Wednesday, November 18, 2026

ಪ್ರಾಯೋಗಿಕ ಆವೃತ್ತಿ

ಪುಲ್ವಾಮ ದಾಳಿ : ಪ್ರಧಾನಿ ಮೋದಿಗೆ ಕಾಶ್ಮೀರದ ಬಗ್ಗೆ ಅಜ್ಞಾನವಿದೆ-ಉದ್ದೇಶಪೂರ್ವಕವಾಗಿ ಸೈನಿಕರನ್ನು ರಕ್ಷಿಸಲಿಲ್ಲ: ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರ ಗಂಭೀರ ಆರೋಪ

ಪ್ರಧಾನಿಗೆ ಭ್ರಷ್ಟಾಚಾರದಿಂದ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ, ಪುಲ್ವಾಮ ದಾಳಿಯ ಸಂದರ್ಭದಲ್ಲಿ ನನ್ನ ಬಾಯಿ ಮುಚ್ಚಿಸಲಾಯಿತು – ಸತ್ಯ ಪಾಲ್ ಮಲಿಕ್.

ಪುಲ್ವಾಮ ದಾಳಿ ಸಂದರ್ಭದಲ್ಲಿ ಮೋದಿ ಸರ್ಕಾರ ಉದ್ದೇಶಪೂರ್ವಕವಾಗಿ ಸೈನಿಕರನ್ನು ರಕ್ಷಿಸಲಿಲ್ಲ. ಏಕೆಂದರೆ ಆ ಸಾವುಗಳಿಗೆ ಪಾಕಿಸ್ತಾನವನ್ನು ಹೊಣೆ ಮಾಡಿ, ಸರ್ಕಾರ ಮತ್ತು ಬಿಜೆಪಿ ಪಕ್ಷ ರಾಜಕೀಯ ಲಾಭ ಪಡೆಯಲು ಯತ್ನಿಸಿತು ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರಾದ ಸತ್ಯ ಪಾಲ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.

ದಿ ವೈರ್‌ನ ಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ, “ಪ್ರಧಾನಿಗೆ ಭ್ರಷ್ಟಾಚಾರದಿಂದ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ, ಪುಲ್ವಾಮ ದಾಳಿಯ ಸಂದರ್ಭದಲ್ಲಿ ನನ್ನ ಬಾಯಿ ಮುಚ್ಚಿಸಲಾಯಿತು” ಎಂದಿದ್ದಾರೆ.

ಸತ್ಯ ಪಾಲ್ ಮಲಿಕ್ ಪುಲ್ವಾಮ ದಾಳಿ ನಡೆದಾಗ ಮತ್ತು ಆರ್ಟಿಕಲ್ 370 ಅನ್ನು ಕಿತ್ತು ಹಾಕಿದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದರು. ಅದಕ್ಕೂ ಮುನ್ನ ಗೋವಾದ ರಾಜ್ಯಪಾಲರಾಗಿದ್ದ ಅವರು, ಆನಂತರ 2022ರವರೆಗೆ ಮೇಘಾಲಯದ ರಾಜ್ಯಪಾಲರಾಗಿದ್ದರು. ಮೋದಿ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದಾಗ ಅದನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದರು. ಅಲ್ಲದೇ ಆರ್‌ಎಸ್‌ಎಸ್‌ ಭಾರೀ ಭ್ರಷ್ಟಾಚಾರ ನಡೆಸುತ್ತದೆ ಎಂದು ಆರೋಪಿಸಿದ್ದರು.

ಪುಲ್ವಾಮ ದಾಳಿ ನಡೆದಾಗ ಅಷ್ಟು ದೂರ ಆ ರಸ್ತೆಯಲ್ಲಿ ಮಿಲಿಟರಿ ವಾಹನಗಳಲ್ಲಿ ಸಾಗುವುದು ಅಪಾಯಕಾರಿ. ಹಾಗಾಗಿ ಸೈನಿಕರನ್ನು ರವಾನಿಸಲು ಯುದ್ಧ ವಿಮಾನಗಳನ್ನು ಕಳಿಸಿ ಎಂದು ಸಿ.ಆರ್.ಪಿ.ಎಫ್. ಕೇಳಿದಾಗ, ಆಗಿನ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ನಿರಾಕರಿಸುತ್ತಾರೆ. ನಾನು ಈ ವಿಚಾರವನ್ನು ಪ್ರಧಾನ ಮಂತ್ರಿಯ ಗಮನಕ್ಕೆ ತಂದಾಗ, “ಇದನ್ನು ಯಾರಿಗೂ ಹೇಳಬೇಡಿ, ಮಾತನಾಡದೆ ಸುಮ್ಮನಿರಿ” ಎಂದು ಬುದ್ಧಿವಾದ ಹೇಳಿದರು. ಎನ್‌ಎಸ್‌ಎ ಮುಖ್ಯಸ್ಥ ಅಜಿತ್ ದೋವಲ್ ಕೂಡ ಮಾತನಾಡದಂತೆ ತಡೆದರು ಎಂದು ಮಲಿಕ್ ಹೇಳಿದ್ದಾರೆ.

ಪುಲ್ವಾಮಾ ಘಟನೆಯಲ್ಲಿ 300 ಕೆಜಿ ಆರ್‌ಡಿಎಕ್ಸ್ ಸ್ಫೋಟಕಗಳನ್ನು ಹೊತ್ತ ಕಾರು ಪಾಕಿಸ್ತಾನದಿಂದ ಬಂದಿದ್ದು, ಜಮ್ಮು ಮತ್ತು ಕಾಶ್ಮೀರದ ರಸ್ತೆಗಳು ಮತ್ತು ಹಳ್ಳಿಗಳಲ್ಲಿ 10-15 ದಿನಗಳ ಕಾಲ ಯಾರಿಗೂ ಗೊತ್ತಾಗದಂತೆ ಮತ್ತು ಸೇನೆಯ ಗಮನಕ್ಕೆ ಬಾರದಂತೆ ಸಂಚರಿಸುತ್ತಿತ್ತು ಎಂದರೆ ಇದು ಗಂಭೀರ ಗುಪ್ತಚರ ವೈಫಲ್ಯ ಅಲ್ಲವೇ ಎಂದಿದ್ದಾರೆ.

ನಾನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲನಾಗಿದ್ದ ವೇಳೆ ಎರಡು ಕಡತಗಳು ನನ್ನ ಮುಂದೆ ಬಂದಿದ್ದವು. ಒಂದು ಮುಖೇಶ್ ಅಂಬಾನಿಗೆ ಸೇರಿದ್ದರೆ ಮತ್ತೊಂದು ಆರ್‌ಎಸ್‌ಎಸ್‌ ಮುಖಂಡ ರಾಮ್ ಮಾಧವ್‌ರವರದ್ದಾಗಿತ್ತು. ಅದಕ್ಕೆ ಸಹಿ ಹಾಕಿದರೆ 300 ಕೋಟಿ ಲಂಚ ಕೊಡುವುದಾಗಿ ಆಮಿಷವೊಡ್ಡಿದ್ದರು. ರಾಮ್ ಮಾಧವ್ ಒಂದು ದಿನ ಬೆಳಿಗ್ಗೆ ಏಳು ಗಂಟೆಗೆ ಬಂದು ಅವುಗಳಿಗೆ ಸಹಿ ಹಾಕುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ನಾನು ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ನಿರಾಕರಿಸಿದ್ದೆ ಮತ್ತು ಆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದೆ ಎಂದು ಮಲಿಕ್ ಹೇಳಿದ್ದಾರೆ.

ಕಾಶ್ಮೀರದ ಬಗ್ಗೆ ಪ್ರಧಾನಿ ಮೋದಿಗೆ ಅಜ್ಞಾನ ಮತ್ತು ತಪ್ಪು ತಿಳುವಳಿಕೆ ಇದೆ. ಆ ಕಾರಣದಿಂದಲೇ ಅವರು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕಿ ರಾಜ್ಯದ ಅರ್ಹತೆ ತೆಗೆದುಹಾಕಿದರು. ಅದು ಅತ್ಯಂತ ದೊಡ್ಡ ಅಪರಾಧವಾಗಿದ್ದು, ಈ ಕೂಡಲೇ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಬೇಕು ಎಂದು ಮಲಿಕ್ ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಭ್ರಷ್ಟಾಚಾರದ ಕುರಿತು ಯಾವುದೇ ಕಾಳಜಿಯಿಲ್ಲ. ಗೋವಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಗಳ ಬಗ್ಗೆ ನಾನು ಮೋದಿಯವರ ಬಳಿ ಹಲವಾರು ಬಾರಿ ದೂರು ನೀಡಿದ್ದೆ. ಅವುಗಳನ್ನು ಸರಿಪಡಿಸುವ ಬದಲು ನಿರ್ಲಕ್ಷ್ಯ ಮಾಡಿದ್ದಲ್ಲದೆ, ನನ್ನನ್ನು ಗೋವಾದ ರಾಜ್ಯಪಾಲ ಸ್ಥಾನದಿಂದ ಕಿತ್ತು ಮೇಘಾಲಯಕ್ಕೆ ಕಳಿಸಿದರು. ಪ್ರಧಾನಿಯವರ ಸುತ್ತಲಿನ ಜನರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಆಗಾಗ್ಗೆ ಪ್ರಧಾನಿ ಕಚೇರಿಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ಮೋದಿಯವರ ಗಮನಕ್ಕೆ ತಂದಿದ್ದೇನೆ, ಆದರೆ ಪ್ರಧಾನಿ ಕಾಳಜಿ ತೋರುತ್ತಿಲ್ಲ. ಹಾಗಾಗಿ ನಾನು ಖಚಿತವಾಗಿ ಹೇಳಬಲ್ಲೆ ಭ್ರಷ್ಟಾಚಾರ ಕುರಿತು ನರೇಂದ್ರ ಮೋದಿಯವರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ರಾಷ್ಟ್ರಪತಿ ಮುರ್ಮುರವರು ತಮ್ಮ ಭೇಟಿಗೆ ನೀಡುವ ಎಲ್ಲಾ ಸಮಯಗಳನ್ನು ನೇರವಾಗಿ ಪ್ರಧಾನಿ ಕಾರ್ಯಾಲಯ ಮೇಲ್ವಿಚಾರಣೆ ಮಾಡುತ್ತದೆ. ಒಮ್ಮೆ ನಾನು ರಾಷ್ಟ್ರಪತಿಗಳನ್ನು ನೋಡಲು ರಾಷ್ಟ್ರಪತಿ ಭವನಕ್ಕೆ ಹೊರಟಿದ್ದಾಗ ದಾರಿ ಮಧ್ಯೆ ನನಗೆ ನೀಡಿದ್ದ ಅವಕಾಶವನ್ನು ರದ್ದುಗೊಳಿಸಲಾಯಿತು ಎಂದು ಮಲಿಕ್ ಆರೋಪಿಸಿದ್ದಾರೆ.

ಪ್ರಧಾನ ಮಂತ್ರಿಯವರು ಬಿಬಿಸಿಯನ್ನು ನಿರ್ವಹಿಸುತ್ತಿರುವ ರೀತಿ ಭಯಾನಕ ತಪ್ಪಿನಿಂದ ಕೂಡಿದೆ. ಅದೇ ರೀತಿ ಸಂಸತ್ತಿನಲ್ಲಿ ಮಾತನಾಡಲು ರಾಹುಲ್ ಗಾಂಧಿ ಅನುಮತಿ ನಿರಾಕರಿಸಿದ್ದು ಮೋದಿ ಸರ್ಕಾರದ ಮತ್ತೊಂದು ತಪ್ಪಾಗಿದೆ. ಅದಾನಿ ಹಗರಣದ ಬಗ್ಗೆ ರಾಹುಲ್ ಗಾಂಧಿ ಸರಿಯಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಅದಕ್ಕೆ ಪ್ರಧಾನಿ ಉತ್ತರಿಸಲು ಸಾಧ್ಯವಾಗದ ಕಾರಣ ಅವರನ್ನು ಅನರ್ಹ ಮಾಡಲಾಗಿದೆ. ಮುಸಲ್ಮಾನರ ಬಗ್ಗೆ ಪ್ರಧಾನಿ ಮತ್ತು ಹಲವಾರು ಸಚಿವರು ನಡೆಸುತ್ತಿರುವ ವರ್ತನೆಯು ಸಹಿಸಲು ಅಸಾಧ್ಯವಾಗಿದೆ ಎಂದು ಮಲಿಕ್ ಹೇಳಿದ್ದಾರೆ. ಸರ್ಕಾರವು ‘ಮೂರನೇ ದರ್ಜೆಯ ಜನರನ್ನು’ ರಾಜ್ಯಪಾಲರನ್ನಾಗಿ ನೇಮಿಸಿದೆ ಎಂದು ಮಲಿಕ್ ಆರೋಪಿಸಿದ್ದಾರೆ.

ಪ್ರಧಾನ ಮಂತ್ರಿಯ ಬಗ್ಗೆ ತಾನು ಹೇಳಿರುವ ಎಲ್ಲಾ ಮಾತುಗಳಿಗೂ ಬದ್ಧನಾಗಿದ್ದೇನೆ ಮತ್ತು ಯಾವುದೇ ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ ಅಥವಾ ಹೆದರುವುದಿಲ್ಲ ಎಂದು ಮಲಿಕ್ ಖಚಿತಪಡಿಸಿದ್ದಾರೆ. ತನಗೆ ಕನಿಷ್ಠ ಭದ್ರತೆಯನ್ನು ನೀಡಲಾಗಿದೆ. ಅಧಿಕೃತ ಭದ್ರತಾ ಸಮಿತಿಯು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆಯಿದೆ. ಆದರೆ ಅದರ ಬಗ್ಗೆ ನನಗೆ ಚಿಂತೆಯಿಲ್ಲ ಎಂದು ಅವರು ಹೇಳಿದ್ದಾರೆ.

ಸುದ್ದಿ ಕೃಪೆ :https://nudikarnataka.com/

ಪೂರ್ಣ ಸಂದರ್ಶನ ನೋಡಿ.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ