ನಿನ್ನೆ ವರ್ಗಾವಣೆಗೊಂಡು ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಸ್ವೀಕರಿಸಿದ್ದ ಪಿಎಸ್‌ಐ ಓರ್ವರು ಇಂದು (ಶುಕ್ರವಾರ) ಹೃದಯಾಘಾತದಿಂದ ನಿಧನರಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ನಗರದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಪರಶುರಾಮ್ (35) ಇಂದು ರಾತ್ರಿ 8 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ನಿಷ್ಠಾವಂತ ಅಧಿಕಾರಿಯಾಗಿ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು, ನಿನ್ನೆಯಷ್ಟೆ ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಆಗಿದ್ದರು.
ಈ ಹಿನ್ನೆಲೆಯಲ್ಲಿ ಅವರ ಸಹೋದ್ಯೋಗಿಗಳು ಹಾಗೂ ಪೊಲೀಸ್ ಇಲಾಖೆಯ ಇತರ ಸಿಬ್ಬಂದಿಗಳ ಬೀಳ್ಕೊಡುಗೆ ಸಮಾರಂಭ ಮಾಡಿದ್ದರು. ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿರುವುದು ಎಲ್ಲರಿಗೂ ಆಘಾತ ಉಂಟು ಮಾಡಿದೆ.