Tuesday, June 25, 2024

ಪ್ರಾಯೋಗಿಕ ಆವೃತ್ತಿ

48 ಗಂಟೆಯೊಳಗಾಗಿ ಮನೆ ಹಾನಿ ಪರಿಹಾರ ಒದಗಿಸಿ : ಡಾ.ವಿ.ರಾಮ್ ಪ್ರಸಾಥ್ ಮನೋಹರ್

ಮಳೆಹಾನಿಯಿಂದ ಉಂಟಾಗಿರುವ ಮನೆ ಹಾನಿ ಪ್ರಕರಣಗಳಲ್ಲಿ ಪರಿಹಾರ ನೀಡಲಾಗುವ ಹಣವನ್ನು 48 ಗಂಟೆಯ ಒಳಗೆ ಫಲಾನುಭವಿಗಳಿಗೆ  ಆರ್.ಟಿ.ಜಿ.ಎಸ್ ಮೂಲಕ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್ ಪ್ರಸಾಥ್ ಮನೋಹರ್ ಅವರು ಅಧಿಕಾರಿಗಳಿಗೆ ಆದೇಶಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಳೆ ಹಾನಿ ಪ್ರಕರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಪತ್ತು ಯಾವ ಸಮಯದಲ್ಲಾದರೂ ಸಂಭವಿಸಬಹುದು. ಅದಕ್ಕೆ ಪೂರ್ವಸಿದ್ಧತೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಪರಿಹರಿಸಲು ಸಾಧ್ಯ ಎಂದರು.

ತಾಲ್ಲೂಕು ಆಡಳಿತ ಚುರುಕಾಗಿ ಕಾರ್ಯನಿರ್ವಹಿಸಬೇಕು:

ಅತಿ ಹೆಚ್ಚು ಮಳೆ ಉಂಟಾದ ಸಂದರ್ಭದಲ್ಲಿ ಪ್ರಾಣ ಹಾನಿ, ಮನೆ ಹಾನಿ, ಬೆಳೆ ಹಾನಿ ಹಾಗೂ ಕಟ್ಟಡಕ್ಕೆ ಹಾನಿ ಉಂಟಾಗಬಹುದು. ಹೆಚ್ಚು ಕ್ಷೇತ್ರ ಪ್ರವಾಸ ಕೈಗೊಂಡು ಜನರಿಗೆ ಉಂಟಾಗುವ ತೊಂದರೆಗಳ ಬಗ್ಗೆ ತಿಳಿದುಕೊಂಡು ಸಾರ್ವಜನಿಕರಿಗೆ ವಿಪತ್ತಿನ ಸಂದರ್ಭದಲ್ಲಿ ವಹಿಸಬೇಕಾದ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಮಳೆ ಹಾನಿಯ ಸಂದರ್ಭದಲ್ಲಿ ಮನೆಯಲ್ಲಿ ನೀರು ತುಂಬಿಕೊಂಡು ಮನೆಯ ವಸ್ತುಗಳು ಅನುಪಯುಕ್ತವಾದರೆ, ಹೆಚ್ಚಿನ ಪರಿಹಾರ ನೀಡುವ ಅವಕಾಶವಿದೆ. ಇದನ್ನು ಪರಿಶೀಲಿಸಿ ಪರಿಹಾರ ಒದಗಿಸಿ. ಜನ ಸಾಮಾನ್ಯರ ತೊಂದರೆಗೆ ಅಧಿಕಾರಿಗಳು ಪ್ರತಿಕ್ರಿಯಿಸಿ, ಪಲಾನುಭಾವಿಗಳನ್ನು ಅಲೆದಾಡಿಸಬೇಡಿ. ಸಕಾಲಕ್ಕೆ ಪರಿಹಾರ ನೀಡಿ. ಅನುದಾನವನ್ನು ಸದುಪಯೋಗ ಪಡಿಸಿಕೊಂಡು ಬಹಳ ಜಾಗೃತಿ ವಹಿಸಿ ಕಾರ್ಯನಿರ್ವಹಿಸಬೇಕು.

ಮಳೆಯಿಂದ ಕುಸಿದ ಅಂಗನವಾಡಿ ಮತ್ತು ಶಾಲಾ ಕಟ್ಟಡಗಳನ್ನು ಶೀಘ್ರದಲ್ಲಿ ಪರಿಶೀಲಿಸಿ ಅವುಗಳ ದುರಸ್ತಿಗೆ ಕ್ರಿಯಾಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ. ಪ್ರವಾಹದಿಂದ ತೊಂದರೆಗೆ ಒಳಗಾದ ಗ್ರಾಮಗಳನ್ನು ಗುರುತಿಸಿ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಿ, ಅಗತ್ಯವಿರುವ ಕಡೆ ಕಾಳಜಿ ಕೇಂದ್ರ, ಗೋಶಾಲೆ ತೆರೆಯುವ ಸ್ಥಳವನ್ನು ಗುರುತಿಸಿ ಎಂದು ಸಲಹೆ ಸೂಚಿಸಿದರು.

ಸ್ಥಳ ಪರಿಶೀಲನೆ: ಸಭೆಗೂ ಮುನ್ನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್ ಪ್ರಸಾಥ್ ಮನೋಹರ್, ಜಿಲ್ಲಾಧಿಕಾರಿ ಎಸ್.ಅಶ್ವತಿ ಹಾಗೂ ಅಧಿಕಾರಿಗಳ ತಂಡ ಹಾಲಳ್ಳಿ ಸ್ಲಂ, ಬೀಡಿ ಕಾರ್ಮಿಕರ ಕಾಲೋನಿ ಸ್ಲಂ, ಮಂಡ್ಯ ತಾಲೂಕಿನ ಇಂಡುವಾಳು, ಯಲಿಯೂರು, ಶ್ರೀರಂಗಪಟ್ಟಣ ತಾಲೂಕಿನ ಟಿ. ಎಂ.ಹೊಸೂರು ಮತ್ತು ಸಬ್ಬನಕುಪ್ಪೆ ಗ್ರಾಮಗಳನ್ನು ಭೇಟಿ ಮಾಡಿ ಮಳೆ ಹಾನಿ ಕುರಿತು ಪರಿಶೀಲನೆ ನಡೆಸಿ, ಸಾರ್ವಜನಿಕರೊಂದಿಗೆ ಚರ್ಚಿಸಿದರು.

ನ್ಯೂ ತಮಿಳ್ ಕಾಲೋನಿ ಸ್ಲಂ ಗೆ ಭೇಟಿ ನೀಡಿ ಪರಿಶೀಲಿಸುತ್ತಿರುವುದು

ಆರೋಗ್ಯ ಇಲಾಖೆ ವತಿಯಿಂದ ರ್‍ಯಾಪಿಡ್ ರೆಸ್ಪಾನ್ಸ್ ಟೀಂ ಕಾರ್ಯನಿರ್ವಹಿಸುತ್ತಿದ್ದು. ಮಳೆನೀರು ಸಂಗ್ರಹಣೆಯಿಂದ ಉಂಟಾಗುವ ಸಾಂಕ್ರಮಿಕ ರೋಗ, ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು.

ನಗರ ಸ್ಥಳೀಯ ಸಂಸ್ಥೆಗಳ ಚರಂಡಿಗಳಲ್ಲಿ ನೀರು ನಿಲ್ಲದಂತೆ ಹೂಳು ತೆಗೆಯಬೇಕು, ತೆಗೆಯುವ ಹೂಳು ಸರಿಯಾದ ರೀತಿಯಲ್ಲಿ ವಿಲೇವಾರಿಯಾಗಬೇಕು. ಮಳೆ ನೀರು ಹರಿದು ಹೋದರೆ ನಗರಗಳಲ್ಲಿ ಸಮಸ್ಯೆ ಉಂಟಾಗುವುದಿಲ್ಲ. ಅಂಗನವಾಡಿ ಹಾಗೂ ಶಾಲಾ ಮುಂಭಾಗದ ಚರಂಡಿಗಳನ್ನು ವ್ಯವಸ್ಥಿತವಾಗಿ ಅಚ್ಚುಕಟ್ಟು ಮಾಡಿಸಬೇಕು. ವಾರ್ಡ್‍ವಾರು ಕಮಿಟಿಗಳು ಚುರುಕಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿ.ಪಂ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಜೆ.ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜಾ, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ, ತಹಶೀಲ್ದಾರ್‌ಗಳಾದ  ಅಹಮದ್, ಎಂ. ವಿ.ರೂಪ, ಎನ್.ಶ್ವೇತಾ, ನಯನ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!