ನೀವು ಅರ್ಜಿ ಹಾಕಿ ಸಾಕು, ನಾವು ಚುನಾವಣೆ ನಡೆಸಿ, ಅತ್ಯಂತ ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಆದ್ಯತೆ ಎಚ್.ಡಿ. ಕುಮಾರಸ್ವಾಮಿ ಅವರೇ ಸ್ಪರ್ಧಿಸಬೇಕು. ಇಲ್ಲವಾದಲ್ಲಿ ಅವರು ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ನಾವೆಲ್ಲರೂ ಹೊರುತ್ತೇವೆ ಎಂದು ಭರವಸೆ ನೀಡಿದರು.
ಹೊಟ್ಟೆಪಾಡಿಗಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಸೇರಿದ್ದಾರೆ ಎಂದು ಹೇಳುವ ನೀವು, ಎಚ್‌ಡಿಕೆ ಇಲ್ಲದಿದ್ದರೆ ನೀವು ರಾಜಕೀಯದಲ್ಲೇ ಇರುತ್ತಿರಲಿಲ್ಲ. ನಿಮಗೆ ರಾಜಕೀಯವಾಗಿ ಭವಿಷ್ಯ ರೂಪಿಸಿ, ನಿಮ್ಮನ್ನು ರಾಜ್ಯದ ನಾಯಕರನ್ನಾಗಿ ಮಾಡಿದವರ ಬಗ್ಗೆಯೇ ಹಗುರವಾಗಿ ಮಾತನಾಡುತ್ತೀರಾ? ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಒಟ್ಟಾಗಿ ದುಡಿದರೆ ನಮ್ಮ ಅಭ್ಯರ್ಥಿ ಗೆಲ್ಲಿಸಬಹುದು
ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರು ಮಾತನಾಡಿ, ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಮಾಡಿಕೊಂಡ ತಪ್ಪುಗಳಿಂದ ನಿಖಿಲ್ ಕುಮಾರಸ್ವಾಮಿ ಅವರು ಪರಾಭವಗೊಳ್ಳಬೇಕಾಯಿತು. ಆದರೆ ಈ ಬಾರಿ ಹಿಂದಿನ ತಪ್ಪುಗಳಿಂದ ಪಾಠ ಕಲಿತು, ಎಲ್ಲಾ ಮುಖಂಡರು ಒಗ್ಗಟ್ಟಾಗಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿದರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬಹುದು ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಡ್ಯ ಜಿಲ್ಲೆಗೆ ಎಷ್ಟು ವಿದ್ಯುತ್ ಸಬ್‌ಸ್ಟೇಷನ್, ಪದವಿ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು ಕೊಟ್ಟಿದ್ದೇವೆ, ಎಂಬುದರ ಬಗ್ಗೆ ಎಳೆ ಎಳೆಯಾಗಿ ವರದಿ ಕೊಡುತ್ತೇವೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕರೆದರೂ ಬರಲಿಲ್ಲ. ದೂರದೃಷ್ಟಿ ಇಟ್ಟುಕೊಂಡು ದೇವೇಗೌಡರ ಮಾರ್ಗದರ್ಶನದಲ್ಲಿ ಎಚ್.ಡಿ.ರೇವಣ್ಣ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಎರಡು ಪ್ರಮುಖ ಖಾತೆಗಳ ಸಚಿವರಾಗಿದ್ದರೂ 2015ರಲ್ಲಿ ಸುರೇಶ್‌ಗೌಡರ ಎದುರು ಸೋತಿರಿ. ಕಾಲ ಹೀಗೇ ಇರಲ್ಲ. ಮೊದಲು ನೀವು ನಡೆದು ಬಂದ ದಾರಿ, ನಿಮ್ಮನ್ನು ಬೆಳೆಸಿದವರನ್ನು ನೆನೆಯಿರಿ. ಇಲ್ಲದಿದ್ದಲ್ಲಿ ಕಾಲವೇ ಎಲ್ಲವನ್ನೂ ಅರ್ಥ ಮಾಡಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ 90 ಅಡಿ ನೀರಿದ್ದು, ಕೂಡಲೇ ನಾಲೆಗಳಿಗೆ ನೀರು ಹರಿಸಿ, ಜನ-ಜಾನುವಾರುಗಳು ಹಾಗೂ ತೋಟಗಾರಿಕೆ ಬೆಳೆಗಳನ್ನು ರಕ್ಷಿಸಬೇಕು. ತಮಿಳುನಾಡಿನವರು ಕೇಳದಿದ್ದರೂ ನೀರು ಹರಿಸುತ್ತಿದ್ದೀರಿ, ನಾವು ಅಧಿಕಾರದಲ್ಲಿದ್ದಾಗ 74 ಅಡಿ ಇದ್ದರೂ ನೀರು ಕೊಟ್ಟಿದ್ದೇವೆ. ಪ್ರಸ್ತುತ 90 ಅಡಿ ಇದ್ದರೂ ಕಬ್ಬು ಒಣಗುತ್ತಿದ್ದರೂ ನೀರು ಕೊಡುತ್ತಿಲ್ಲ. ಇಂತಹ ದುಸ್ಥಿತಿಯನ್ನು ನೋಡಿದರೆ ಇವರಿಗೆ ಬುದ್ಧಿ ಕಲಿಸುವ ಅನಿವರ‍್ಯತೆ ಇದೆ ಎಂದರು.




