Friday, September 20, 2024

ಪ್ರಾಯೋಗಿಕ ಆವೃತ್ತಿ

ಮೈಸೂರು| ಮೋದಿ ವಾಸ್ತವ್ಯ ಹೂಡಿದ್ದ ಹೋಟೇಲ್ ನ ಬಿಲ್ ವರ್ಷ ಕಳೆದರೂ ಪಾವತಿಯಾಗಿಲ್ಲ !

2023ರ ಏಪ್ರಿಲ್‌ನಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಂಗಿದ್ದ ಹೋಟೆಲ್‌ಗೆ ಪಾವತಿಸಬೇಕಾಗಿದ್ದ 80.6 ಲಕ್ಷ ರೂ. ಬಿಲ್‌ ಬಾಕಿ ಉಳಿದಿದೆ. ಜೂನ್‌ 1ರೊಳಗೆ ಬಿಲ್ ಪಾವತಿ ಮಾಡದಿದ್ದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆಗೆ ಹೋಟೆಲ್‌ ಆಡಳಿತ ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEF) 2023ರ ಏಪ್ರಿಲ್ 9ರಿಂದ 11ರವರೆಗೆ 50 ವರ್ಷಗಳ ‘ಪ್ರಾಜೆಕ್ಟ್ ಟೈಗರ್’ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಕಾರ್ಯಕ್ರಮವನ್ನು ಉದ್ಘಾಟಿಸಲು ಮೋದಿ ಅವರು ಮೈಸೂರಿಗೆ ಭೇಟಿ ನೀಡಿದ್ದರು ಮತ್ತು ‘ರಾಡಿಸನ್ ಬ್ಲೂ ಪ್ಲಾಜಾ’ ಹೋಟೆಲ್‌ನಲ್ಲಿ ತಂಗಿದ್ದರು.

ಈ ಕಾರ್ಯಕ್ರಮವನ್ನು 3 ಕೋಟಿ ರೂ. ವೆಚ್ಚದಲ್ಲಿ ನಡೆಸಲು ರಾಜ್ಯ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿತ್ತು. ಮಾತ್ರವಲ್ಲದೆ, ಅಷ್ಟೂ ಹಣವನ್ನು ಕೇಂದ್ರ ಸರ್ಕಾರವೇ ಭರಿಸುವುದಾಗಿ ಭರವಸೆ ನೀಡಿತ್ತು. MoEF ಮತ್ತು NTCA ಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಆದರೂ, ಕಾರ್ಯಕ್ರಮದ ಒಟ್ಟು ವೆಚ್ಚ 6.33 ಕೋಟಿ ರೂ. ಏರಿಕೆಯಾಗಿತ್ತು.

ಕೇಂದ್ರದಿಂದ 3 ಕೋಟಿ ರೂ. ಬಿಡುಗಡೆ ಮಾಡಿದ್ದರೂ, ರಾಜ್ಯ ಅರಣ್ಯ ಇಲಾಖೆ ಮತ್ತು MoEF ನಡುವೆ ಸರಿಯಾದ ಸಂವಹನ ನಡೆಯದ ಕಾರಣ ಹೆಚ್ಚುವರಿ 3.33 ಕೋಟಿ ರೂ. ಬಾಕಿ ಉಳಿದಿದೆ.

MoEF ಮತ್ತು NTCA ನಡುವಿನ ಪತ್ರ ವ್ಯವಹಾರಗಳು ಕಾರ್ಯಕ್ರಮದ ವೆಚ್ಚ ಮೂಲತಃ 3 ಕೋಟಿ ರೂ. ಎಂದು ಸೂಚಿಸುತ್ತವೆ. ಆದರೆ, NTCA ಅಧಿಕಾರಿಗಳು ನೀಡಿದ ಸೂಚನೆಗಳು ಮತ್ತು ಪ್ರಧಾನ ಮಂತ್ರಿ ಕಾರ್ಯಕ್ರಮದ ಕಾರ್ಯಸೂಚಿ ಪ್ರಕಾರ, ಕೆಲವು ಹೆಚ್ಚುವರಿ ಚಟುವಟಿಕೆಗಳನ್ನು ನಡೆಸಲಾಗಿದೆ. ಆದ್ದರಿಂದ, ಕಾರ್ಯಕ್ರಮ ನಿರ್ವಹಣೆಯ ಹೊರಗುತ್ತಿಗೆ ಪಡೆದಿದ್ದ ‘ಈವೆಂಟ್ ಮ್ಯಾನೇಜ್‌ಮೆಂಟ್’ ಕಂಪನಿಯು ಹೆಚ್ಚುವರಿ ಮೊತ್ತದ ಪರಿಷ್ಕೃತ ಪಟ್ಟಿ ಸಲ್ಲಿಸಿತ್ತು. ಅದನ್ನು ವೀಡಿಯೊ ಕಾನ್ಫರೆನ್ಸ್‌ನಲ್ಲಿ ಎಲ್ಲ ಅಧಿಕಾರಿಗಳಿಗೆ ವಿತರಿಸಲಾಗಿತ್ತು.

ಈ ಬಾಕಿ ಮೊತ್ತವನ್ನು ಪಾವತಿಸುವಂತೆ ಕೋರಿ ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಪಿಸಿಸಿಎಫ್) ಎನ್‌ಟಿಸಿಎಗೆ 2023ರ ಸೆಪ್ಟೆಂಬರ್ 29ರಂದೇ ಪತ್ರವನ್ನೂ ಬರೆದಿದ್ದಾರೆ. ಆದರೆ, ಪತ್ರಕ್ಕೆ 2024ರ ಫೆಬ್ರವರಿ 12ರಂದು ಪ್ರತಿಕ್ರಿಯೆ ನೀಡಿರುವ ಎನ್‌ಟಿಸಿಎ, “ಪ್ರಧಾನಿ ಮೋದಿ ಉಳಿದುಕೊಂಡಿದ್ದ ಮೈಸೂರಿನ ರಾಡಿಸನ್ ಬ್ಲೂ ಪ್ಲಾಜಾಗೆ ಸಂಬಂಧಿಸಿದ ವೆಚ್ಚವನ್ನು ರಾಜ್ಯ ಸರ್ಕಾರ ಪಾವತಿ ಮಾಡಬೇಕು” ಎಂದು ಹೇಳಿದೆ.

ಇದಾದ ಬಳಿಕ, 2024ರ ಮಾರ್ಚ್‌ 22ರಂದು ಇಂದಿನ ಪಿಸಿಸಿಎಫ್ ಸುಭಾಷ್ ಕೆ. ಮಾಲ್ಖೇಡೆ ಅವರು ಎನ್‌ಟಿಸಿಎಗೆ ಮತ್ತೊಂದು ಪತ್ರ ಬರೆದಿದ್ದರು. ರಾಡಿಸನ್ ಬ್ಲೂ ಪ್ಲಾಜಾದಲ್ಲಿ ಪ್ರಧಾನ ಮಂತ್ರಿಯವರು ತಂಗಿದ್ದ ಹೋಟೆಲ್ ವೆಚ್ಚವನ್ನು ಪಾವತಿಸದೇ ಇರುವುದು ಸೇರಿದಂತೆ 80.6 ಲಕ್ಷ ರೂ. ಮೊತ್ತದ ಬಾಕಿ ಉಳಿದಿದೆ. ಈ ಬಾಕಿಗೆ ಸಂಬಂಧಿಸಿದಂತೆ ಕೇಂದ್ರದಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದ್ದಾರೆ.

ಇದೆಲ್ಲದರ ನಡುವೆ, ರಾಡಿಸನ್ ಬ್ಲೂ ಪ್ಲಾಜಾದ ಹಣಕಾಸು ಪ್ರಧಾನ ವ್ಯವಸ್ಥಾಪಕರು 2024ರ ಮೇ 21 ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ಅವರಿಗೆ ಪತ್ರ ಬರೆದಿದ್ದು, “ನಮ್ಮ ಹೋಟೆಲ್ ಸೇವೆಗಳನ್ನು ಬಳಸಿಕೊಂಡ 12 ತಿಂಗಳ ನಂತರವೂ ಬಿಲ್‌ಗಳನ್ನು ಪಾವತಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಬಿಲ್ ಪಾವತಿಯ ಬಗ್ಗೆ ಆಗ್ಗಾಗೆ ನೆನಪಿಸಿದರೂ, ವೆಚ್ಚವನ್ನು ಪಾವತಿಸಲಾಗಿಲ್ಲ. ಪಾವತಿಯಲ್ಲಿ ವಿಳಂಬವಾದ ಬಾಕಿ ಮೊತ್ತಕ್ಕೆ ವರ್ಷಕ್ಕೆ 18% ಬಡ್ಡಿಯನ್ನು ವಿಧಿಸಲಾಗುತ್ತದೆ. ಈ ಹೀಗಾಗಿ, ವಿಳಂಬದ ಬಡ್ಡಿಯಾಗಿ ಹೆಚ್ಚುವರಿ 12.09 ಲಕ್ಷ ರೂ. ಸೇರಿಸಬೇಕು” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

2024ರ ಜೂನ್‌ 1ರೊಳಗೆ ಬಾಕಿಯನ್ನು ಪಾವತಿಸದಿದ್ದಲ್ಲಿ, ಹೋಟೆಲ್ ಆಡಳಿತವು ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ. ಬಸವರಾಜು, “ಕೇಂದ್ರ ಸರ್ಕಾರದ ಕಾರ್ಯಕ್ರಮ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರವು ಹಣವನ್ನು ಮರುಪಾವತಿಸಲು ಕೇಂದ್ರದ ನಿರ್ದೇಶನವನ್ನು ತಿರಸ್ಕರಿಸಿದೆ” ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!