Friday, September 20, 2024

ಪ್ರಾಯೋಗಿಕ ಆವೃತ್ತಿ

ವಿಪಕ್ಷಗಳ 143 ಸಂಸದರ ಅಮಾನತು ಖಂಡಿಸಿ ‘ಇಂಡಿಯಾ’ ಒಕ್ಕೂಟದಿಂದ ನಾಳೆ ಧರಣಿ

ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ವಿಪಕ್ಷಗಳ 143 ಸಂಸದರ ಅಮಾನತು ಹಾಗೂ ಲೋಕಸಭೆ ಭದ್ರತಾ ಲೋಪದ ಕುರಿತು ಹೇಳಿಕೆ ನೀಡಲು ಗೃಹ ಸಚಿವ ಅಮಿತ್ ಶಾ ಅವರ ನಿರಾಕರಣೆ ವಿರೋಧಿಸಿ ‘ಐಎನ್‌ಡಿಐಎ’ ಕೂಟದ ಪ್ರತಿಪಕ್ಷಗಳ ಸಂಸದರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧರಣಿ ನಡೆಸುವುದಾಗಿ ಬುಧವಾರ ಘೋಷಿಸಿದೆ.

ನಾಳೆ (ಡಿ.22) ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಪಕ್ಷಗಳ ಸಂಸದರು ಧರಣಿ ನಡೆಸಲಿದ್ದಾರೆ. ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಇಂಡಿಯಾ’ ಬಣದ ನಾಯಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜಂತರ್ ಮಂತರ್‌ನಲ್ಲಿ ಸಂಸದರು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದು, ಅದೇ ಸಂದರ್ಭದಲ್ಲಿ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಇಂಡಿಯಾ ಒಕ್ಕೂಟದ ನಾಯಕರು ನಿರ್ಧರಿಸಿದ್ದಾರೆ. ಇದೇ ವರ್ಷದ ಮೇ ನಂತರ ಪ್ರತಿ ಪಕ್ಷಗಳು ಒಂದುಗೂಡಲು ನಿರ್ಧರಿಸಿದ ನಂತರ ಇದು ಮೊದಲ ಜಂಟಿ ಪ್ರತಿಭಟನಾ ಕಾರ್ಯಕ್ರಮವಾಗಿದೆ.

ಲೋಕಸಭೆ ಭದ್ರತಾ ಉಲ್ಲಂಘನೆಯ ಕುರಿತು ಶಾ ಅವರು ಹೇಳಿಕೆ ನೀಡುವುದಕ್ಕೆ ನಿರಾಕರಿಸಿದ್ದರಿಂದ ಉಭಯ ಸದನಗಳಲ್ಲಿ ಇಂಡಿಯಾ ಒಕ್ಕೂಟದ ಸಂಸದರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರದ ನಡೆ ಖಂಡಿಸಿ ಬುಧವಾರ ರಾಜ್ಯಸಭಾ ವಿರೋಧ ಪಕ್ಷದ ಸಂಸದರು ಸಭಾತ್ಯಾಗ ಮಾಡಿ ಸದನಕ್ಕೆ ಮರಳಲಿಲ್ಲ.

ಅಮಿತ್ ಶಾ ಉತ್ತರ ನೀಡುವಂತೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಗುರುವಾರವೂ ಸದನದಲ್ಲಿ ತಮ್ಮ ಬೇಡಿಕೆ ಮುಂದುವರಿಸುವ ಸಾಧ್ಯತೆಯಿದೆ. ಮುಂಗಾರು ಅಧಿವೇಶನದಿಂದ ಅಮಾನತುಗೊಂಡಿರುವ ಎಎಪಿಯ ಸಂಜಯ್ ಸಿಂಗ್ ಸೇರಿದಂತೆ 237 ಐಎನ್‌ಡಿಐಎ ಸಂಸದರಲ್ಲಿ ಒಟ್ಟು 144 ಮಂದಿಯನ್ನು ಸದನದಿಂದ ಅಮಾನತುಗೊಳಿಸಲಾಗಿದೆ.

ಇಂಡಿಯಾ ಬ್ಲಾಕ್‌ನ ನಾಯಕರ ಸಭೆಯಲ್ಲಿ, ಡಿಎಂಕೆ ಸಂಸದ ಟಿ ಎಸ್ ಇಲಾಂಗೋ, ಐಪಿಸಿ ನಿಯಮ ಬದಲಿಸುವ ಮೂರು ಮಸೂದೆಗಳ ಬಗ್ಗೆ ನಾಯಕರಿಗೆ ವಿವರಿಸಿದರು. ಲೋಕಸಭೆಯು ಬುಧವಾರ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಎವಿಡೆನ್ಸ್ ಆಕ್ಟ್ ವಿಧೇಯಕಗಳನ್ನು ಅಂಗೀಕರಿಸುವುದರೊಂದಿಗೆ ಪ್ರತಿಪಕ್ಷಗಳು ಗುರುವಾರ ರಾಜ್ಯಸಭೆಗೆ ಬರುತ್ತವೆ ಎಂದು ಸರ್ಕಾರ ನಿರೀಕ್ಷಿಸುತ್ತಿದೆ. ಆದರೆ, ಅವರು ಅದರಲ್ಲಿ ಭಾಗವಹಿಸದೇ ಇರಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!