ್ಕೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಸ್ಪಂದಿಸಬೇಕಾಗಿತ್ತು ಆದರೆ ಮಾನವೀಯ, ಸಾಂವಿಧಾನಿಕ ಆಶಯಕ್ಕೆ ಆದ್ಯತೆ ನೀಡದ ಬಜೆಟ್ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮತೆಯ ವಿರುದ್ಧವಾಗಿದೆ ಎಂದು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಸಂಜಯ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯ ವಿರೋಧಿಯಾಗಿದೆ. ಕೇಂದ್ರ ಯೋಜನಾ ಆಯೋಗದ ನಿರ್ದೇಶನದಂತೆ ರಾಷ್ಟ್ರೀಯ ಎಸ್ಸಿ ಎಸ್ಟಿ ಉಪ ಯೋಜನಾ ಕಾಯ್ದೆ ರೂಪಿಸಿ ಬಜೆಟ್ ನಲ್ಲಿ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಶೇಕಡ 30ರಷ್ಟು ಅನುದಾನ ಮೀಸಲಿರಿಸುವ ಕಾಯ್ದೆ ಯನ್ನು ಜಾರಿಗೊಳಿಸಬೇಕು, ಅನಾಗರಿಕ ಅಸ್ಪೃಶ್ಯತಾ ಆಚರಣೆ ನಿರ್ಮೂಲನೆಗೆ ಜಾಗತಿಕ ಸಮಾವೇಶ ಸಂಘಟಿಸಬೇಕು. ಜೊತೆಗೆ ಅಸ್ಪೃಶ್ಯತಾ ನಿರ್ಮೂಲನೆಗೆ ಕ್ರಿಯಾಯೋಜನೆ ರೂಪಿಸಿ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಬೇಕು ಎಂದು ಆಗ್ರಹಿಸಿದರು.

ಖಾಸಗಿ ಕಂಪನಿಗಳಲ್ಲಿ ಸಾಮಾಜಿಕ ನ್ಯಾಯ ಪಾಲನೆಗಾಗಿ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀತಿ ಜಾರಿಗೊಳಿಸಬೇಕು, ಕೃಷಿ ವಲಯವನ್ನು ಉದ್ಯಮವಾಗಿ ಘೋಷಿಸಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು, ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸಿ ರೈತರ ಹಿತ ರಕ್ಷಣೆಯ ಬದ್ಧತೆಯನ್ನು ಬಜೆಟ್ ನಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ತಿದ್ದುಪಡಿ ಕೈಬಿಟ್ಟು, ಮತದಾನ ವ್ಯವಸ್ಥೆಯಲ್ಲಿ ಇವಿಎಂ ನಿಷೇಧಿಸಿ ಮತಪತ್ರ ಬಳಕೆ ಮಾಡಿ ಮತದಾನದ ಹಕ್ಕನ್ನು ಸಂರಕ್ಷಿಸಬೇಕು, ಮೀಸಲಾತಿ ನೀತಿಯನ್ನು ಸುಪ್ರೀಂ ಕೋರ್ಟ್ ಶೇಕಡ 50ಕ್ಕೆ ಮೀರದಂತೆ ಮಿತಿ ಏರಿದ್ದನ್ನು ಪ್ರಶ್ನಿಸದಿರುವ ಆಳುವ ಸರ್ಕಾರ ಸಾಮಾಜಿಕ ಅನ್ಯಾಯ ಮಾಡಿದ್ದು, ಸಮಾನತೆಯ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿವಿಗಾಗಿ ಜಾತಿಗಳ ಜನಸಂಖ್ಯಾ ವಾರು ಶೇ. ನೂರಕ್ಕೆ ನೂರು ಪ್ರಾತಿನಿಧ್ಯ ನೀಡುವ ಸರ್ವರಿಗೂ ಸಮಬಾಳು, ಸಮಪಾಲು ನೀತಿ ಜಾರಿಗಾಗಿ. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಜಾರಿಗೆ ತರಬೇಕು, ಪರಿಶಿಷ್ಟ ಜಾತಿಗೆ ಶೇ. 17, ಪಂಗಡಕ್ಕೆ ಶೇ. 7 ರಷ್ಟು ಏರಿಕೆ ಮಾಡಿರುವ ಮೀಸಲಾತಿ ನೀತಿಯನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರ್ಪಡೆ ಮಾಡಬೇಕು, ರಾಷ್ಟ್ರ ವ್ಯಾಪ್ತಿ ಜಾತಿ ಜನಗಣತಿ ನಡೆಸಲು ಬಜೆಟ್ ನಲ್ಲಿ ಅನುದಾನ ಘೋಷಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಮೂರು ಲಕ್ಷ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಪ್ರತಿಯಾಗಿ ಸಂತ್ರಸ್ತರ ಮೇಲೆ ಪ್ರತಿ ದೂರು ದಾಖಲಿಸುವ ಅವಕಾಶ ನಿರ್ಬಂಧಿಸಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ 1989 ಕಾಯ್ದೆಗೆ ತಿದ್ದುಪಡಿ ತರಬೇಕು, ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರ ಹುದ್ದೆ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸ ಬೇಕು, ಕರ್ನಾಟಕ ಸರ್ಕಾರದ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಶಿಫಾರಸಿನಂತೆ ಸಂವಿಧಾನದ 341(3)ಕ್ಕೆ ತಿದ್ದುಪಡಿ ಮಾಡಿ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ರಾಷ್ಟ್ರೀಯ ಬೌದ್ಧ ಪ್ರಾಧಿಕಾರ ರಚಿಸಬೇಕು, ಬೌದ್ಧ ಧರ್ಮಕ್ಕೆ ಮರಳಿದ ಪರಿಶಿಷ್ಟರಿಗೆ ನವ ಬೌದ್ಧ ಜಾತಿ ಪ್ರಮಾಣ ಪತ್ರ ನೀಡಲು ಎಲ್ಲಾ ರಾಜ್ಯಗಳಿಗೆ ನಿರ್ದೇಶಸಬೇಕು, ರಾಜ್ಯದ ವಿವಿಧ ಜಾತಿಗಳನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸು ಮಾಡಿರುವುದನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಕೆ.ಎಂ ಶ್ರೀನಿವಾಸ್, ಎಸ್. ಕುಮಾರ್,ಸಿದ್ದಯ್ಯ ಮಳವಳ್ಳಿ, ಸೋಮಶೇಖರ್, ವೈ. ಸುರೇಶ್ ಕುಮಾರ್, ಬಿಎಂ ಸೋಮಶೇಖರ್, ಗೀತಾ ಮೇಲುಕೋಟೆ, ಸುರೇಶ್ ಮರಳಗಾಲ,ಬಿ.ಆನಂದ, ಬಸವರಾಜ್ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!